Wednesday, February 25, 2026
Menu

ಹೆಣ್ಣುಮಕ್ಕಳೆಂದು ಸದಾ ನಿಂದಿಸುತ್ತಿದ್ದ ತಂದೆಯ ಕೊಲೆಗೈದ ಪುತ್ರಿಯರು

ಕುಟುಂಬದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಡುತ್ತಿದ್ದ ಜೊತೆಗೆ ಹೆಣ್ಣು ಮಕ್ಕಳನ್ನು ನಿರಂತರ ಟೀಕಿಸುತ್ತಿದ್ದ ತಂದೆಯನ್ನು ಸೋದರಿಯರಿಬ್ಬರು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.

ನಿರಂತರ ತಾರತಮ್ಯ ಮತ್ತು ಅವಹೇಳನದಿಂದ ನೊಂದ ಮಗಳಂದಿರು ಅರುವತ್ತು ವರ್ಷದ ತಂದೆ ಮಲಗಿದ್ದಾಗ ಕೊಲೆ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ತಂದೆಯನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದರು, ರಾತ್ರಿ ತಾಯಿ ಸೇರಿದಂತೆ ಕುಟುಂಬದ ಉಳಿದ ಸದಸ್ಯರಿಗೆ ನಿದ್ರೆ ಮಾತ್ರೆ ಬೆರೆಸಿದ ಆಹಾರ ನೀಡಿದ್ದಾರೆ. ತಂದೆ ನಿದ್ರಿಸಿದಾಗ ಕಿರಿಯ ಮಗಳು ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡರೆ, ಹಿರಿಯ ಮಗಳು ಅಡುಗೆ ಮನೆಯ ಚಾಕುವಿನಿಂದ ತಂದೆಯ ಗಂಟಲು ಸೀಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಳಗಿನ ಜಾವ ಮನೆ ಮಂದಿಗೆ ಎಚ್ಚರವಾದಾಗ ತಂದೆಯ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಇಬ್ಬರು ಹೆಣ್ಣುಮಕ್ಕಳನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಾಗ ಅವರು ತಾವೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡರೆಂದು ಪೊಲೀಸರು ತಿಳಿಸಿದ್ದಾರೆ.

ಭೋಪಾ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 103 (ಕೊಲೆ) ಅಡಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮನೆಯಲ್ಲಿಯೇ ಇದ್ದಾರೆ, ಅವಿವಾಹಿತರಾಗಿದ್ದಾರೆ ಮತ್ತು ಯಾವುದೇ ಕೆಲಸ ಮಾಡುವುದಿಲ್ಲ ಎಂದು ತಂದೆ ನಿಂದಿಸುತ್ತಿದ್ದರು ಎಂದು ಹೆಣ್ಣು ಮಕ್ಕಳು ಹೇಳಿದ್ದಾರೆ. ಎರಡು ನಿದ್ರೆ ಮಾತ್ರೆಗಳ ಶೀಟ್‌ ಮತ್ತು ಕೊಲೆಗೆ ಬಳಸಲಾದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆ ಮಾಡುವಾಗ ಧರಿಸಿದ್ದ ರಕ್ತದ ಕಲೆಗಳ ಬಟ್ಟೆಗಳನ್ನು ಮೇವಿನ ರಾಶಿಯಲ್ಲಿ ಅಡಗಿಸಿಟ್ಟಿರುವುದು ಪತ್ತೆಯಾಗಿದೆ.

Related Posts

Leave a Reply

Your email address will not be published. Required fields are marked *