Tuesday, February 24, 2026
Menu

ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ: ಡಿಕೆ ಶಿವಕುಮಾರ್‌

ಸಚಿವರುಗಳನ್ನು ನಿಯಂತ್ರಣ ಮಾಡಬೇಕಿರುವುದು ಮುಖ್ಯಮಂತ್ರಿಗಳು. ಶಾಸಕರನ್ನು ಅವರೇ ನಿಯಂತ್ರಿಸಬೇಕು. ಪಕ್ಷದ ವಿಚಾರವಾಗಿ ದೆಹಲಿಗೆ ಮಾಹಿತಿ ನೀಡುವ ವಿಚಾರ ನಾನು ಮಾಡುತ್ತಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕುಮಾರಪಾರ್ಕ್ ಸರಕಾರಿ ನಿವಾಸ ಹಾಗೂ ಸುತ್ತೂರು ಸದನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ  ಪ್ರತಿಕ್ರಿಯೆ ನೀಡಿದರು.  ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವರ ಹೇಳಿಕೆಗಳ ಬಗ್ಗೆ ನೀವು ಮೌನವಾಗಿದ್ದೀರಿ ಎಂದು ಕೇಳಿದಾಗ  ಹೀಗೆ ಉತ್ತರಿಸಿದ್ದಾರೆ.

“ಮಹದೇವಪ್ಪ ಅವರು ಕೂಡ ನಮ್ಮ ಹೈಕಮಾಂಡ್ ಆಗಿರುವುದರಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುತ್ತಾರೆ ಎಂಬ ವಿಚಾರ, ಮಾಹಿತಿ ಅವರಿಗೆ ತಿಳಿದಿರಬೇಕು. ಹೀಗಾಗಿ ಅವರು ದಲಿತ ಸಿಎಂ ವಿಚಾರ ಪ್ರಸ್ತಾಪ ಮಾಡಿದ್ದಾರೆ” ಎಂದರು.

ರಾಜ್ಯ ರಾಜಕಾರಣದಲ್ಲಿ ಬದಲಾವಣೆ, ಅಧಿಕಾರ ಹಸ್ತಾಂತರ, ದಲಿತ ಸಿಎಂ ಬಗ್ಗೆ ಆಗುತ್ತಿರುವ ಚರ್ಚೆ ಕುರಿತು ಕೇಳಿದಾಗ, ಮಹದೇವಪ್ಪ ಅವರ ಹೇಳಿಕೆ ನೋಡಿದೆ. ಅದರ ಹೊರತಾಗಿ ಬೇರೆ ಯಾವುದೇ ಚರ್ಚೆ ಇಲ್ಲ. ಅವರಿಗೆ ಸಿಎಂ ಬದಲಾವಣೆ ಮಾಹಿತಿ ಇರಬಹುದು, ಆದರೆ ಆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ಹೈಕಮಾಂಡ್ ನಿಮ್ಮನ್ನು ಹಾಗೂ ಸಿಎಂ ಅವರನ್ನು ಕರೆದಿದ್ದಾರಾ ಎಂದು ಕೇಳಿದಾಗ, ನನಗೆ ಯಾವುದೇ ಕರೆ ಬಂದಿಲ್ಲ. ನಾನು ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳ ಮೇಲೆ ದೆಹಲಿಗೆ ಹೋಗಬೇಕಾಗಿದೆ. ನಗರಾಭಿವೃದ್ಧಿ ಇಲಾಖೆ ಯೋಜನೆಗೆ ಸಂಬಂಧಿಸಿದಂತೆ 1 ಲಕ್ಷ ಕೋಟಿ ರೂ. ನೀಡಲಾಗುತ್ತಿದ್ದು, ದೊಡ್ಡ ನಗರಗಳಿಗೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ನಮ್ಮ ನಗರಾಭಿವೃದ್ಧಿ ಸಚಿವರ ಬಳಿ ಚರ್ಚೆ ಮಾಡಿ, 2 ಹಾಗೂ 3ನೇ ಹಂತದ ನಗರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲು ಹೇಳುತ್ತೇನೆ ಎಂದರು.

ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ದೊಡ್ಡವರು” ಎಂದು ತಿಳಿಸಿದರು. ದೆಹಲಿಗೆ ಹೋಗುತ್ತೀರಾ, ಹೈಕಮಾಂಡ್ ನಾಯಕರು ಮೊದಲ ಬಾರಿಗೆ ನಿಮ್ಮನ್ನು ಕರೆಸಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ಸಧ್ಯಕ್ಕೆ ನಾನು ಇಲ್ಲಿ ಕುಮಾರಕೃಪದಲ್ಲಿ ಇದ್ದೇನೆ” ಎಂದು  ಡಿಸಿಎಂ ಉತ್ತರಿಸಿದರು.

ಸತೀಶ್ ಜಾರಕಿಹೊಳಿ ಅವರು ಗೊಂದಲ ಬಗೆಹರಿಯುವಂತೆ ಕಾಣುತ್ತಿದೆ ಎಂದು ಕೇಳಿದಾಗ, “ನಾನು ಪತ್ರಿಕೆಯಲ್ಲಿ ಈ ಬಗ್ಗೆ ನೋಡಿದೆ, ಇದರ ಹೊರತಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ” ಎಂದು ಸ್ಪಷ್ಟಪಡಿಸಿದರು. ಜಾರಕಿಹೊಳಿ ಅವರು ನಿಮ್ಮ ಜತೆ ಚರ್ಚೆ ಮಾಡಿದ್ದಾರಾ ಎಂದು ಕೇಳಿದಾಗ, “ನಾನು, ಸತೀಶ್ ಜಾರಕಿಹೊಳಿ ಸಮಾನ ಮನಸ್ಕರು, ಪಕ್ಷದ ವಿಚಾರವಾಗಿ ವಾರಕ್ಕೊಮ್ಮೆ ಚರ್ಚೆ ಮಾಡುತ್ತೇವೆ. ನಮ್ಮ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲ ಯೋಜನೆ ತಯಾರು ಮಾಡುತ್ತಿ ದ್ದೇವೆ” ಎಂದು ತಿಳಿಸಿದರು.

ನೂತನ ಶಾಸಕರು ಕನಿಷ್ಠ 5 ಮಂತ್ರಿ ಸ್ಥಾನವನ್ನು ಹೊಸಬರಿಗೆ ನೀಡಬೇಕು ಎಂದು ಹೈಕಮಾಂಡ್ ಗೆ ಬರೆದಿರುವ ಪತ್ರದ ಬಗ್ಗೆ ಕೇಳಿದಾಗ, “ಈ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ನನಗೆ ಅವರ ಪತ್ರ ತಲುಪಿಲ್ಲ. ಎಲ್ಲರಿಗೂ ಮಂತ್ರಿಯಾಗುವ ಆಸೆ ಇರು ತ್ತದೆ. ಮೋದಿ ಅವರು ಶಾಸಕರಾಗದೇ ಸಿಎಂ ಆಗಲಿಲ್ಲವೇ. ಅವರು ಕೇಳುವುದರಲ್ಲಿ ತಪ್ಪೇನಿಲ್ಲ. ಮೊದಲ ಬಾರಿಗೆ ಶಾಸಕರಾದಾಗ ಮಂತ್ರಿಯಾದವರಲ್ಲಿ ನಾನೂ ಒಬ್ಬ. ಹೊಸ ಪೀಳಿಗೆ ಬೆಳೆಯಬೇಕು. ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ? ನಾನು ಸಚಿವನಾಗಿ 36 ವರ್ಷವಾಗಿದೆ. ಹೊಸ ಪೀಳಿಗೆ, ಹೊಸ ಆಲೋಚನೆಗಳು ಬರಬೇಕು. ಹೊಸಬರು ಸಂಪುಟಕ್ಕೆ ಬರಬೇಕು ಎಂದು ಬೆಂಬಲಿಸುವವರಲ್ಲಿ ನಾನೂ ಇದ್ದೇನೆ. ಹೊಸಬರನ್ನು ನಾವು ತಯಾರು ಮಾಡಬೇಕಲ್ಲ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ” ಎಂದರು.

ನಿಮ್ಮ ಮಂತ್ರಿಮಂಡಲದಲ್ಲಿ ಹೊಸ ಶಾಸಕರು ಸೇರ್ಪಡೆಯಾಗಲಿದ್ದಾರಾ ಎಂದು ಕೇಳಿದಾಗ, “ನಾನು ಮಂತ್ರಿಮಂಡಲ ಮಾಡುತ್ತೇನೆ ಎಂದು ಹೇಳಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರು ಸಂಚಿವ ಸಂಪುಟ ವಿಸ್ತರಣೆ ಮಾಡುವ ಕಾರಣಕ್ಕೆ ಕೆಲವರು ಪತ್ರ ಬರೆಯುತ್ತಾರೆ, ದೆಹಲಿಗೆ ಹೋಗುತ್ತಾರೆ, ಹೊರಗಡೆ ಹೋಗುತ್ತಾರೆ. ಅವರಿಗೂ ಆಸೆ ಇರುತ್ತದೆ” ಎಂದು ತಿಳಿಸಿದರು.

ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ನಮ್ಮ ಸರ್ಕಾರ 5065 ಕೋಟಿರೂ. ವೆಚ್ಚ ಮಾಡುತ್ತಿದ್ದು, ಸಿಎಂ 2 ಸಾವಿರ ಕೋಟಿ ಅನುದಾನ ನೀಡಿದ್ದಾರೆ. 75% ಕಾಮಗಾರಿಗಳು ಮುಕ್ತಾಯವಾಗಿದ್ದು, ಏಪ್ರಿಲ್ ತಿಂಗಳಾಂತ್ಯದ ವೇಳೆಗೆ ಎಲ್ಲವೂ ಮುಕ್ತಾಯಗೊಳ್ಳ ಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾಮಗಾರಿಯಲ್ಲಿ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದು ಹೇಳಿದ್ದೇನೆ. 10 ಲಕ್ಷ ಇ ಖಾತಾ ದಾಖಲೆ ವಿತರಣೆ ಕಾರ್ಯಕ್ರಮ ಮಾಡಲಾಗುವುದು. ಇನ್ನು 30 ಸಾವಿರ ಬೀದಿವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ಅವರ ವ್ಯಾಪಾರಕ್ಕೆ ವಾಹನ ನೀಡುವ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಖಾಲಿ ಹುದ್ದೆಗಳ ಭರ್ತಿಗೆ ಬಿಜೆಪಿಯವರ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಅವರು ಯಾಕೆ ಮಾಡಲಿಲ್ಲ? ಶೀಘ್ರದಲ್ಲೇ ನಾವು ಹುದ್ದೆಗಳ ನೇಮಕಾತಿ ಮಾಡುತ್ತೇವೆ. ನಿರುದ್ಯೋಗಿ ಯುವಕರಿಗೆ ತೊಂದರೆಯಾಗಬಾರದು ಎಂದು ಯುವನಿಧಿ ಯೋಜನೆ ನೀಡಿದ್ದೇವೆ. ಒಳ ಮೀಸಲಾತಿ ಸೇರಿದಂತೆ ಅನೇಕ ವಿಚಾರವಾಗಿ ವಿಳಂಬವಾಗಿದೆ” ಎಂದರು.

ಬಜೆಟ್ ನಲ್ಲಿ ಏನೆಲ್ಲಾ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಕೇಳಿದಾಗ, “ಸಿಎಂ ಆಗಲಿ, ಮಂತ್ರಿಗಳಾಗಲಿ ಬಜೆಟ್ ಯಾವ ರೀತಿ ಇರುತ್ತದೆ ಎಂದು ಮುಂಚಿತವಾಗಿ ಮುನ್ಸೂಚನೆ ನೀಡಲು ಆಗುವುದಿಲ್ಲ. ಅದೇ ಬಜೆಟ್ ನ ಮಹತ್ವ. ಇಲ್ಲಿ ಗೌಪ್ಯತೆ ಇರಬೇಕು. ಇದೇ ಕಾರಣಕ್ಕೆ ಸಿಎಂ ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗುವುದು. ರಾಜ್ಯದ ಹಿತದ ವಿಚಾರದಲ್ಲಿ ಸಾಕಷ್ಟು ಸವಾಲುಗಳಿವೆ. ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡಿಲ್ಲ. ಈ ಮಧ್ಯೆ ಮುಖ್ಯ ಮಂತ್ರಿಗಳೇ ಹಣಕಾಸು ಸಚಿವರಾಗಿರುವುದರಿಂದ ಅವರು ಯಾವ ರೀತಿ ಬಜೆಟ್ ಮಂಡಿಸುತ್ತಾರೆ ನೋಡೋಣ” ಎಂದು ತಿಳಿಸಿದರು.

 

Related Posts

Leave a Reply

Your email address will not be published. Required fields are marked *