ಬಾಗಲಕೋಟೆಯ ಜಮಖಂಡಿ ತಾಲೂಕಿನ ಕಟ್ಟೆ ಕೆರೆ ಸಮೀಪ ಮಧ್ಯರಾತ್ರಿ ನಡೆದ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕಬ್ಬಿನ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಏಕಾಏಕಿ ತುಂಡಾಗಿ ಉರುಳಿಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.
ಮೃತರನ್ನು ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಹಾಗೂ ರೇಖಾ ಭೂಕೆ ಎಂದು ಗುರುತಿಸಲಾಗಿದೆ. ಮೃತರು ಮಹಾರಾಷ್ಟ್ರದ ಯುವತ್ಮಾಳ್ ಜಿಲ್ಲೆಯ ಬೂಸಾದ ಗುಪವಾಡಿ ನಿವಾಸಿಗಳಾಗಿದ್ದು, ಕಬ್ಬಿನ ಕಟಾವು ಕೆಲಸಕ್ಕಾಗಿ ಜಮಖಂಡಿ ಕಡೆಗೆ ಬಂದಿದ್ದರು. ಅಪಘಾತದ ತೀವ್ರತೆಗೆ ನಾಲ್ವರೂ ಸ್ಥಳದಲ್ಲೇ ಅಸು ನೀಗಿದ್ದಾರೆ. ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ಸಿದ್ಧಾರ್ಥ್ ಗೋಯಲ್ , ನಸುಕಿನ ಜಾವ 2 ಗಂಟೆಗೆ ಅಪಘಾತವಾಗಿದೆ. ಮಹಾರಾಷ್ಟ್ರದಿಂದ ಕಬ್ಬು ಕಾಟವು ಮಾಡಲು ಬಂದಿದ್ದ ಕೂಲಿ ಕಾರ್ಮಿಕರು ವಾಪಸ್ ಊರಿಗೆ ಪ್ರಯಾಣ ಮಾಡುತ್ತಿದ್ದ ಜೋಡಿ ಟ್ರಾಲಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದವು. ಒಂದು ಟ್ರಾಲಿ ಮೇಲೆ ಮತ್ತೊಂದು ಟ್ರಾಲಿ ಮುಗುಚಿ ಬಿದ್ದಿದೆ. ನಾಲ್ವರು ಅಸು ನೀಗಿದ್ದಾರೆ ಎಂದು ತಿಳಿಸಿದ್ದಾರೆ.
ಪತಿ ಸುಸೈಡ್ ಮಾಡಿಕೊಂಡ ವಾರದಲ್ಲೇ ಪತ್ನಿ ಆತ್ಮಹತ್ಯೆ
ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೇ ಪತ್ನಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತಿ ಜಗದೀಶ್ ಕೆಎಸ್ಐಎಸ್ಎಫ್ ಶಿವಮೊಗ್ಗ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 14ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪತಿ ಮೃತಪಟ್ಟು ವಾರ ಕಳೆಯುವುದರೊಳಗೆ ಸ್ವಾತಿ ಪೊಲೀಸ್ ಸಿಬ್ಬಂದಿಯೊಬ್ಬರು ತನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾತಿ ಸಾಯುವ ಮೊದಲು ತಾಯಿಗೆ ಮೆಸೇಜ್ ಮಾಡಿದ್ದು, ಅದರಲ್ಲಿ ಮೋಹನ್ ಎಂಬವರ ಹೆಸರನ್ನು ಉಲ್ಲೇಖಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಮೋಹನ್ ಎಂಬ ಪೊಲೀಸ್ ತನಗೆ ಮೆಸೇಜ್ ಮಾಡಿದ್ದರು. ಬ್ಲಾಕ್ ಮಾಡಿದ್ದಕ್ಕೆ, ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡಬೇಡಿ ಎಂದು ತಿಳಿಸಿದ್ದಾಗಿ ಹೇಳಲಾಗುತ್ತಿದೆ.


