ವಿಜಯಪುರದಲ್ಲಿ ಕಳೆದ ತಿಂಗಳು ಪತ್ನಿಯನ್ನು ಕೊಂದು ಮನೆಯಲ್ಲೇ ಹೂತು ಹಾಕಿದ್ದ ಪ್ರಕರಣದಲ್ಲಿ ಕೊಲೆಗಟುಕ ಪತಿ ಪತ್ನಿ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡುವ ನಾಟಕವಾಡಿದ್ದ ಎಂಬ ವಿಚಾರ ಬಹಿರಂಗಗೊಂಡಿದೆ.
ಕೊಲೆ ಆರೋಪಿ ಪತಿಯನ್ನು ಪ್ರಭು ರತ್ನಾಕರ್ (46) ಪತ್ನಿ ಸರೋಜಿನಿ ರತ್ನಾಕರ (45) ಎಂಬಾಕೆಯನ್ನು ಕೊಲೆ ಮಾಡಿದ್ದ. ಪತ್ನಿ ಸರೋಜಿನಿ ಹೆಸರಲ್ಲಿ ಪ್ರಭು ತುಂಬಾ ಸಾಲ ಮಾಡಿದ್ದ. ಸಾಲದ ವಿಷಯವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯು ತ್ತಿತ್ತು ಎಂದು ಹೇಳಲಾಗಿದೆ.
ಜ.23ರಂದು ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಜ.24ರಂದು ಸರೋಜಿನಿ ತಲೆಗೆ ಆತ ಹಾರೆಯಿಂದ ಹೊಡೆದು ಕೊಲೆ ಮಾಡಿ ಶವವನ್ನು ಮನೆಯ ಆವರಣದಲ್ಲಿ ಗಿಡ ನೆಡುವ ಜಾಗದಲ್ಲಿ ಹೂತುಹಾಕಿದ್ದ. ನನ್ನ ಹೆಂಡತಿ ಮಾರುಕಟ್ಟೆಗೆ ಹೋದವಳು ಮರಳಿ ಮನೆಗೆ ಬಂದಿಲ್ಲ ಎಂದು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ.
ಆರೋಪಿಯು ಸರೋಜಿನಿ ಕುಟುಂಬಸ್ಥರ ಜೊತೆಗೆ ಪತ್ನಿಯನ್ನು ಹುಡುಕುವ ನಾಟಕವಾಡಿದ್ದ. 24 ದಿನಗಳ ನಂತರ ಪೊಲೀಸರ ತನಿಖೆಯಲ್ಲಿ ಆತನ ನಾಟಕ ಬಯಲಾಗಿದೆ. ಆರೋಪಿ ಕಸ್ಟಡಿಯಲ್ಲಿದ್ದು, ಕಾನೂನು ಪ್ರಕಾರ ಪೊಲೀಸರು ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


