Thursday, February 19, 2026
Menu

ಹಾಸನ ಕಾರ್ಖಾನೆಯ ಸಂಪ್‌ನಲ್ಲಿ ಉದ್ಯೋಗಿಯ ಮೃತದೇಹ ಪತ್ತೆ

ಹಾಸನ ಹೊರವಲಯದ ಹನುಮಂತಪುರ ಬಳಿಯ ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಅಲ್ಲಿನ ಉದ್ಯೋಗಿ ಯುವಕನ ಮೃತದೇಹ ಪತ್ತೆಯಾಗಿದೆ. ಕಳೆದ 6 ತಿಂಗಳಿನಿಂದ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಪುನೀತ್ (27) ಮೃತ ಯುವಕ.

ಬುಧವಾರ ಸಮವಸ್ತ್ರ ಧರಿಸಿ ಪುನೀತ್‌ ಕೆಲಸಕ್ಕೆಂದು ಹೋಗಿದ್ದ. ರಾತ್ರಿ ಪುನೀತ್ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದು ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನದ ವೇಳೆ ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಪುನೀತ್ ಮೃತದೇಹ ಪತ್ತೆಯಾಗಿದೆ. ಆದರೂ ಮಾಹಿತಿ ನೀಡಿಲ್ಲ ಎಂದು ಕಾರ್ಖಾನೆ ಮೇಲಾಧಿಕಾರಿಗಳ ವಿರುದ್ಧ ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ.

ಪುನೀತ್ ಸಮವಸ್ತ್ರದಲ್ಲೇ ಕೆಲಸಕ್ಕೆ ಹೋಗಿದ್ದು, ಮೃತಪಟ್ಟ ಬಳಿಕ ಸಮವಸ್ತ್ರ ಬದಲಿಸಲಾಗಿದೆ. ಪುನೀತ್ ಅವರದ್ದು ಸಹಜ ಸಾವಲ್ಲ, ಕೊಲೆ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ. ಇಲ್ಲಿ ಶೇ.80ಕ್ಕೂ ಹೆಚ್ಚು ಹೊರರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಯಲ್ಲಿ ಪದೇ ಪದೆ ಸಾವುಗಳು ಸಂಭವಿಸುತ್ತಿದ್ದು, ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಪುನೀತ್‌ಗೆ ಯಾವುದೇ ದುಶ್ಚಟಗಳು ಇರಲಿಲ್ಲ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *