Menu

ಆರ್ಥಿಕ ನಿರ್ಬಂಧ ತೆರವು ಮನಸ್ಸಿದ್ದರೆ ಅಮೆರಿಕದೊಂದಿಗೆ ಪರಮಾಣು ಒಪ್ಪಂದಕ್ಕೆ ಸಿದ್ಧವೆಂದ ಇರಾನ್‌

ಅಮೆರಿಕವು ಆರ್ಥಿಕ ನಿರ್ಬಂಧ ತೆರವು ವಿಚಾರದಲ್ಲಿ ಮುಕ್ತ ಮನಸ್ಸು ಹೊಂದಿದ್ದರೆ, ಪರಮಾಣು ಒಪ್ಪಂದ ಅಂತಿಮಗೊಳಿಸುವ ನಿಟ್ಟಿನಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಇರಾನ್ ತಿಳಿಸಿದೆ.

ಇರಾನ್‌ನ ಉಪ ವಿದೇಶಾಂಗ ಸಚಿವ ಮಜಿದ್ ತಖ್ತ್ ರವಾಂಚಿ ‘ಬಿಬಿಸಿ’ಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. ಈ ಮಾತುಕತೆ ಪ್ರಕ್ರಿಯೆ ಸ್ಥಗಿತಕ್ಕೆ ಇರಾನ್ ಕಾರಣ ಎಂದು ಅಮೆರಿಕದ ಅಧಿಕಾರಿಗಳು ಸದಾ ಆರೋಪಿಸುತ್ತಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, “ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಹೊಂದಿದ್ದರೂ, ಇರಾನ್ ಜೊತೆಗಿನ ವ್ಯವಹಾರ ಕಠಿಣವಾಗಿದೆ” ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಇರಾನ್‌ ಸಚಿವ ರವಾಂಚಿ “ಒಪ್ಪಂದ ಮಾಡಿಕೊಳ್ಳುವ ಇಚ್ಛೆಯನ್ನು ಸಾಬೀತುಪಡಿಸಬೇಕಿರುವುದು ಅಮೆರಿಕ ಹೊರತು ಇರಾನ್ ಅಲ್ಲ. ಚೆಂಡು ಅಮೆರಿಕದ ಅಂಗಳದಲ್ಲಿದೆ. ಅವರ ನಡೆ ಪ್ರಾಮಾಣಿಕವಾಗಿದ್ದರೆ ನಾವು ಒಪ್ಪಂದದ ಹಾದಿಗೆ ಮರಳಲಿದ್ದೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಪರಮಾಣು ಕಾರ್ಯಕ್ರಮವನ್ನು ತಡೆಯುವ ಒಪ್ಪಂದ ವಿಫಲವಾದರೆ, ಇರಾನ್ ಮೇಲೆ ದಾಳಿ ನಡೆಸುವುದಾಗಿ ಮತ್ತು ಕೊಲ್ಲಿ ಪ್ರಾಂತ್ಯದಲ್ಲಿ ಅಮೆರಿಕ ಮಿಲಿಟರಿಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದುಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಫೆಬ್ರವರಿ ಆರಂಭದಲ್ಲಿ ಒಮನ್‌ನಲ್ಲಿ ಉಭಯ ದೇಶಗಳ ನಡುವೆ ಪರೋಕ್ಷ ಮಾತುಕತೆ ನಡೆದಿತ್ತು. ಜಿನೀವಾದಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದ್ದು, ಪ್ರಕ್ರಿಯೆ ಸಕಾರಾತ್ಮಕ ದಿಕ್ಕಿನಲ್ಲಿದೆ ಎಂದು ರವಾಂಚಿ ತಿಳಿಸಿದ್ದಾರೆ.

ಶೇ. 60 ಶುದ್ಧೀಕರಿಸಿದ ಯುರೇನಿಯಂ ದಾಸ್ತಾನನ್ನು ಕಡಿಮೆ ಮಾಡಲು ಇರಾನ್ ಮುಂದಾಗಿರುವುದು ರಾಜಿ ಸಂಧಾನಕ್ಕೆ ಸಿದ್ಧವಿರುವುದರ ಸಂಕೇತ. ಈ ಮಟ್ಟದ ಶುದ್ಧೀಕರಣವು ಅಣ್ವಸ್ತ್ರ ತಯಾರಿಕೆಗೆ ಅತ್ಯಂತ ಹತ್ತಿರವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಸೃಷ್ಟಿಸಿತ್ತು. “ನಿರ್ಬಂಧಗಳ ಬಗ್ಗೆ ಚರ್ಚಿಸಲು ಅವರು ಸಿದ್ಧರಿದ್ದರೆ ಮಾತ್ರ ನಾವು ನಮ್ಮ ಕಾರ್ಯಕ್ರಮದ ಬಗ್ಗೆ ಚರ್ಚಿಸುತ್ತೇವೆ,” ಎಂದು  ಸ್ಪಷ್ಟಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *