Menu

ನೂರು ಜನ ಗೋಬ್ಯಾಕ್ ಎಂದಾಕ್ಷಣ ಜಗ್ಗುವ ಮಗ ನಾನಲ್ಲ, ಕಮ್ ಬ್ಯಾಕ್ ಎನ್ನುವವರೇ ಹೆಚ್ಚಿದ್ದಾರೆ: ಡಿಕೆ ಶಿವಕುಮಾರ್‌

ಕೆಲವು ಯುವಕರು ಪ್ರೀತಿಯಿಂದ ಗೋಬ್ಯಾಕ್ ಎಂದು ಹೇಳುತ್ತಿದ್ದೀರಿ. ನಿಮ್ಮ ಗೋಬ್ಯಾಕ್ ಅನ್ನು ಬಹಳ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ನೂರು ಜನ ಗೋಬ್ಯಾಕ್ ಎಂದಾಕ್ಷಣ ಜಗ್ಗುವ ಮಗ ನಾನಲ್ಲ, ಕಮ್ ಬ್ಯಾಕ್ ಎನ್ನುವವರೇ ಹೆಚ್ಚಿದ್ದಾರೆ. ಆದರೆ ವೇದಿಕೆ ಮೇಲಿರುವ ರಾಘವೇಂದ್ರ ಅವರು, ರೇಣುಕಾಚಾರ್ಯ ಅವರು, ರಾಜು ಅವರು ಡಿಕೆ ಕಮ್ ಬ್ಯಾಕ್ ಎಂದು ಕರೆದಿದ್ದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ಈ ನೂರು ಜನರಿಗೆ ಜಗ್ಗುವ ಮಗ ನಾನಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮಿತಿಯ ಭಾಯಗಡ್- ಸೊರಗೊಂಡನಕೊಪ್ಪದಲ್ಲಿ  ಸಂತ ಸೇವಾಲಾಲ್ ರವರ 287ನೇ  ಜಯಂತಿ ಕಾರ್ಯಕರಮದಲ್ಲಿ ಅವರು  ಮಾತನಾಡಿದರು.

“ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮಲ್ಲಿ ರಾಜಕಾರಣ ಇರಬಾರದು ಎಂಬುದು ನನ್ನ ತತ್ವ. ಲಂಬಾಣಿಗಳು  ನಾನು ಕನಕಪುರದಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ, 1.23 ಲಕ್ಷ ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿದರು. ನನ್ನ ಕ್ಷೇತ್ರದಲ್ಲಿರುವ ನೂರಕ್ಕೆ ನೂರರಷ್ಟು ಲಂಬಾಣಿ ಸಮುದಾಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನ ನನಗೆ ಮತ ನೀಡಿದ ಇತಿಹಾಸವಿದೆ. ಆ ಪ್ರೀತಿಯಿಂದ ನಾನಿಲ್ಲಿಗೆ ಬಂದಿದ್ದೇನೆ. ರಾಜು  ನನ್ನ ಆತ್ಮೀಯ ಸ್ನೇಹಿತರು. ನೀವು ಅವರ ಸ್ನೇಹಿತರು. ಹೋರಾಟ ಮಾಡುವುದನ್ನು ತಪ್ಪು ಎಂದು ನಾನು ಹೇಳುವುದಿಲ್ಲ. ಯಾವ ಸಂದರ್ಭ, ಯಾವ ರೀತಿ ಹೋರಾಟ ಮಾಡಬೇಕೋ ಅದೇ ರೀತಿ ಮಾಡಬೇಕು” ಎಂದು ಕಿವಿಮಾತು ಹೇಳಿದರು.

“ಧಾರ್ಮಿಕ ಕಾರ್ಯಕ್ರಮದಲ್ಲಿ ಹೋರಾಟ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಯಾರೇ ಗೋಬ್ಯಾಕ್ ಎಂದರೂ ಈ ಡಿಕೆ ಶಿವಕುಮಾರ್ ಜಗ್ಗುವ ಮಗ ಅಲ್ಲ. ಈ ವಿಚಾರ ರಾಜು ಅವರಿಗೂ ಗೊತ್ತಿದೆ. ನಾನು, ವೈದ್ಯ , ಬೋಸರಾಜು , ರುದ್ರಪ್ಪ ಲಮಾಣಿ , ಸಂಸದರು, ಗಣ್ಯರು ನಿಮ್ಮ ಜತೆಯಲ್ಲಿದ್ದೇವೆ.  ಚುನಾವಣೆ ಇದ್ದಾಗ ರಾಜಕಾರಣ ಮಾಡೋಣ. ಗೋಬ್ಯಾಕ್ ಎನ್ನುವವರಿಗಿಂತ ಕಮ್ ಬ್ಯಾಕ್ ಎನ್ನುವ ಜನ ಹೆಚ್ಚಾಗಿದ್ದಾರೆ” ಎಂದು ತಿಳಿಸಿದರು.

“ಬಂಜಾರ ಸಮುದಾಯಕ್ಕೆ ಅನ್ಯಾಯವಾದಾಗ ಹೋರಾಟ ಮಾಡಿದ್ದು ಈ ಡಿಕೆ ಶಿವಕುಮಾರ್. ಕೆ.ಟಿ ರಾಥೋಡ್ ಅವರ ಕಾಲದಲ್ಲಿ ನಿಮ್ಮನ್ನು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿಸಿ, ತಾಂಡ ಅಭಿವೃದ್ಧಿ ನಿಗಮ ಸ್ಥಾಪಿಸಿ, ನಿಮ್ಮ ಬದುಕಿಗೆ ಹೊಸ ರೂಪ ನೀಡಿದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂಬ ಇತಿಹಾಸ ಮರೆಯಲು ಸಾಧ್ಯವಿಲ್ಲ. ಬಹಳ ಪ್ರೀತಿ ಅಭಿಮಾನದಿಂದ, ನನ್ನ ಪ್ರೀತಿಸಿದ, ಬೆಂಬಲಿಸಿದ ಜನ ಲಂಬಾಣಿ ಜನರ ಜತೆ ಇದ್ದೇನೆ ಎಂದು ಇಲ್ಲಿಗೆ ಬಂದಿದ್ದೇನೆ” ಎಂದರು.

“ ಸತ್ಯ, ನಿಷ್ಠೆ, ಸಾಮಾಜಿಕ ನ್ಯಾಯ, ಸಾಮರಸ್ಯ, ಸೌಹಾರ್ದತೆ ಹಾಗೂ ಸಮಾನತೆ ಸಂದೇಶ ಸಾರಿದ ಮಹಾನ್ ವ್ಯಕ್ತಿ ಸಂತ ಸೇವಾಲಾಲರು. ಮನುಷ್ಯನಿಗೆ ಧರ್ಮ ಬೇಕು, ಧರ್ಮಕ್ಕೆ ದಯೆ ಬೇಕು. ಈ ಸಂದರ್ಭದಲ್ಲಿ ದಯವಿಲ್ಲದ ಧರ್ಮವಾವುದಯ್ಯಾ?, ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಎಂಬ ಬಸವಣ್ಣನವರ ವಚನ ಸ್ಮರಿಸಬೇಕು. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ ಎಂದು ಹೇಳಿದರು.

ಕಾರ್ಯಕ್ರಮದ ಬಳಿಕ ಮಾಧ್ಯಮಗಳು ಬಿಜೆಪಿಯವರ ಪ್ರತಿಭಟನೆ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯಕ್ಕೂ ನ್ಯಾಯ ಕೊಡಿಸಿದೆ. ಒಳಮೀಸಲಾತಿ ವಿಚಾರದಲ್ಲಿ 6-6-5 ಸೂತ್ರ ನೀಡಿದ್ದೇವೆ. ಬಿಜೆಪಿಯವರಿಗೆ ಇದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಒಂದು ನೂರು ಜನರ ಕೈಯಲ್ಲಿ ಈ ರೀತಿಯ ಕೆಲಸ ಮಾಡಿಸುತ್ತಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದರು‌.

“ನೂರು ಜನಕ್ಕೆಲ್ಲಾ ರಾಜಕಾರಣದಲ್ಲಿ ಹೆದರಿಕೊಳ್ಳಲು ಆಗುತ್ತದೆಯೇ? ಈ ರೀತಿ ಮಾಡುತ್ತಾರೆ ಎಂದು ಇಲ್ಲಿಗೆ ಬರುವಾಗಲೇ ತಿಳಿದಿತ್ತು. ಲಂಬಾಣಿ ಸಮುದಾಯದ ಶೇ‌ 90 ರಷ್ಟು ಜನರು ಒಳ್ಳೆಯವರು. ಈ ರೀತಿಯ 10 ಪರ್ಸೆಂಟ್ ಜನ ಇರುತ್ತಾರೆ. ಅವರಿಗೆ ರಾಜಕಾರಣ ಮುಖ್ಯ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ನಾವು ಈ ಸಮುದಾಯದ ಬದುಕಿನ ಏಳಿಗೆಗಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.

ಬಂಜಾರ ಸಮುದಾಯಕ್ಕೆ ಎಸ್.ಸಿ ಸ್ಥಾನಮಾನ, ಅಭಿವೃದ್ಧಿ ನಿಗಮ ಮಾಡಿದ್ದು ಕಾಂಗ್ರೆಸ್ ಪಕ್ಷ. ತಾಂಡಾಗಳಿಗೆ ಹಕ್ಕು ಪತ್ರ ನೀಡಿದ್ದು ನಾವು. ಒಳ್ಳೆಯ ಜನರ ಪರವಾಗಿ ನಾವು ಎಂದಿಗೂ ಇರುತ್ತೇವೆ” ಎಂದರು. ದೆಹಲಿ ಭೇಟಿ ಫಲಪ್ರದವಾಯಿತೇ ಎಂದು ಕೇಳಿದಾಗ, “ಕಾಲ ಉತ್ತರ ನೀಡುತ್ತದೆ” ಎಂದು ಪ್ರತಿಕ್ರಿಯಿಸಿದರು.

Related Posts

Leave a Reply

Your email address will not be published. Required fields are marked *