ಕಾಂಗ್ರೆಸ್ ಪಕ್ಷವು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ಗೊತ್ತುವಳಿ ನೋಟಿಸ್ ಅನ್ನು ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಅವರಿಗೆ ಸಲ್ಲಿಸಿದೆ. ಟಿಎಂಸಿ ನಾಯಕರು ಈ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿಲ್ಲ.
ನಿಯಮ 94ಸಿ ಅಡಿಯಲ್ಲಿ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನೋಟಿಸ್ ಸಲ್ಲಿಸಿದೆ. ನೋಟಿಸ್ ಅನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ. ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯದಲ್ಲಿ ಭಾರತೀಯ ಸಂವಿಧಾನದ 94(ಸಿ) ವಿಧಿಯ ನಿಬಂಧನೆಗಳ ಅಡಿಯಲ್ಲಿ ಓಂ ಬಿರ್ಲಾ ಅವರನ್ನು ಲೋಕಸಭಾ ಸ್ಪೀಕರ್ ಹುದ್ದೆಯಿಂದ ತೆಗೆದುಹಾಕುವ ಪ್ರಸ್ತಾವನೆಯ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಓಂ ಬಿರ್ಲಾ ಲೋಕಸಭೆಯ ವ್ಯವಹಾರವನ್ನು ಏಕಪಕ್ಷೀಯವಾಗಿ ನಡೆಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ. ವಿರೋಧ ಪಕ್ಷಗಳ ನಾಯಕರಿಗೆ ಮಾತನಾಡಲು ಅನುಮತಿ ನಿರಾಕರಿಸಲಾಗಿದೆ, ಈ ಮೂಲಕ ಸಂಸತ್ತಿನಲ್ಲಿ ಅವರ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕನ್ನು ದಮನಿಸಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಇಂಡಿ ನಾಯಕರೊಂದಿಗೆ ಸಭೆ ನಡೆಸಿದರು. ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಮೊದಲು ನಾಲ್ಕು ಬೇಡಿಕೆಗಳನ್ನು ಲಿಖಿತವಾಗಿ ಸ್ಪೀಕರ್ಗೆ ಸಲ್ಲಿಸಿ, ಅವುಗಳನ್ನು ಚರ್ಚಿಸಲು ಮೂರು ದಿನಗಳ ಕಾಲಾವಕಾಶ ನೀಡಿ, ಬೇಡಿಕೆಗಳು ಈಡೇರದಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ ಟಿಎಂಸಿ ಸಹಿ ಹಾಕಿಲ್ಲ ಎಂದೂ ತಿಳಿಸಿದ್ದಾರೆ.


