ಬೆಂಗಳೂರು ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 9 ಲಕ್ಷ ಇ ಖಾತೆಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ ಸ್ಪೆಷಲ್ ಇ ಖಾತಾ ಅಭಿಯಾನ ಪ್ರಾರಂಭ ಮಾಡಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಖಾತೆ ಪರಿವರ್ತನೆ ಮಾಡಿಸಿಕೊಂಡವರಿಗೆ ಖಾತಾ ಪತ್ರ ವಿತರಣೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದರು.
“ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನ. ನಮ್ಮ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ – ಖಾತೆ ವ್ಯವಸ್ಥೆ ತರಬೇಕು ಎಂದು ಹೊರಟಿದ್ದೇವೆ. ಈ ಮೂಲಕ ತೆರಿಗೆ ಸೋರಿಕೆ ತಡೆಯಬೇಕು ಎಂಬುದು ನಮ್ಮ ಉದ್ದೇಶ. ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ಕಾವೇರಿ ಸಾಫ್ಟ್ ವೇರ್ ತಂದು ಇದನ್ನು ಪರಶೀಲನೆ ಮಾಡಲು ಅವಕಾಶ ನೀಡಿದ್ದೇವೆ. ಇದರ ಜೊತೆಗೆ ಪ್ರತಿಯೊಂದು ದಾಖಲೆಗಳು ಆಧಾರ್ ಜೊತೆ ಲಿಂಕ್ ಮಾಡುವ ವ್ಯವಸ್ಥೆ ಕಲ್ಪಿಸ ಲಾಗಿದೆ” ಎಂದರು.
“ಯಾರು ಸಹ ಒಂದೇ ಒಂದು ರೂಪಾಯಿ ಲಂಚ ನೀಡದೆ ಇ ಖಾತೆ ಪಡೆಯಬಹುದು. ಮನೆ ಬಾಗಿಲಿಗೆ ಖಾತೆ ತಲುಪಿಸಬೇಕು ಎಂದು ತಿಳಿಸಿದ್ದೇನೆ. ನನಗೆ ನನ್ನ ಜೀವನದಲ್ಲಿ ಸಮಾಧಾನ ನೀಡಿದ ದೊಡ್ಡ ತೀರ್ಮಾನ. ಎಷ್ಟೋ ಜನಕ್ಕೆ ಅವರ ಆಸ್ತಿಗಳು ಯಾರ ಹೆಸರಿನಲ್ಲಿ ಇದೆ ಎಂದು ಗೊತ್ತಿರಲಿಲ್ಲ. ಈ ಕೆಲಸ ನೋಡಿ ಕೇಂದ್ರ ಸರ್ಕಾರ ನಮ್ಮ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿದೆ” ಎಂದು ಹೇಳಿದರು.
15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ
“ಯೂನಿಫಾರ್ಮ್ ಲ್ಯಾಂಡ್ ರೆಕಾರ್ಡ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಮೂಲಕ ಬಿ ಖಾತೆ ಮೂಲಕ ಎ ಖಾತೆ ನೀಡುವ ಯೋಜನೆ ಇದಾಗಿದೆ. ಈಗಾಗಲೇ 7 ಸಾವಿರ ಅರ್ಜಿಗಳು ಇದಕ್ಕೆ ಬಂದಿವೆ. ಇದಕ್ಕೆ ಇನ್ನೂ ಲಕ್ಷಗಟ್ಟಲೆ ಅರ್ಜಿಗಳು ಬರಬೇಕಿದೆ. ಈಗಾಗಲೇ ಅರ್ಜಿ ಹಾಕಿರುವವರಿಗೆ 15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ ಮಾಡಲು ಸಮಯ ನಿಗದಿ ಮಾಡಿದ್ದೇವೆ. ಅಧಿಕಾರಿಗಳು ಖಾತೆ ನೀಡುವಾಗ ಸ್ಥಳ ಪರಿಶೀಲನೆ ಮಾಡಲಿದ್ದಾರೆ” ಎಂದರು.
“ಇನ್ನೂ ಅನೇಕರು ಸೇಲ್ ಡೀಡ್ ಇಟ್ಟುಕೊಂಡು ಖಾತೆಯನ್ನೇ ಹೊಂದಿಲ್ಲ. 1.20 ಲಕ್ಷ ಜನ ಈ ಬಗ್ಗೆ ಅರ್ಜಿ ನೀಡಿದ್ದಾರೆ. 60 ಸಾವಿರ ಜನರ ಅರ್ಜಿ ಒಪ್ಪಿತವಾಗಿದೆ. 40 ಸಾವಿರ ಅರ್ಜಿ ರದ್ದಾಗಿದೆ. 15 ಸಾವಿರ ಅರ್ಜಿಗಳು ವಿವಿಧ ಹಂತದಲ್ಲಿವೆ. ಅರ್ಜಿಗಳು ಏಕೆ ತಿರಸ್ಕೃತವಾಗಿವೆ ಎಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.
ನಂಬಿಕೆ ನಕ್ಷೆ ಯೋಜನೆ; 12 ಸಾವಿರ ನಕ್ಷೆ ಹಂಚಿಕೆ
“ನಂಬಿಕೆ ನಕ್ಷೆ ಯೋಜನೆಯಡಿ 12 ಸಾವಿರ ನಕ್ಷೆಗಳನ್ನು ನೀಡಲಾಗಿದೆ. ಇದರಿಂದ ಭ್ರಷ್ಟಾಚಾರ ನಿಂತಿದೆ. ಕೆಲಸದ ವೇಗ ಹೆಚ್ಚಿದೆ. ನಾಗರಿಕ ಸ್ನೇಹಿ ವಾತಾವರಣ ಉಂಟಾಗಿದೆ. ಓಟಿಎಸ್ ಯೋಜನೆಯ ಅಡಿ ದಂಡ ಹಾಗೂ ಬಡ್ಡಿಯನ್ನು ರದ್ದು ಮಾಡಲಾಯಿತು. ಇದರಿಂದ 2 ಲಕ್ಷ ಜನರಿಗೆ ಅನುಕೂಲವಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ 1,200 ಕೋಟಿ ಹಣ ಸಂಗ್ರಹವಾಗಿದೆ. ಟಿಡಿಆರ್ ಅಡಿ ಬೆಂಗಳೂರು ಬಿಜಿನೆಸ್ ಕಾರಿಡಾರ್ ಯೋಜನೆಗೆ ಎಂದು ಭೂಮಿ ಕಳೆದುಕೊಂಡವರಿಗೆ ಹೆಚ್ಚು ಅನುಕೂಲವಾಗಲಿದೆ” ಎಂದು ಹೇಳಿದರು.
“ನಾವು ಜಾರಿಗೆ ತಂದಿದ್ದ ಪ್ರಿಮೀಯಂ ಎಫ್ ಎಆರ್ ಅನ್ನು ರಾಜ್ಯಪಾಲರು ತಡೆ ನೀಡಿದರು. ಬಿಜೆಪಿ ಸಮಯದಲ್ಲಿ ತಂದಿದ್ದ ಕಾನೂನನ್ನೇ ನಾನು ಜಾರಿಗೆ ತಂದಿದ್ದೇವೆ. ಒಂದಷ್ಟು ಜನ ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಅಲ್ಲಿಂದಲೂ ವಾಪಸ್ ಕಳುಹಿಸಿದ್ದಾರೆ. ಒಂದಷ್ಟು ಜನ ಪ್ರಿಮೀಯಂ ಎಫ್ ಎಆರ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ 1 ಸಾವಿರ ಕೋಟಿ ಬರುವ ನಿರೀಕ್ಷೆಯಿದೆ” ಎಂದರು.
“ಬಿ ಸ್ಮೈಲ್ ಎನ್ನುವ ಕಂಪೆನಿಯನ್ನು ಕಳೆದ ವರ್ಷ ಪ್ರಾರಂಭ ಮಾಡಲಾಯಿತು. ಒಟ್ಟು 1.47 ಲಕ್ಷ ಕೋಟಿಯಷ್ಟು ಹೂಡಿಕೆಯನ್ನು ಮಾಡಲಾಗಿದೆ, ಟೆಂಡರ್ ಕರೆಯಲಾಗಿದೆ. ಬಿಡಿಎಗೂ ಒಂದಷ್ಟು ಜವಾಬ್ದಾರಿ ನೀಡಲಾಗಿದೆ. 1.5 ಕಿಮೀ ಉದ್ದದ ಕಟ್ ಅಂಡ್ ಕವರ್ ಟನಲ್, ಮೇಖ್ರಿ ವೃತ್ತದ ಬಳಿ ವಾಹನ ದಟ್ಟಣೆ ತಪ್ಪಿಸಲು ಯೋಜನೆ ಮಾಡಲಾಗುವುದು. ವೈಟ್ ಟಾಪಿಂಗ್ ಕಾಮಗಾರಿಯನ್ನು ನಾನೇ ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ. 1,700 ಕೋಟಿ ರೂ. ವೆಚ್ಚದ 150 ಕಿಲೋ ಮೀಟರ್ ಉದ್ದದ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಎರಡನೇ ಹಂತದಲ್ಲಿ 7,500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. 690 ಕೋಟಿ ವೆಚ್ಚದಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ಪ್ರಾರಂಭವಾಗಲಿದೆ” ಎಂದು ವಿವರಿಸಿದರು.
“110 ಹಳ್ಳಿಗಳಿಗೆ ಕಾವೇರಿ ನೀರನ್ನು 2007 ರಿಂದ ನೀಡಲು ಆಗಿರಲಿಲ್ಲ. ನಾವು 775 ಎಂಎಲ್ ಡಿ ನೀರನ್ನು ಈಗಾಗಲೇ ನೀಡಿದ್ದೇವೆ. ಇದಕ್ಕೆ 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಮನೆ ಮನೆಗೆ ಟ್ಯಾಂಕರ್ ಮೂಲಕ ಕಾವೇರಿ ನೀರು ನೀಡಲಾಗಿದೆ. ಸರಳ ಕಾವೇರಿ ಯೋಜನೆ ಮೂಲಕ ರಿಯಾಯಿತಿ ದರ ಹಾಗೂ ಕಂತುಗಳ ಮೂಲಕ ಹಣ ಪಾವತಿಗೆ ಅವಕಾಶ ನೀಡಿ ಕಾವೇರಿ ನೀರು ನೀಡಲಾಗಿದೆ” ಎಂದರು.
“ಕೆ.ಆರ್ ಪುರಂ ನಿಂದ ಮೈಸೂರು ರಸ್ತೆ ವರೆಗಿನ ಟನಲ್ ರಸ್ತೆ ಯೋಜನೆಯ ಡಿಪಿಆರ್ ಪ್ರಗತಿಯ ಹಂತದಲ್ಲಿದೆ. ಈ ಯೋಜನೆಯನ್ನು ಮೊದಲೇ ಮಾಡಿದ್ದರೆ 4-5 ಸಾವಿರ ಕೋಟಿಗೆ ಮುಗಿದು ಹೋಗುತ್ತಿತ್ತು. ಈಗ 3 ಕೋಟಿಯಿಂದ 10-15 ಕೋಟಿ ಪರಿಹಾರವನ್ನು ಒಬ್ಬೊಬ್ಬರು ತೆಗೆದುಕೊಳ್ಳುತ್ತಿದ್ದಾರೆ. ಮೊದಲನೇ ಹಂತದಲ್ಲಿ 129 ಕಿಮೀ ಇರಲಿದೆ. ಎರಡನೇ ಹಂತದ ರಸ್ತೆ ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆವರೆಗೆ ಇರಲಿದೆ” ಎಂದರು.
“9 ಸಾವಿರ ಕೋಟಿ ವೆಚ್ಚದ 44 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಯೋಜನೆಯ ಡಿಪಿಆರ್ ಸಿದ್ಧವಿದೆ. ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ರಾಜಕಾಲುವೆಗಳ ಬಫರ್ ಜೋನ್ ಗಳ ಪಕ್ಕ ರಸ್ತೆ ನಿರ್ಮಾಣ ಕಾರ್ಯ ಮೂರು ಕಡೆ ಪ್ರಾರಂಭವಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ 50 ಕೋಟಿ ಹಣ ರೂ. ಮೀಸಲು ಇಡಲಾಗಿದೆ” ಎಂದರು.
17 ಸಾವಿರ ನಿವೇಶನ ಭೂ ಮಾಲೀಕರಿಗೆ ಹಂಚಿಕೆ
“ಶಿವರಾಂ ಕಾರಂತ್ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿ ಎಂದು ನ್ಯಾಯಲಯ ತಿಳಿಸಿದೆ. 34,977 ನಿವೇಶನ ಮಾಡಲಾಗಿದೆ. 17 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಬೇಕು. ಶೇ 75 ಭಾಗ ಮಾಲೀಕರು ಇದಕ್ಕೆ ತಯಾರಿದ್ದಾರೆ. ಬಿಡಿಎಗೆ 50 ವರ್ಷ ತುಂಬುತ್ತಿದ್ದು 17 ಸಾವಿರ ಜನರಿಗೂ ಒಂದೇ ದಿನ ಹಂಚಿಕೆ ಮಾಡಲಾಗುವುದು. ಮಿಕ್ಕ ನಿವೇಶನಗಳಿಗೆ ಅರ್ಜಿ ಕರೆದು ನೀಡಲಾಗವುದು. ಸ್ಕೈ ಡೆಕ್ ಬಗ್ಗೆ ಬಿಡಿಎಗೆ ಜವಾಬ್ದಾರಿ ನೀಡಿದ್ದೇನೆ. ಕೆಂಪೇಗೌಡ ಲೇಔಟ್ ಬಳಿ ಪರಿಶೀಲನೆ ಮಾಡಲಾಗುತ್ತಿದೆ” ಎಂದರು.
54 ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿರುವ ಬಗ್ಗೆ ಕೇಳಿದಾಗ, “ಪಕ್ಷವನ್ನು ಅಧಿಕಾರಕ್ಕೆ ತಂದವರಿಗೆ ಅಧಿಕಾರ ಕೊಡುವುದರಲ್ಲಿ ತಪ್ಪೇನಿದೆ. ಈ ಹಿಂದೆ ಬಿಜೆಪಿಯವರು ಯಾರಿಗೆಲ್ಲಾ ಅಧಿಕಾರ ಕೊಟ್ಟಿದ್ದಾರೆ ಎಂದು ಗೊತ್ತಿದೆ. ನಮಗೆ ಅವರೇ ಮಾದರಿ. ಅವರು ನಮ್ಮ ಕಾರ್ಯಕರ್ತರು. ಅವರಿಗೆ ಅಧಿಕಾರ ನೀಡಿರುವುದರಲ್ಲಿ ತಪ್ಪೇನು ಇಲ್ಲ” ಎಂದು ಸರ್ಮರ್ಥಿಸಿಕೊಂಡರು.


