ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಇರುವ ಟ್ರಾಲಿ ಬ್ಯಾಗ್ ಕಳೆದುಕೊಂಡಿದ್ದರು, ಅದನ್ನು ಪತ್ತೆ ಹಚ್ಚಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ವಾಪಸ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿಬ್ಬಂದಿಯ ತ್ವರಿತ ಮತ್ತು ಪ್ರಾಮಾಣಿಕ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಫೆಬ್ರವರಿ ಎಂಟರಂದು ರಾತ್ರಿ 08.35ಕ್ಕೆ ಪ್ರಯಾಣಿಕರೊಬ್ಬರು ಯಲಹಂಕ ರೈಲು ನಿಲ್ದಾಣದಲ್ಲಿ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಕಳೆದುಕೊಂಡಿದ್ದರು. ತಕ್ಷಣವೇ ‘ರೈಲ್ ಮದದ್’ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಕೂಡಲೇ ಆರ್‌ಪಿಎಫ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಯಲಹಂಕ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್–1ರಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ವಾರಸುದಾರರಿಲ್ಲದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ತೆಗೆದುಕೊಂಡು ಬಂದಿದ್ದಾರೆ.
ಬ್ಯಾಗ್ ಪರಿಶೀಲಿಸಿದಾಗ 17 ಲಕ್ಷ ರೂ ಮೌಲ್ಯದ 100 ಗ್ರಾಂ ಚಿನ್ನಾಭರಣಗಳು ಹಾಗೂ 2 ಲಕ್ಷ ರೂ. ಪತ್ತೆಯಾಗಿದೆ.ರ ರೈಲ್ ಮದದ್ನಲ್ಲಿ ಉಲ್ಲೇಖವಾದ ದೂರು ಹಾಗೂ ಆಧಾರ್ ಕಾರ್ಡ್ ವಿವರಗಳನ್ನು ಪಡೆದು ಆರ್‌ಪಿಎಫ್ ಸಿಬ್ಬಂದಿ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರನ್ನು ಸಂಪರ್ಕಿ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಬ್ಯಾಗ್ ಅನ್ನು ವಾಪಸ್ ನೀಡಿದ್ದಾರೆ.
ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಬಿಟ್ಟುಹೋಗಿದ್ದ 10 ಲಕ್ಷ ರೂ ಮೌಲ್ಯದ ಚಿನ್ನಾಭರಣ ಇರುವ ಬ್ಯಾಗ್ ಅನ್ನು ಬಿಎಂಟಿಸಿ ಸಿಬ್ಬಂದಿ ಪತ್ತೆಹಚ್ಚಿ ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ. ಕಳೆದುಹೋಗಿದ್ದ ಚಿನ್ನ ಮರಳಿ ಸಿಕ್ಕ ಖುಷಿಯಲ್ಲಿ ಮಹಿಳೆ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಕೆ.ಆರ್. ಮಾರುಕಟ್ಟೆಯಲ್ಲಿ ಬಸ್ ಹತ್ತಿದ್ದ ಮಹಿಳೆ ಬಸವನಗುಡಿಯಲ್ಲಿ ಇಳಿಯುವ ವೇಳೆ ಆತುರದಲ್ಲಿ ಚಿನ್ನದ ಸರ ಇದ್ದ ಬ್ಯಾಗನ್ನು ಮರೆತು ಹೋಗಿದ್ದರು. ಬ್ಯಾಗ್ ಕಳೆದುಹೋಗಿರುವುದು ತಿಳಿದ ಕೂಡಲೇ ಮಹಿಳೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆಯನ್ನು ಸಂಪರ್ಕಿಸಿ ಪದ್ಮನಾಭನಗರ ಡಿಪೋ ಬಳಿ ಚಿನ್ನಾಭರಣ ಬ್ಯಾಗ್ ಹಿಂತಿರುಗಿಸಲಾಗಿದೆ.


