ಪಬ್ಜಿ ಗೇಮ್ ಆಡುತ್ತಿರುವಾಗಲೇ ರಕ್ತದೊತ್ತಡ ಹೆಚ್ಚಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಮೊಹಮ್ಮದ್ ಕೈಫ್ (22) ಮೃತಪಟ್ಟವ.
ಖೈರ್ನಗರದ ಗುಲಾರ್ ವಾಲಿ ಗಾಲಿಯ ನಿವಾಸಿಯಾಗಿರುವ ಪ್ರಾಪರ್ಟಿ ಡೀಲರ್ ಫಾರುಕ್ ಎಂಬವರ ಪುತ್ರ ಕೈಫ್ ಕಳೆದ ನಾಲ್ಕು ತಿಂಗಳಿನಿಂದ ಆನ್ಲೈನ್ ಗೇಮಿಂಗ್ ವ್ಯಸನಿಯಾಗಿದ್ದ. ತಡರಾತ್ರಿಯವರೆಗೂ ಪಬ್ಜಿ ಗೇಮ್ ಆಡುತ್ತಿದ್ದ. ಸುಮಾರು ರಾತ್ರಿ ಮೂರು ಗಂಟೆ ವೇಳೆಗೆ ಪಬ್ಜಿ ಆಡುತ್ತಿರುವಾಗ ಕೈಫ್ ಕುಸಿದು ಬಿದ್ದಿದ್ದಾನೆ. ಶಬ್ದ ಕೇಳಿ ಮನೆಯವರು ಕೋಣೆಗೆ ಧಾವಿಸಿದಾಗ ಕೈಫ್ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ.
ಕೂಡಲೇ ಪೋಷಕರು ಕೈಫ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ವೇಳೆ ರಕ್ತದೊತ್ತಡ 300 ದಾಟಿರುವುದು ಕಂಡುಬಂದಿದೆ. ತಕ್ಷಣವೇ ದೆಹಲಿಯ ಆಸ್ಪತ್ರೆಗೆ ರವಾನಿಸಿದ್ದು, ಎರಡು ದಿನಗಳ ಜೀವನ್ಮರಣ ಹೋರಾಟ ಬಳಿಕ ಅಸು ನೀಗಿದ್ದಾನೆ. ಮಾನಸಿಕ ಒತ್ತಡ, ನಿದ್ರಾಹೀನತೆಯಿಂದ ರಕ್ತದೊತ್ತಡ ಹೆಚ್ಚಿದ್ದು, ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗಿ ಯುವಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.


