ಬೆಂಗಳೂರಿನ ಕೂಡ್ಲು ಕೆರೆ ಸಮೀಪ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಶೆಡ್ಗೆ ಬೆಂಕಿ ಬಿದ್ದು 100ಕ್ಕೂ ಅಧಿಕ ಶೆಡ್ಗಳು ಹೊತ್ತಿ ಉರಿದಿವೆ. ಬೆಳಗ್ಗೆ 5:30ರ ವೇಳೆ ಬೆಂಕಿ ಕಾಣಿಸಿಕೊಂಡಿದೆ.
ಎಲೆಕ್ಟ್ರಾನಿಕ್ ಸಿಟಿ , ಹುಳಿಮಾವು , ಸರ್ಜಾಪುರ ಹಾಗೂ ಡೈರಿ ಸರ್ಕಲ್ನಿಂದ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶೆಡ್ಗಳು ಹಾಗೂ ಸ್ಕ್ರಾಪ್ ವಸ್ತುಗಳು ಬೆಂಕಿಗಾಹುತಿಯಾಗಿವೆ. ಹೈ ಟೆನ್ಷನ್ ವಯರ್ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರ ಪತ್ತೆ ಮತ್ತು ತೆರವು ಕಾರ್ಯಾಚರಣೆಯನ್ನು ಪೊಲೀಸ್ ಇಲಾಖೆ ತೀವ್ರಗೊಳಿಸಿದೆ. ನಕಲಿ ದಾಖಲೆಗಳನ್ನು ಬಳಸಿ ವಾಸಿಸುತ್ತಿದ್ದ ನೂರಕ್ಕೂ ಹೆಚ್ಚು ಶೆಡ್ಗಳನ್ನು ತೆರವುಗೊಳಿಸಲಾಗಿದೆ, ಅಕ್ರಮ ವಲಸಿಗರನ್ನು ವಶಕ್ಕೆ ಪಡೆದು ಗಡಿಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆಯ ಸಂದರ್ಭದಲ್ಲಿ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚನೆ ನೀಡಿದೆ.
ಈ ವರ್ಷದ ಮೊದಲ ತಿಂಗಳಲ್ಲಿ ಪೊಲೀಸರು 35 ಕ್ಕೂ ಹೆಚ್ಚು ಮಂದಿ ಬಾಂಗ್ಲಾದೇಶಿಗರನ್ನು ಬಂಧಿಸಿದ್ದಾರೆ. ಇವರ ಬಳಿ ಇದ್ದ ನಕಲಿ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಅಕ್ರಮ ವಲಸಿಗರಲ್ಲಿ ಕೆಲವರು ನಗರದ ಡ್ರಗ್ಸ್ ಮಾಫಿಯಾದಂತಹ ಸಮಾಜವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


