ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆಗೆ ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಜರುಗಿದ್ದು, ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಮಂಗಳವಾರ ಮುಂಜಾನೆ ಉಸಿರಾಟದ ಸಮಸ್ಯೆಯಿಂದ ನಿಧನರಾದ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತ್ಯ ಸಂಸ್ಕಾರ ಒಕ್ಕಲಿಗ ಸಂಪ್ರದಾಯದ ಪ್ರಕಾರ ನೆರವೇರಿತು.
ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಕಾಫಿ ಡೇ ಹತ್ತಿರದ ಖಾಲಿ ಜಾಗದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ಜರುಗಿದ್ದು, ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪುತ್ರ ಹಾಗೂ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 15 ವೈದಿಕರ ತಂಡದಿಂದ ವಿಧಿ-ವಿಧಾನ ಕಾರ್ಯಗಳು ನಡೆದಿದ್ದು, ಹಲವು ಯತಿಗಳು, ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಕೃಷ್ಣ ಅಂತ್ಯಕ್ರಿಯೆ ವಿಧಿವಿಧಾನಗಳು ಜರುಗಿದವು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಲ್ಲದೇ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಸಚಿವ ಸಂಪುಟ ಸದಸ್ಯರು ಅಂತಿಮ ನಮನ ಸಲ್ಲಿಸಿದರು.