ಕೊಪ್ಪಳ: ಕೊಪ್ಪಳದ ಗವಿಮಠ ಜಾತ್ರೆ ಬಗ್ಗೆ ಕೇಳಿದ್ದೆ, ಓದಿದ್ದೆ. ಇದೇ ಮೊದಲ ಸಲ ಕಣ್ತುಂಬಿಕೊಂಡೆ. ಆಕಾಶ ಸಾಗರಕ್ಕೆ ಹೇಗೆ ಹೋಲಿಕೆ ಇಲ್ಲವೋ, ಅದೇ ರೀತಿ ಕೊಪ್ಪಳದ ಗವಿಮಠದ ಜಾತ್ರೆಗೆ ಬೇರೆ ಯಾವ ಜಾತ್ರೆಯನ್ನೂ ಹೋಲಿಕೆ ಮಾಡಲಾಗಲ್ಲ ಎಂದು ತುಮಕೂರಿನ ಶ್ರೀ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗ ಶ್ರೀಗಳು ನುಡಿದರು.
ಕೊಪ್ಪಳದ ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಮಠದ ಈ ವರ್ಷದ ಜಾತ್ರಾಮಹೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಗವಿಸಿದ್ದನ ರೂಪದ ಜನ ಇಲ್ಲಿ ಸೇರಿದ್ದಾರೆ. ಉತ್ತರ ಭಾರತದಲ್ಲಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಈ ಸಲ ಅಲ್ಲಿಯೂ ಕುಂಭ ಮೇಳ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಈ ಜಾತ್ರೆ, ಕುಂಭಮೇಳವನ್ನು ಮೀರಿಸುವಂಥದ್ದು ಎಂದರು.
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಸರಳತೆಯಲ್ಲಿ ಅತ್ಯಂತ ಸರಳತೆಯುಳ್ಳವರು. ವಿನಯದಲ್ಲಿ ಅತ್ಯಂತ ವಿನಯಶೀಲರು. ಜ್ಞಾನದಲ್ಲಿ ಅಪಾರ ಜ್ಞಾನವಂತರು. ಇಂಥ ಮೇರುವ್ಯಕ್ತಿತ್ವದ ಗವಿಶ್ರೀಯವರು, 100 ವರ್ಷಗಳ ಸಾಧನೆಯನ್ನು 25 ವರ್ಷಗಳಲ್ಲಿ ಮಾಡಿದ್ದಾರೆ. ಇದನ್ನು ಬರೀ ಜಾತ್ರೆಯನ್ನಾಗಿ ಮಾತ್ರವಲ್ಲ. ಜನಜಾಗೃತಿಯ, ಸಮಾಜಮುಖಿಯ ಯಾತ್ರೆಯನ್ನಾಗಿ ಮಾಡಿದ್ದಾರೆ. ಈ ಜಾತ್ರೆಯನ್ನು ಇನ್ನೊಂದಕ್ಕೆ ಹೋಲಿಕೆ ಮಾಡಲಾಗುವುದಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.
ಆಕಾಶ-ಸಾಗರಗಳಿಗೆ ಹೇಗೆ ಹೋಲಿಕೆ ಇಲ್ಲವೋ ಹಾಗೆಯೇ. ಗವಿಮಠದ ಜಾತ್ರೆಗೆ ಹೋಲಿಕೆ ಗವಿಮಠವೇ ಹೊರತು ಬೇರಾವುದು ಅಲ್ಲ. ಶ್ರೀಮಠದಲ್ಲೇ ಪ್ರೌಢಶಾಲೆ ಅಭ್ಯಾಸ ಮಾಡಿದ ಸಂಗೀತ ವಿದ್ವಾಂಸ ವೆಂಕಟೇಶ ಕುಮಾರ್ ಅವರಂಥ ವ್ಯಕ್ತಿಗಳನ್ನು, ವ್ಯಕ್ತಿತ್ವಗಳನ್ನು ಸಮಾಜಕ್ಕೆ ನೀಡುತ್ತಿರುವುದೇ ಶ್ರೀಮಠದ ದೊಡ್ಡ ಕೊಡುಗೆ ಎಂದು ಕೊಪ್ಪಳ ಗವಿಮಠದ ಸತ್ಕಾರ್ಯಗಳನ್ನು ಶ್ಲಾಘಿಸಿದರು.
ಸೇರಿರುವ ಜನರೆಲ್ಲ ಗವಿಸಿದ್ಧನ ಪ್ರತಿರೂಪ:
ಇಲ್ಲಿ ಸೇರಿರುವ ಜನರೆಲ್ಲ ಈ ಭಾಗದ ಆರಾಧ್ಯ ದೈವ ಶ್ರೀ ಗವಿಸಿದ್ಧನ ಪ್ರತಿರೂಪ. ನಿಮ್ಮನ್ನು, ತೇರು ಎಳೆಯುವ ನಿಮ್ಮ ಸಂಭ್ರಮವನ್ನು ನೋಡುವುದೇ ಸೌಭಾಗ್ಯ ಎಂದು ಕೊಪ್ಪಳ ಶ್ರೀ ಸಂಸ್ಥಾನ ಗವಿಮಠದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು.
ಮಹಾರಥೋತ್ಸವದ ವೇಳೆ ಆಶೀರ್ವಚನ ನೀಡಿದ ಗವಿಶ್ರೀಗಳು, ಇಡೀ ಭಾರತದಲ್ಲಿ ಹಿಂದೂಸ್ತಾನಿ ಸಂಗೀತ ವಿದ್ವಾಂಸ ಎನಿಸಿಕೊಂಡಿರುವ ಎಂ.ವೆಂಕಟೇಶಕುಮಾರ ಕಡುಬಡತನದ ಕುಟುಂಬದಲ್ಲಿ, ಶಾಲೆಯೇ ಇಲ್ಲದ ಹಳ್ಳಿಯೊಂದರಲ್ಲಿ ಜನಿಸಿದವರು. ಅಂಥ ಹಳ್ಳಿಯ ವ್ಯಕ್ತಿಗೆ ಮೂರು ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡಿ ಗೌರವಿಸಿವೆ. ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದೆ. ಇವರು 12 ವರ್ಷಗಳ ಕಾಲ ಪಂಡಿತ ಪುಟ್ಟರಾಜ ಗವಾಯಿಗಳ ಬಳಿ ಸಂಗೀತಾಭ್ಯಾಸ ಮಾಡಿ ಹಿಂದೂಸ್ತಾನಿ ಸಂಗೀತದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇವರು ನಮ್ಮ ಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಓದಿದವರು ಎಂಬುದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ಅಂಥವರಿಂದ ಈ ವರ್ಷದ ಜಾತ್ರಾ ಮಹೋತ್ಸವದ ಮಹಾರಥೋತ್ಸವಕ್ಕೆ ಚಾಲನೆ ಸಿಕ್ಕಿರುವುದು ಭಾಗ್ಯ ಎಂದರು.
ಮನುಷ್ಯನಿಗೆ ದೇವರು ಜೀವನ ಕೊಟ್ಟಿದ್ದಾನೆ. ಇದು ನಿಸರ್ಗದ ಕೊಡುಗೆ. ಯಾರಾದರೂ ಕಾಣಿಕೆ ಕೊಟ್ಟರೆ ಮನೆಯಲ್ಲಿ ಶೋಕೇಸ್ನಲ್ಲಿ ಇಡುತ್ತೇವೆ. ಅವರು ಯಾವಾಗಲಾದರೂ ಮನೆಗೆ ಬಂದಾಗ ಕಾಣಿಕೆ ನೋಡಿದರೆ ಖುಷಿಯಾಗಿ ಮತ್ತೊಮ್ಮೆ, ಮತ್ತೊಂದು ಕಾಣಿಕೆ ನೀಡಲು ಉತ್ಸುಕರಾಗುತ್ತಾರೆ. ಬದುಕನ್ನ ಚನ್ನಾಗಿ ಬದುಕಿದರೆ ದೇವರು ಇನ್ನೊಮ್ಮೆ ಮನುಷ್ಯ ಜನ್ಮದ ಗಿಫ್ಟ್ ಕೊಡ್ತಾನೆ. ದೇವರು ಸಂತೋಷಪಡುವಷ್ಟು ಚನ್ನಾಗಿ ಮನುಷ್ಯರಾದ ನಾವು ಬದುಕಬೇಕು. ಯಾವ ಗ್ಯಾರಂಟಿ ಇರದೇ ನೂರು ವರ್ಷದ ಬದುಕಿನ ಭರವಸೆಯನ್ನು ಭಗವಂತ ನೀಡಿದ್ದಾನೆ. ನಾವು ಹುಟ್ಟುವ ಮುಂಚೆ ತಾಯಿ ಎದೆ ಹಾಲು ಕೊಟ್ಟಿದ್ದಾನೆ. ಏನು ಕೊಟ್ಟರೂ ನಾವು ಅಳುವುದು ಬಿಟ್ಟಿಲ್ಲ ನಾವು ಎಂದು ಹೇಳಿದರು.
ಸೈಕಲ್ ಕೈ ಬಿಟ್ಟರೆ ಮಾತ್ರ ಸೈಕಲ್ ಕಲಿಯುತ್ತೇವೆ. ನಂಬಿದವರು ಕೈ ಬಿಟ್ಟರೆ ಮಾತ್ರ ಬದುಕುವುದನ್ನು ಕಲಿಯುತ್ತೇವೆ. ಭಗವಂತ ಏನೇ ಕೊಟ್ಟರೂ ಮನುಷ್ಯ ಗೊಣಗುವುದನ್ನು ಬಿಟ್ಟಿಲ್ಲ. ವಿಐಪಿಗಳು ಬಂದರೆ ಜನ ನೋಡಲು ಹೋಗುತ್ತಾರೆ. ಆದರೆ ನಿಮ್ಮನ್ನ ನೋಡಲು ವಿಐಪಿಗಳೇ ಇಲ್ಲಿಗೆ ಬರುತ್ತಾರೆ ಎಂದು ಆಶೀರ್ವಚನ ನೀಡಿದರು.
ಎರಡು ಕೈ ಇಲ್ಲದ ವ್ಯಕ್ತಿ ಇವತ್ತು ಎರಡು ಸಾವಿರ ರೂಪಾಯಿ ದೇಣಿಗೆ ಕೊಟ್ಟ. ಅದನ್ನು ನೋಡಿದ ನಂತರ ಕಾಣಿಕೆ ನಿರಾಕಿಸಿದೆ. ಆತನ ಭಕ್ತಿ ಎಷ್ಟಿತ್ತೆಂದರೆ ಪ್ರತಿ ವರ್ಷ ತಪ್ಪದೇ ಗವಿಸಿದ್ದ ಕೊಟ್ಟಷ್ಟು ಶಕ್ತ್ಯಾನುಸಾರ ಕಾಣಿಕೆ, ದಾಸೋಹ ಮಾಡುವುದಾಗಿ ಹೇಳಿದ. ಅದರಂತೆ ಈ ಜಾತ್ರಾ ಮಹೋತ್ಸವದಲ್ಲಿ ಕಟ್ಟಿಗೆ ತಂದವರು, ರೊಟ್ಟಿ ಮಾಡಿದವರು, ಹೊಳಿಗಿ, ಜಿಲೇಬಿ ಸೇವೆ ಮಾಡಿದವರು.. ಹೀಗೇ ಅನೇಕರು ಸೇವೆ ಸ್ತುತ್ಯರ್ಹ. ಈ ಸೇವೆ ಸದಾ ಕಾಲ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.
ನಾಲ್ಕೂವರೆ ಲಕ್ಷ ಜನಗಣದಲ್ಲಿ ಮಹಾರಥೋತ್ಸವ:
ಕೊಪ್ಪಳದ ಗವಿಮಠದ ಜಾತ್ರೆಗೆ ಸೇರುವ ಜನಸಂಖ್ಯೆಯೂ ಜಾತ್ರೆಯ ವಿಶೇಷಗಳಲ್ಲೊಂದು. ಪ್ರತಿ ವರ್ಷ ಸೇರುವಂತೆ ಈ ವರ್ಷವೂ ಲಕ್ಷಗಟ್ಟಲೆ ಜನ ಮಹಾರಥೋತ್ಸವದಲ್ಲಿ ಪಾಲ್ಗೊಂಡರು. ಗವಿಮಠದ 18 ಎಕರೆ ಜಾಗದಲ್ಲಿ ಸುಮಾರು 6 ಲಕ್ಷ ಜನ ಸೇರಿರಬಹುದು ಎಂದು ಅಂದಾಜಿಸಲಾಗಿದೆ ಎಂದು ನಿರೂಪಕರು ಘೋಷಿಸಿದರು. ಮೂಲಗಳ ಪ್ರಕಾರ ಈ ವರ್ಷದ ಜಾತ್ರೆಯಲ್ಲಿ ನಾಲ್ಕೂವರೆ ಲಕ್ಷ ಜನ ಸೇರಿದ್ದರು ಎಂದು ಅಂದಾಜಿಸಲಾಗಿದೆ.
ಲಕ್ಷಾಂತರ ಜನರು, ಅವರ ವಾಹನಗಳ ನಿಲುಗಡೆಗೆ ಅಲ್ಲಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.