ಅಫಜಲ್ಪುರ ತಾಲೂಕಿನ ಉಡಚಾಣ ಗ್ರಾಮದ ಶ್ರೀ ಶಾಂತಲಿಂಗ ಶಿವಾಚಾರ್ಯರು ಸಾರಾಯಿ ಕುಡಿದು ರಸ್ತೆಯಲ್ಲೇ ರಂಪಾಟ ಮಾಡಿದ್ದು, ಈ ನಡವಳಿಕೆಗಳಿಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡಚಾಣ ಗ್ರಾಮದ ಶ್ರೀ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಮಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಇತ್ತೀಚೆಗೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಂಠ ಪೂರ್ತಿ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ನಡೆಸಿದ್ದರು. ಸಾರ್ವಜನಿಕರು ನೋಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅರ್ಧ ಬಟ್ಟೆ ಬಿಚ್ಚಿಕೊಂಡು ಅಲೆದಾಡುತ್ತಿದ್ದ ಸ್ವಾಮೀಜಿ ಸಾರ್ವಜನಿಕರು ಮಾಹಿತಿ ಕೇಳಿದಾಗ ಸುಳ್ಳು ಹೇಳಿ ಪರಾರಿಯಾಗಲು ಯತ್ನಿಸಿದ್ದಾರೆ. ಸಾರ್ವಜನಿಕರು ಅವರನ್ನು ಬಿಡದಿದ್ದಾಗ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಉಡಚಾಣ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ಸಾರ್ವಜನಿಕರಿಗೆ ಸಮಜಾಯಿಸಿ ನೀಡಿ 22 ಸಾವಿರ ದಂಡಕಟ್ಟಿ ಅವರನ್ನು ಬಿಡಿಸಿಕೊಂಡು ಬಂದಿದ್ದರು.
ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರವೀಣ್ ಹಾಲಳ್ಳಿ ಎಂಬಾತ ಅಪ್ಲೋಡ್ ಮಾಡಿದ್ದಾನೆ. ಇದಕ್ಕಿಂತ ಮುಂಚೆಯೂ ಈ ರೀತಿ ಘಟನೆ ಸಾಕಷ್ಟು ಬಾರಿ ನಡೆದಿದ್ದವು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಶಾಂತಲಿಂಗ ಶಿವಾಚಾರ್ಯರು ತಮ್ಮ ಹೆಸರಲ್ಲಿ ಲೈಸೆನ್ಸ್ ಪಡೆದು ಪಿಸ್ತೂಲ್ ಪಡೆದಿದ್ದರೂ ಈಗ ಅದು ಪೊಲೀಸ್ ವಶದಲ್ಲಿದೆ. ಸ್ವಾಮೀಜಿ ಭಕ್ತರ ಹಣದಲ್ಲಿ ದಿನ ನಿತ್ಯ ಮೋಜು ಮಸ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬೇಸತ್ತ ಗ್ರಾಮಸ್ಥರು ಜ.15ರಂದು ಶಾಸಕ ಎಂ. ವೈ. ಪಾಟೀಲರನ್ನು ಭೇಟಿಯಾಗಿ ಉಜ್ಜಯಿನಿ ಜಗದ್ಗುರುಗಳ ಬಳಿ ಗ್ರಾಮಸ್ಥರ ನಿಯೋಗ ತೆರಳಿ ಮಠಕ್ಕೆ ಹೊಸ ಮಠಾಧಿಪತಿ ನೇಮಕ ಮಾಡುವಂತೆ ಮನವಿ ಸಲ್ಲಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ.