Thursday, January 30, 2025
Menu

ದಿಲ್ದಾರ ಮಂದಿ ಚರ್ಮದ ಸೈಜ್ ಗೊತ್ತಾಗುದೇ ಇಲ್ಲಿ!

ಇಲ್ಲಿ ಮಂದಿ ?ಲ್ ದಿಲ್ದಾರ ಇವ್ರು?! ತಲೆ ಬಿಸಿ ಅಂಬು ಶಬ್ದಾನೆ ಅವರ ಕುಡೆ ಇಲ್ಲಾ. ಹಂಗಾಗೆ ಅವರು ತಲಿಮ್ಯಾನೆ ಕುಂತಿದ್ದು, ಮಂದಿ ಸೇವೆ ಮಾಡ್ತೆವು ಹೇಳಿಕಂಡ ಜನ ಪ್ರತಿನಿಧಿಗಳು ಮತ್ತ ಸರಕಾರದ ಕೆಲಸ ದೇವರ ಕೆಲಸ ಅಂತೆ ಡೌ ಮಾಡುಕೆ ತಾಂಗೆರು.. ಎಂದು ಅವ್ವೆ ತನ್ನ ಅಸಮಾಧಾನ ಹೊರಹಾಕುತ್ತಿದ್ದಳು.

ಅವ್ವೆಯ ಅಸಮಾಧಾನ ನೋಡಿದ ನನಗೆ ಜನಪ್ರತಿನಿಧಿಗಳ ಮೇಲೆ ಹಾಗೂ ಜವಾಬ್ದಾರಿ ಇರುವ ಅಧಿಕಾರಿಗಳ ಮೇಲೆ ಇವತ್ತು ಆರೋಪ ಮಾಡುವುದಕ್ಕೆ ಮುಂದಾಗಿದ್ದಾಳೆ ಎನ್ನವ ಅಂದಾಜು ಮಾಡಿಕಂಡೆ. ಸುಮ್ಮನಿದ್ದರೆ ಸರಿಯಲ್ಲ ಎಂದು ಯಾರ ಬಗ್ಗೆ ಮಾತಾಡುಕೆ ತಾಂಗೆ ಮಾರಾಯ್ತಿ ಎಂದೆ..

ಉತ್ತರ ಕನ್ನಡ ಜಿಲ್ಲಾದಾಗೆ ಏನಾತೇ ಇದು ಅಂಬುದು ಯಾರ ಕಣ್ಣಿಗೂ ಬೀಳುದಿಲ್ಲಾ ಅಂಬುದೇ ಬ್ಯಾಜರಿನ ಇಷ್ಯಾ.. ಇಲ್ಲಿ ಬಸ್ನಾಗೆ ಓಡಾಡು ಮಂದಿ ಇಲ್ಲಾ ಹೇಳಿ ಬಸ್ ನಿಲ್ಲಿಸು ಕಾರಸ್ಥಾನಕ್ಕೆ ಮುಂದಾಗೇರು. ಅದು ನಿಂಗೆನಾರು ಖಬ್ರಿದಾ ಎಂದು ನನಗೆ ಪ್ರಶ್ನೆ ಮಾಡಿದಳು. ಸರಕಾರ ಮಹಿಳೆಯರಿಗೆ ಫ್ರೀ ಬಸ್ ವ್ಯವಸ್ಥೆ ಮಾಡಿದು. ಆದಾರ್ಬೆ ಹೆಂಗಸರು ಓಡಾಟ ಹೆಚ್ಚಾಗಿದು. ಅದಕ್ಕೆ ಸರಿಯಾಗಿ ಮಂದಿಗೂ ಸಾರಿಗೆ ವ್ಯವಸ್ಥೆ ಮಾಡುಕೆ ಕಷ್ಟಾತಿದು ಹೇಳುದು ಕೇಳಿದ್ದೆ ಅಟೆಯಾ ಎಂದೆ.. ಅದಕ್ಕೆ ಕೆಂಗಣ್ಣು ನನ್ನ ಕಡೆ ಬಿಟ್ಟು, ಅವರು ಹೇಳ್ತೆರು ನೀನು ಕೇಳ್ತೆ ಜನಾನೇ ಇಲ್ಲಾ ಹಂಗಾಗೆ ಸಂಸ್ಥೆ ಹಾನಿಯಲ್ಲಿ ಇದು? ಅಂಬು ಮಳ್ಳ ಮಳ್ಳ ಮಾತಾಡ್ತೆ ನಾಟಕಾ ಮಾಡುಕೆ ತಾಂಗೇರು ಅರ್ಥಮಾಡ್ಕೊ..

ಆಗ ನನ್ನ ಗಮನಕ್ಕೆ ಬಂದಿದ್ದು ಇತ್ತೀಚಿಗೆ ಓದಿರುವ ಒಂದು ವರದಿ.. ಅದರ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಉದ್ಯೋಗದಲ್ಲಿ ಇರುವ ಜನರ ಪೈಕಿ ಶೇ. 34ರಷ್ಟು ಜನರು ಬೆಂಗಳೂರಿನಲ್ಲಿ ಇದ್ದಾರೆ. ಮಹಾರಾಷ್ಟ್ರದಲ್ಲಿ ಶೇ.21 ರಷ್ಟು ಜನರಿದ್ದರೆ, ಶೇ. 35ರಷ್ಟು ಜನರು ಗೋವಾದಲ್ಲಿದ್ದಾರೆ. ಮಿಕ್ಕವರು ಇತರೇ ಕಡೆಗಳಲ್ಲಿ ಇರುತ್ತಾರೆ ಎನ್ನುವ ಲೆಕ್ಕಾಚಾರವೊಂದಿದೆ. ಇನ್ನೂ ಕಾರವಾರದವರನ್ನೇ ನೋಡಿದಾಗ ಶೇ.26 ರಷ್ಟು ಉದ್ಯೋಗಿಗಳು ಬೆಂಗಳೂರು, ಶೇ.39ರಷ್ಟು ಗೋವಾ, ಶೇ.27ರಷ್ಟು ಮಹಾರಾಷ್ಟ್ರ ಶೇ. 13ರಷ್ಟು ಜನ ವಿದೇಶದಲ್ಲಿ ಹಾಗೂ ಶೇ.8 ರಷ್ಟು ಜನ ವಿವಿ‘ ಮರ್ಚಂಟ್ ಶಿಪ್‌ನಲ್ಲಿ ಕೆಲಸ ಮಾಡುತ್ತಾರೆ ಎನ್ನಲಾಗುತ್ತಿದೆ.

ಹೌದಲೋ, ಹಿಂದೆ ಕಾರವಾರದಾರ್ಬೆ ಬೆಂಗಳೂರಿಗೆ ಹೋಗುಕೆ ಎಷ್ಟು ಬಸ್ ಇತ್ತು ಎಂದು ಪ್ರಶ್ನೆ ಹಾಕಿದಳು. ವಾಸ್ತವದಲ್ಲಿ ಕಳೆದ ಒಂದು ತಿಂಗಳವರೆಗೆ ಕಾರವಾರದಿಂದ ಬೆಂಗಳೂರಿಗೆ ಈ ಹಿಂದೆ 2 ಸಾಮಾನ್ಯ ಸಾರಿಗೆ ಬಸ್ ತಲಾ ಒಂದು ರಾಜಹಂಸ ಹಾಗೂ ಸ್ಲೀಪರ್ ಬಸ್‌ಗಳು ಜನರ ಸೇವೆಗೆ ನಿತ್ಯವೂ ಸಜ್ಜಾಗಿ ಇರುತ್ತಿದ್ದವು. ಬಹುತೇಕ ಎಲ್ಲಾ ಬಸ್‌ಗಳಿಗೂ ಅವರದ್ದೇ ಆದ ರೀತಿಯಲ್ಲಿ ಕಲೆಕ್ಷನ್ ಇದ್ದು ಸಂಸ್ಥೆಗೆ ಲಾಭ ಗಳಿಸುತ್ತಿರುವುದನ್ನು ಎಲ್ಲರೂ ಗಮನಿಸಿದ್ದರು. ಅದರ ಪರಿಣಾಮವೇ ಕೋವಿಡ್ ಕಾಲದಲ್ಲಿಯೂ ಅಬಾಧಿತವಾಗಿ ಈ ಎಲ್ಲಾ ಬಸ್ ಸೇವೆ ಇತ್ತು. ಆದರೆ ಕಳೆದ ಕೆಲವು ತಿಂಗಳಿಂದ ಕಾರವಾರ ಎನ್ ಡಬ್ಲ್ಯೂಕೆಎಸ್‌ಆರ್‌ಟಿಸಿ ಘಟಕದಿಂದ ಬೆಂಗಳೂರಿಗೆ ಬಸ್ ಸಂಚಾರವೇ ಇಲ್ಲಾ ಎನ್ನುವ ರೀತಿಯಲ್ಲಿ ಆಗಿ ಬಿಟ್ಟಿದೆ. ಕೇವಲ ಒಂದು ಸಾಮಾನ್ಯ ಸಾರಿಗೆ ಬಸ್ ಬೆಂಗಳೂರಿಗೆ ಓಡಾಡುತ್ತಿದೆ. ಬೇರೆ ಬಸ್‌ನಲ್ಲಿ ಪ್ರಯಾಣ ಮಾಡಬೇಕು ಎನ್ನುವವರು ಖಾಸಗಿ ಬಸ್‌ಗಳನ್ನು ಆಶ್ರಯಿಸಬೇಕಾಗಿದ್ದು ಅನಿವಾರ್ಯವಾಗಿದೆ.

ಕಾರವಾರದಿಂದ ಬೆಂಗಳೂರಿಗೆ ಇದ್ದ ಸ್ಲೀಪರ್ ಬಸ್ಸು ಗೋಕರ್ಣ ಮಾರ್ಗವಾಗಿ ಕುಮಟಾ, ಹೊನ್ನಾವರ ಸಾಗರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಹೋಗಿ ಅದೇ ಮಾರ್ಗವಾಗಿ ವಾಪಸ್ ಬರುತ್ತಿತ್ತು. ಇನ್ನೂ ರಾಜಹಂಸ ಬಸ್ ಕಾರವಾರದಿಂದ ಅಂಕೋಲಾ, ಶಿರಸಿ, ಹಾವೇರಿ ದಾವಣಗೆರೆ, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಹೋಗಿ ಅದೇ ಮಾರ್ಗದಿಂದ ವಾಪಸ್ ಬರುತ್ತಿತ್ತು. ಹಾಗೆಯೇ ಸಾಮಾನ್ಯ ಬಸ್‌ಗಳಲ್ಲಿ ಒಂದು ಕಾರವಾರದಿಂದ ಹೊರಟು ಕುಮಟಾ, ಸಿದ್ದಾಪುರ, ಸಾಗರ ಶಿವಮೊಗ್ಗ ಮಾರ್ಗದಿಂದ ಬೆಂಗಳೂರಿಗೆ ತೆರಳಿದರೆ, ಇನ್ನೊಂದು ಬಸ್ ಕುಮಟಾ ಹೊನ್ನಾವರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಈ ಭಾಗದ ಎಲ್ಲಾ ಪ್ರಯಾಣಿಕರು ಈ ಬಸ್ನ ಲಾಭವನ್ನು ಪಡೆದುಕೊಳ್ಳುತ್ತಿದ್ದರು.

ಇದನ್ನು ಹೊರತುಪಡಿಸಿದರೆ ಬೆಂಗಳೂರು ಘಟಕ ಒಂದು ಸ್ಲೀಪರ್ ಹಾಗೂ ಒಂದು ಐರಾವತ ಸೇರಿದಂತೆ ಎರಡು ಬಸ್‌ಗಳು ಹುಬ್ಬಳ್ಳಿ ಮಾರ್ಗವಾಗಿ ಯಲ್ಲಾಪುರ, ಅಂಕೋಲಾ, ಕಾರವಾರ, ಕಾಣಕೋಣ, ಮಾರ್ಗವಾಗಿ ಪಣಜಿಗೆ ಹೋಗುತ್ತಿದ್ದವು. ಜೊತೆಗೆ ಮೈಸೂರು ಘಟಕದ ಒಂದು ಬಸ್ ಮೈಸೂರಿನಿಂದ ಬೆಂಗಳೂರು, ತುಮಕೂರು, ಶಿವಮೊಗ್ಗ, ಸಾಗರ ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ ಮಾರ್ಗವಾಗಿ ಪಣಜಿಗೆ ಹೋಗಿ ಬರುತ್ತಿತ್ತು.

ಈಗ ಕಾರವಾರ ಘಟಕದ ರಾಜಹಂಸ ಹಾಗೂ ಸ್ಲೀಪರ್ ಬಸ್ನ ಸೇವೆ ರದ್ದು ಗೊಳಿಸಲಾಗಿದೆ. ಬೆಂಗಳೂರು ಘಟಕದ ಎರಡೂ ಬಸ್‌ಗಳು ತಮ್ಮ ಮಾರ್ಗ ಬದಲಾವಣೆ ಮಾಡಿ ಹುಬ್ಬಳ್ಳಿ ಧಾರವಾಡ, ರಾಮನಗರ ಮಾರ್ಗವಾಗಿ ಪಣಜಿಗೆ ತೆರಳುತ್ತಿವೆ. ಮೈಸೂರು ಬೆಂಗಳೂರು ಬಸ್ ವಾರಾಂತ್ಯಕ್ಕೆ ಮಾತ್ರ ಸೀಮಿತ ಮಾಡಿದ್ದಾರೆ. ಇದನ್ನೆಲ್ಲಾ ಗಮನಿಸಿ ಅವ್ವೆ ಇಷ್ಟಾದರೂ ನಮ್ಮ ಮಂದಿ ಯಾಕೆ ತಲಿಬಿಸಿ ಮಾಡುಕಿಲ್ಲಾ.. ಅಂಬುದೇ ತಿಳಿದಿಲ್ಲಾ..

ಸೀನಾ ನೀನು ಬರಿ ಕೆಎಸ್‌ಆರ್‌ಟಿಸಿ ಬಸ್ನ ಲೆಕ್ಕಾಚಾರ ಅಷ್ಟೇ ಹೇಳ್ದೆ.. ಕಾರವಾರ ದಾರ್ಬೆ ಬೆಂಗಳೂರಿಗೆ ಎಷ್ಟ ಖಾಸಗಿ ಬಸ್ ಹೊತೇವು ಖಬ್ರಿದಾ? ಪ್ರತಿದಿನ 14-17 ಬಸ್ ಓಡಾಡ್ತೆವು.. ವಾರದ ಕೊನೇಲಿ ಅದ್ರ ಲೆಕ್ಕಾ 25-30 ಆತಿದು. ಮಲ್ಲಾಪುರ ಮತ್ತ ಗೋವಾದಿಂದ ಬರುವ ಬಸ್ಸು ಕಾರವಾರದಿಂದೇ ಹೊತಿವು.. ನೋಡು ಸೀನಾ ಪ್ರೆವೇಟ್ ಬಸ್‌ಗೆ ಮಂದಿ ಸಿಗ್ತಿರು, ಅವರಿಗೆ ಪೂರ್ವಟ್ ಆತಿದು ಇವರಿಗೆ ಏನಾ ದಾಡಿ ಹೇಳು..ಅಷ್ಟೆ ಅಲ್ಲಾ ಕಾರವಾರ ಡಿಪೋದಾಗೆ ಇದ್ದ ಗಾಡಿಗಳು ಕುಮಟಾ ಮತ್ತ ಶಿರಸಿಗೆ ಕೊಟ್ಟಿರು. ಯಾರಿಗೂ ಖಬ್ರಿಲ್ಲಾ ಹೇಳಿ ಮಾಡಿರು ಎಂದು ಗುರುತರವಾದ ಆರೋಪವನ್ನು ಅವ್ವೆ ಮಾಡಿದಳು.

ಹಿಂಗೆಲ್ಲಾ ಯಾಕೆ ಆತಿದೆ.. ಹಿಂದೆ ಹಿಂಗೆಲ್ಲಾ ಇಲ್ಲಾ ಆತಿತ್ತಾ..? ಎಂಬ ನನ್ನ ಪ್ರಶ್ನೆಗೆ ಉತ್ತರಿಸಿದ ಅವ್ವೆಯ ಮಾತಿಗೆ ನಾನು ದಂಗಾದೆ. ಇಲ್ಲಿ ನಮ್ಮ ಜನಪ್ರತಿನಿಧಿಗಳ ?ಡಾಕಾರನಾಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮೀಟಿಂಗ್ ಮಾಡ್ಕಂಡೆ ಖಾಸಗಿ ಬಸ್ ಓಡಾಡುಕೆ ಏನು ಆಗುಕಿಲ್ಲ ಅಂಬು ನಿರ್ಧಾರಕ್ಕೆ ಬಂದಿರು ಎಂದು ಹೇಳಿ ಭಯಾನಕ ಸತ್ಯವೊಂದನ್ನು ಬಿಚ್ಚಿಟ್ಟಳು.

ಅವ್ವೆ ನಮ್ಮ ಓಟ ತಗೆಂಡವರು ಏನಮಾಡ್ತೆರೆ ಮಾರಾಯ್ತಿ ಎಂದಾಗ ಎಮ್‌ಎಲ್ಎ ಬಸ್ನಾಗೆ ಹೋಗುದಿಲ್ಲ. ಇಮಾನ್ ಮ್ಯಾನೆ ಬೆಂಗಳೂರಿಗೆ ಹೊತ್ಯಾ.

ವಾಸ್ತವದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಕೈಗಾ ಅಣುಸ್ಥಾವರ, ಏಷಿಯಾದಲ್ಲಿಯೇ ಅತೀ ದೊಡ್ಡದು ಎನ್ನಲಾದ ಸೀಬರ್ಡ್ ನೌಕಾನೆಲೆ ಯೋಜನೆ, ಗೋವಾರಾಜ್ಯಕ್ಕೆ ತಗುಲಿಕೊಂಡ ಪ್ರವಾಸೋದ್ಯಮ ಸೇರಿದಂತೆ ಇನ್ನೂ ಅನೇಕ ವಿಶೇಷತೆಗಳಿಗೆ ಕಾರಣವಾದ ಕಾರವಾರದಿಂದ ರಾಜ‘?ನಿಗೆ ಸರಕಾರಿ ಬಸ್ ಓಡಿಸುವುದೇ ಕಷ್ಟ ಎನ್ನುವ ಸ್ಥಿತಿಗೆ ವಿಚಾರಿಸಲೇಬೇಕು. ಹಾಗಂತ ಜನರು ಈ ಬಗ್ಗೆ ಸಾಕಷ್ಟು ಬಾರಿ ಸಾರಿಗೆ ಅಧಿಕಾರಿಗಳು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಕಾರಣ ಜನಪರ ಕೆಲಸ ಮಾಡಿಸಬೇಕಾದ ಜನ ಪ್ರತಿನಿಧಿಗಳು ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಅದೇ ಕಾರಣಕ್ಕೆ ಅಧಿಕಾರಿಗಳು ಅವರಿಗೆ ತಿಳಿದ ರೀತಿಯಲ್ಲಿ ದಿಂಘಣವಾಡುತ್ತಿದ್ದಾರೆ.

ಅವ್ವೆ ಇದಕ್ಕೆಲ್ಲಾ ಮೂಲ ಕಾರಣ ನಮ್ಮ ದಿಲ್ದಾರ್ ಮಂದಿ ದಪ್ಪ ಚರ್ಮದ ಸೈಜೆ? ಯಾರ್ಬಲಾ?!” ಎಂದಾಗ ಅವ್ವೆ ಮುಗುಳು ನಕ್ಕು ನನ್ನ ಮಾತನ್ನು ಒಪ್ಪಿಕೊಂಡಳು.
-ಶ್ರೀನಾಥ್ ಜೋಶಿ ಸಿದ್ದರ

Related Posts

Leave a Reply

Your email address will not be published. Required fields are marked *