ವೈಕುಂಠ ಏಕಾದಶಿ ಪ್ರಯುಕ್ತ ಬೆಂಗಳೂರು ನಗರ ಸೇರಿದಂತೆ ರಾಜ್ಯದ ದೇಗುಲಗಳಲ್ಲಿ ಭಕ್ತರು ನಸುಕಿನ ಜಾವದಿಂದಲೇ ಶ್ರೀ ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದಾರೆ.
ಬೆಂಗಳೂರಿನಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನ, ಮಲ್ಲೇಶ್ವರದ ವೈಯಾಲಿಕಾವಲ್ ಟಿಟಿಡಿ ದೇವಾಲಯ, ನೆಲಮಂಗಲದಲ್ಲಿರುವ ಶ್ರೀ ವೆಂಕಟೇಶ್ವರನ ದೇವಾಲಯ ಮತ್ತು ಇಸ್ಕಾನ್ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವಿಶೇಷ ಪೂಜೆ, ಅಭಿಷೇಕ ಹಾಗೂ ಮಹಾಮಂಗಳಾರತಿಗಳು ನಡೆಯುತ್ತಿವೆ.
ಇಸ್ಕಾನ್ ದೇವಸ್ಥಾನದಲ್ಲಿ ನಸುಕಿನ ಜಾವ 3:45ರಿಂದಲೇ ವಿಶೇಷ ಪೂಜೆ, ಅಭಿಷೇಕ, ಲಕ್ಷ್ಮಿ ವೆಂಕಟೇಶ್ವರನಿಗೆ ವಿಶೇಷ ಮಂಗಳರಾತಿ ನೆರವೇರಿಸಲಾಗುತ್ತಿದೆ. ರಾತ್ರಿ 11 ಗಂಟೆ ವರೆಗೂ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರಿಗೆ ಮುಕ್ತವಾಗಿ ದರ್ಶನ ಸಿಗಲಿದೆ.
ಇಲ್ಲಿ ದರ್ಶನಕ್ಕೆ ಬರುವ ಜನರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಪೂಜೆ ಬಳಿಕ ಭಕ್ತಾದಿಗಳಿಗೆ ಲಡ್ಡು, ಪೊಂಗಲ್ ವಿತರಣೆ ಮಾಡಲಾಗುತ್ತಿದೆ. ಶಾಸ್ತ್ರೀಯ ಸಂಗೀತ ಸೇವೆ ನೆರವೇರುತ್ತಿದೆ ಎಂದು ಇಸ್ಕಾನ್ನ ಸಂಪರ್ಕಾಧಿ ಕಾರಿ ಚೈತನ್ಯ ದಾಸ್ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 3 ಗಂಟೆಯಿಂದಲೇ ಸುಪ್ರಭಾತ ಸೇವೆ ಆರಂಭ ಗೊಂಡಿತ್ತು. 3:30ರ ವೇಳೆಗೆ ಮಹಾಭಿಷೇಕ ನೆರವೇರಿಸಲಾಯಿತು. ಶ್ರೀಕೃಷ್ಣನಿಗೆ ಲಕ್ಷ ಅರ್ಚನೆ ನಡೆಯಲಿದ್ದು, ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಲಿದೆ.
ಇಂದು ಒಂದೂವರೆ ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಪ್ರತಿಯೊಬ್ಬರಿಗೂ ಲಡ್ಡು ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಹಿರಿಯ ನಾಯರಿಕರಿಗೆ ದ್ವಾರದಿಂದ ದೇವಸ್ಥಾನದ ವರೆಗೂ ವಾಹನ ವ್ಯವಸ್ಥೆ ಮಾಡಲಾಗಿದೆ.