ರಾಜ್ಯದ ಅಭಿವೃದ್ಧಿಯ ತೇರನ್ನು ಎಳೆಯಲು ಕೇವಲ ಎರಡು ಕೈಗಳು ಸಾಲುವುದಿಲ್ಲ. ಕನ್ನಡ ಕುಲಕೋಟಿಯ ಕೈಗಳು ನನ್ನ ಜೊತೆ ಕೈಜೋಡಿಸಬೇಕು. ಬನ್ನಿ, ಅಭಿವೃದ್ಧಿಯ ತೇರನ್ನು ಒಟ್ಟಾಗಿ ಎಳೆಯೋಣ ಎಂದು ಸಿಎಂ ಡಿಕೆ ಶಿವಕುಮಾರ್ ರಾಜ್ಯದ ಜನತೆಗೆ ಕರೆ ನೀಡಿದರು.
ಮಾಣಿಕ್ ಷಾ ಮೈದಾನದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ನನ್ನನ್ನು ನಂಬಿ ಇಲ್ಲಿಯವರೆಗೆ ಕರೆತಂದ ನಾಡಿನ ಜನತೆಗೆ ನಾನು “ಸಾಕ್ಷಿಗುಡ್ಡೆ” ಉಳಿಸುತ್ತೇನೆ. ಕರ್ನಾಟಕದ ಅಭಿವೃದ್ಧಿ ಮತ್ತು ಭಾರತದ ಅಭಿವೃದ್ಧಿ ಒಂದಕ್ಕೊಂದು ಪೂರಕವಾಗಿದ್ದು, ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಕೃಷಿ, ಆರ್ಥಿಕತೆ ಹಾಗೂ ಸಂಸ್ಕೃತಿಯಲ್ಲಿ ದೇಶಕ್ಕೆ ದಾರಿ ತೋರಿಸುತ್ತಿರುವ ಕರ್ನಾಟಕದ ಶಕ್ತಿಯನ್ನು ಮತ್ತಷ್ಟು ಬೆಳೆಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ಕರ್ನಾಟಕದ ತಲಾ ಆದಾಯ ₹4.33 ಲಕ್ಷ ತಲುಪಿದ್ದು, ಜಿಎಸ್ಟಿ ಮತ್ತು ಆದಾಯ ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುವ ಮೂಲಕ 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್, ಅಂದರೆ ₹320 ಲಕ್ಷ ಕೋಟಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಯುವ ಕರ್ನಾಟಕ–ನವ ಭಾರತ ನಮ್ಮ ಧ್ಯೇಯವಾಕ್ಯ. ರಾಜ್ಯದ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಎಐ (AI) ಪರಿಚಯಿಸುವುದರ ಜೊತೆಗೆ ಎಐ ಅಕ್ಷರ ಅಭಿಯಾನ ಮತ್ತು ಕೋಡಿಂಗ್ ಗುರುಕುಲ ಆರಂಭಿಸಲಾಗುತ್ತಿದೆ. ಬೆಂಗಳೂರಿನಲ್ಲಿ ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ ಎಐ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಹಾಗೂ ಎಐ ಹಬ್ ಗಳನ್ಮು ನಿರ್ಮಿಸಲಾಗುವುದು ಎಂದು ಘೋಷಿಸಿದರು.
ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿ ಸಂಘಕ್ಕೆ 10 ಲಕ್ಷದಂತೆ ವಾರ್ಷಿಕ 1,000 ಕೋಟಿ ಅನುದಾನ ಒದಗಿಸಲಾಗುವುದು. ಯುವನಿಧಿ ಯೋಜನೆಯಡಿ ಸುಮಾರು 4 ಲಕ್ಷ ನಿರುದ್ಯೋಗಿ ಹಾಗೂ ಡಿಪ್ಲೊಮಾ ಪದವೀಧರರಿಗೆ 1,200 ಕೋಟಿ ನೆರವು ನೀಡಲಾಗಿದೆ ಎಂದು ತಿಳಿಸಿದರು.
ರೈತರ ಅನುಭವಕ್ಕೆ ಆಧುನಿಕ ತಂತ್ರಜ್ಞಾನವನ್ನು ಜೋಡಿಸಲು ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ ಜಾರಿಯಾಗಲಿದ್ದು, ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುವುದು. ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆಯಲು ರೈತ ಮಿತ್ರ ಯೋಜನೆ ಜಾರಿಗೊಳಿಸಲಾಗುವುದು. ಮೂರು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಬಾಡಿಗೆ ಶುಲ್ಕದ ಮೇಲೆ ಶೇ 50 ರಷ್ಟು ಸಹಾಯಧನ ನೀಡಲಾಗುವುದು ಎಂದು ಅಭಯ ನೀಡಿದರು.
ಬೆಳೆ ವಿಮಾ ಯೋಜನೆಯಡಿ 12.35 ಲಕ್ಷ ರೈತರಿಗೆ 1,300 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. 25 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. 2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ವಿಸ್ತರಿಸಲಾಗಿದ್ದು, 184 ಹೈಟೆಕ್ ಹಾರ್ವೆಸ್ಟರ್ ಹಬ್ ಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು. ಜಲ ಭದ್ರತೆ ಸರ್ಕಾರದ ಮೊದಲ ಆದ್ಯತೆ. ಈ ವರ್ಷ ₹16 ಸಾವಿರ ಕೋಟಿ ಮೊತ್ತದ 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲ ಹಂತ ಪೂರ್ಣಗೊಳ್ಳುತ್ತಿದ್ದು, ನವೆಂಬರ್ ವೇಳೆಗೆ ತುಮಕೂರು ಜಿಲ್ಲೆಗೆ ನೀರು ತಲುಪಲಿದೆ ಎಂದರು.
ಕಳೆದ ಒಂದು ವರ್ಷದಲ್ಲಿ 1,663 ಕಿ.ಮೀ. ರಾಜ್ಯ ಹೆದ್ದಾರಿ, 3,000 ಕಿ.ಮೀ. ಪ್ರಮುಖ ಜಿಲ್ಲಾ ರಸ್ತೆಗಳು ಹಾಗೂ 125 ಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ. ಪ್ರಗತಿಪಥ ಯೋಜನೆಯಡಿ ₹5,200 ಕೋಟಿ ಹೂಡಿಕೆಯೊಂದಿಗೆ 7,100 ಕಿ.ಮೀ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ನಡೆಯುತ್ತಿದೆ. ಬೆಂಗಳೂರು ಅಭಿವೃದ್ಧಿಗೆ ₹1.50 ಲಕ್ಷ ಕೋಟಿ ಮೊತ್ತದ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮೂರನೇ ಹಂತದ ಮೆಟ್ರೋ ಪೂರ್ಣ ಗೊಂಡ ಬಳಿಕ ಮೆಟ್ರೋ ಮಾರ್ಗ 220 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ಅಡಿಯಲ್ಲಿ 117 ಕಿ.ಮೀ. ರಿಂಗ್ ರಸ್ತೆಯನ್ನು ₹26 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ರಾಜ್ಯದ ಪ್ರತಿಯೊಂದು ಪಟ್ಟಣ ಹಾಗೂ ನಗರದ ಪ್ರಗತಿಗೆ ರಿಂಗ್ ರಸ್ತೆ ಹಾಗೂ ಮೊಬಿಲಿಟಿ ಗ್ರಿಡ್ ಗಳನ್ನು ನಗರ ಯೋಜನೆಯ ಮೂಲಕ ಜಾರಿಗೆ ತರಲಾಗುವುದು ಎಂದು ಹೇಳಿದರು.
ಉತ್ತಮ ಆಡಳಿತ ಮತ್ತು ಸುರಕ್ಷತೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ಮಹಾನಗರ ಪಾಲಿಕೆಗಳನ್ನು ರಚಿಸಲಾಗಿದೆ. ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಐದು ಕಮಿಷನರೇಟ್‌ಗಳಾಗಿ ವಿಂಗಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ರೌಡಿ ನಿಗ್ರಹ ಪಡೆ ರಚನೆ ಮಾಡಲಾಗುವುದು. ಸಂಚಾರ ದಟ್ಟಣೆ ಮತ್ತು ಪರಿಸರ ಮಾಲಿನ್ಯ ಕಡಿಮೆ ಮಾಡಲು ಐದು ಬೃಹತ್ ಟ್ರೀ ಪಾರ್ಕ್ ಗಳನ್ನು ನಿರ್ಮಿಸಲಾಗುವುದು. ಬೆಂಗಳೂರಿನ ಅಂತರ್ಜಲ ಮರುಪೂರಣ ಹಾಗೂ ಕುಡಿಯುವ ನೀರಿನ ಭದ್ರತೆಗಾಗಿ ಏಳು ಪ್ರಮುಖ ಕೆರೆಗಳಾದ ಹೆಸರುಘಟ್ಟ ಕೆರೆ, ಬೆಟ್ಟದ ಕೋಟೆ ಕೆರೆ, ಹೊಸಕೋಟೆ ಕೆರೆ, ಎಲೆ ಮಲ್ಲಪ್ಪ ಶೆಟ್ಟಿ ಕೆರೆ, ಬನ್ನೇರುಘಟ್ಟ ಕೆರೆ, ಬಾಗಲೂರು, ಬೈರಮಂಗಲ ಕೆರೆಗಳಿಗೆ ಹೊಸ ರೂಪ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ನೀರಾವರಿ ಯೋಜನೆಯ ಬಗ್ಗೆ ವಿವರಿಸಿದರು.
ಕಳೆದ ಮೂರು ವರ್ಷಗಳಲ್ಲಿ ₹134 ಲಕ್ಷ ಕೋಟಿಗೂ ಅಧಿಕ ಮೊತ್ತದ 945 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಕಳೆದ ಒಂದು ವರ್ಷದಲ್ಲಿ ₹112 ಲಕ್ಷ ಕೋಟಿ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ ʼಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ʼ ಸ್ಥಾಪಿಸಲಾಗುತ್ತಿದ್ದು, ₹20 ಸಾವಿರ ಕೋಟಿ ಹೂಡಿಕೆಗೆ ಬದ್ಧತೆ ವ್ಯಕ್ತವಾಗಿದೆ. ಇದರಿಂದ ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ‘ಬಿಯಾಂಡ್ ಬೆಂಗಳೂರು’ ಅಡಿಯಲ್ಲಿ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ಮುಖ್ಯಮಂತ್ರಿ ಉದ್ಯೋಗ ಸಂಕಲ್ಪʼ ಯೋಜನೆ ಆರಂಭಿಸಲಾಗುತ್ತಿದ್ದು, ಸರ್ಕಾರಿ ವಲಯದ 72 ಸಾವಿರ ಪ್ರಮುಖ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಆರು ತಿಂಗಳಲ್ಲಿ ಎಲ್ಲಾ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು. ಹಿಂದುಳಿದ ಹತ್ತು ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ʼಉದ್ಯೋಗ ನಿಧಿʼ ಯೋಜನೆ ಜಾರಿಯಾಗಲಿದ್ದು, ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ ₹2,500 ಪ್ರೋತ್ಸಾಹಧನ ನೀಡಲಾಗುವುದು. ಇದರಿಂದ ಒಂದು ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.
ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳ ಪ್ರವೇಶದಲ್ಲಿ ಈಗಿರುವ ಶೇ.15ರ ಗ್ರಾಮೀಣ ಮೀಸಲಾತಿಯೊಳಗೆ ಶೇ.7.5 ಮೀಸಲಾತಿ ನೀಡುವ ಸಹಾಯ ಹಸ್ತ’ ಯೋಜನೆ ಜಾರಿಯಾಗಲಿದೆ. ಇದರಿಂದ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಗುಣಮಟ್ಟದ ವೃತ್ತಿಪರ ಉನ್ನತ ಶಿಕ್ಷಣದ ಅವಕಾಶಗಳು ಮತ್ತಷ್ಟು ವಿಸ್ತರಿಸಲಿವೆ . ವಾಹನ ಮಾಲೀಕರಿಗೆ ಸರಳ ವಿಮಾ ಸೇವೆ ನೀಡಲು ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ ಸ್ಥಾಪಿಸಲಾಗುವುದುಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ₹44,631 ಕೋಟಿ ಮೀಸಲಿಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2026-27ರಲ್ಲಿ ಸುಮಾರು ₹4,000 ಕೋಟಿ ಅನುದಾನ ನೀಡಲಾಗಿದೆ. ಬುಡಕಟ್ಟು ಮಕ್ಕಳಿಗಾಗಿ 119 ಏಕಲವ್ಯ ಮಾದರಿ ವಸತಿ ಶಾಲೆಗಳು ಹಾಗೂ 2.60 ಲಕ್ಷ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದ 8.60 ಲಕ್ಷ ವಿದ್ಯಾರ್ಥಿಗಳಿಗೆ ₹494 ಕೋಟಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದು ಹೇಳಿದರು.


