ಉದಯಕಾಲ ನ್ಯೂಸ್, ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಅರನೆಳ್ಳಿ ಗ್ರಾಮದ ಸಿದ್ದೇಶ್ವರ ದೇವಾಲಯದ ಬಳಿ ಕ್ರಿ.ಶ. 1180ರ ಕಾಲಕ್ಕೆ ಸೇರಿದ ಅಪ್ರಕಟಿತ ತುರುಗೋಳ್ ವೀರಗಲ್ಲು ಶಾಸನವೊಂದು ಪತ್ತೆಯಾಗಿದ್ದು, ಇತಿಹಾಸದ ಮಹತ್ವದ ಪುಟಗಳನ್ನು ತೆರೆದಿಟ್ಟಿದೆ. ಹೊಂಬುಜದ ವೀರಸಾಂತರಸನ ಆಳ್ವಿಕೆಯ ಕಾಲಕ್ಕೆ ಸೇರಿದ ಈ ಶಾಸನವು ಚೌಡಸೆಟ್ಟಿಯ ಸಾಹಸ ಮತ್ತು ಬಲಿದಾನವನ್ನು ಸಾರುತ್ತದೆ.
ವೀರಗಲ್ಲಿನ ವಿಶೇಷತೆ
ಈ ವೀರಗಲ್ಲು 4.4 ಅಡಿ ಎತ್ತರ ಹಾಗೂ 2.3 ಅಡಿ ಅಗಲವಿದ್ದು, ಮೂರು ಪಟ್ಟಿಕೆಗಳನ್ನು ಹೊಂದಿದೆ. ದನಕರುಗಳು ಹಾಗೂ ಯುದ್ಧದ ದೃಶ್ಯಗಳನ್ನು ಕೆತ್ತಲಾಗಿದೆ. ವೀರನು ಪಲ್ಲಕ್ಕಿಯಲ್ಲಿ ಸ್ವರ್ಗಲೋಕಕ್ಕೆ ತೆರಳುತ್ತಿರುವ ಚಿತ್ರವಿದೆ. ಶಿವಲಿಂಗ, ಸೂರ್ಯ, ಚಂದ್ರ ಹಾಗೂ ಇತರ ಚಿತ್ರಗಳನ್ನು ಒಳಗೊಂಡಿದೆ. ಮಧ್ಯ ಮತ್ತು ಮೇಲಿನ ಪಟ್ಟಿಕೆಗಳಲ್ಲಿ ಒಟ್ಟು ಎಂಟು ಸಾಲುಗಳ ಸುಂದರವಾದ ಶಾಸನ ಕೆತ್ತಲಾಗಿದೆ.
ದನಕರು ಹಾಗೂ ಸ್ತ್ರೀಯರ ಮಾನ ರಕ್ಷಿಸಿದ ಚೌಡಸೆಟ್ಟಿ
ಶಕವರ್ಷ 1102ನೇ ಶಾರ್ವರಿ ಸಂವತ್ಸರದ ಆಶ್ವೀಜ ಶುದ್ಧ ಭಾನುವಾರದಂದು ಈ ಐತಿಹಾಸಿಕ ಘಟನೆ ನಡೆದಿದೆ. ಅರನೆಳ್ಳಿ ಗ್ರಾಮದ ಮಾಳಿಸೆಟ್ಟಿಯ ಅಳಿಯನಾದ ಚೌಡಸೆಟ್ಟಿಯು, ಗ್ರಾಮದ ಮೇಲೆ ವಿರೋಧಿಗಳು ದಾಳಿ ಮಾಡಿ ಸ್ತ್ರೀಯರ ಮಾನಭಂಗಕ್ಕೆ ಯತ್ನಿಸಿ, ದನಕರುಗಳನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಧೈರ್ಯವಾಗಿ ಹೋರಾಡಿದ್ದಾನೆ. ದನಕರುಗಳನ್ನು ಮರಳಿ ಪಡೆದು, ಸ್ತ್ರೀಯರ ಮಾನವನ್ನು ರಕ್ಷಿಸಿದ ಬಳಿಕ ಚೌಡಸೆಟ್ಟಿ ವೀರಮರಣ ಹೊಂದಿ ಸುರಲೋಕ ಪ್ರಾಪ್ತನಾದ ಬಗ್ಗೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ ಎಂದು ಸಂಶೋಧಕ ಆದಿತ್ಯ ನಂಜವಳ್ಳಿ ಮಾಹಿತಿ ನೀಡಿದ್ದಾರೆ. ದನಕರುಗಳ ರಕ್ಷಣೆಯ ಜೊತೆಗೆ ಸ್ತ್ರೀಯರ ಮಾನರಕ್ಷಣೆಗಾಗಿ ಹೋರಾಡಿ ತ್ಯಾಗ ಮಾಡಿರುವ ಕಾರಣ ಇದನ್ನು ‘ತುರುಗೋಳ್’ ಮತ್ತು ‘ಪೆಣ್ಬುಯ್ಯಲ್’ ವೀರಗಲ್ಲು ಎಂದು ಗುರುತಿಸಲಾಗಿದೆ.
ಅರನೆಳ್ಳಿ ನಾಡಿನೊಂದಿಗೆ ತುಳುವಲದೇವಿಯ ದಾನ ಪರಂಪರೆ
ಶಾಸನದಲ್ಲಿ ಅರನೆಳ್ಳಿ ಗ್ರಾಮವನ್ನು ‘ತುಳುವಲದೇವಿಯ ಕಂಣದಾನವೆನಿಸಿದ ನಾಡು’ ಎಂದು ವರ್ಣಿಸಲಾಗಿದೆ. ತುಳುವಲದೇವಿಯು ಹೊಂಬುಜದ ಅರಸ ವೀರಸಾಂತರಸನ ತಾಯಿಯಾಗಿದ್ದು, ತಮ್ಮ ದಾನಗುಣಕ್ಕೆ ಹೆಸರುವಾಸಿಯಾಗಿದ್ದರೆಂಬುದು ಇತರೆ ಶಾಸನಗಳಿಂದ ತಿಳಿದುಬಂದಿದೆ. ಈ ಶಾಸನವು ಚೌಡಸೆಟ್ಟಿಯ ಪರಾಕ್ರಮದ ಜೊತೆಗೆ ಅರನೆಳ್ಳಿ ನಾಡಿನೊಂದಿಗೆ ತುಳುವಲದೇವಿಯ ದಾನ ಪರಂಪರೆಯ ಸಂಬಂಧವನ್ನೂ ಜಗಜ್ಜಾಹೀರುಗೊಳಿಸುತ್ತದೆ.
ಈ ಮಹತ್ವದ ಶಾಸನದ ಸಂಶೋಧನೆಯನ್ನು ಸಂಶೋಧಕರಾದ ರಮೇಶ್ ಹಿರೇಜಂಬೂರು ಹಾಗೂ ಆದಿತ್ಯ ನಂಜವಳ್ಳಿ ನೆರವೇರಿಸಿದ್ದಾರೆ. ಈ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿನಯ್ ಹಾಗೂ ಗ್ರಾಮಸ್ಥ ಗಣಪತಿ ಅವರು ಸಾಥ್ ನೀಡಿ ಸಹಕರಿಸಿದ್ದಾರೆ ಎಂದು ಸಂಶೋಧಕ ಆದಿತ್ಯ ನಂಜವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
#ShivamoggaNews #AranelliInscription #Veeragallu #TurogolVeeragallu #AdityaNanjavalli #UdayakalaNews #KarnatakaHistory #Hombuja #HistoricalDiscoveries

