ತೆಲಂಗಾಣ ಮುಖ್ಯಮಂತ್ರಿ ರೇವಂತರೆಡ್ಡಿ ಮೊನ್ನೆ, ಈ ದೇಶದ ಇಂಜಿನಿಯರಿಂಗ್ ವಿದ್ಯೆ ಮತ್ತು ಕೋರ್ಸ್‌ಗಳ ಉಪಯುಕ್ತತೆ ಹಾಗೂ ವಿದ್ಯೆಯ ಸಾರ್ಥಕ ಬಳಕೆ ಬಗ್ಗೆ ಗಂಭೀರ ಮಾತುಗಳನ್ನು ಹೇಳಿರುವುದು ಗಮನಾರ್ಹ. ಬದುಕಿನ ಎಲ್ಲ ಘಟ್ಟಗಳಿಗೆ ಪೂರಕವಾದಂತಹ ಕೌಶಲ್ಯ ಮತ್ತು ತಾಂತ್ರಿಕತೆಯನ್ನು ಕಲಿಸುವುದೇ ಇಂಜಿನಿಯರಿಂಗ್. ಯವಜನತೆಯಲ್ಲಿ ಈ ನೈಪುಣ್ಯತೆ ಕರಗತವಾದಲ್ಲಿ, ಇದರಿಂದ ಕಲಿಕಾರ್ಥಿಗೂ, ಪ್ರಪಂಚಕ್ಕೂ ಸಹಾಯಕ.
ಯಾವುದೇ ವಿದ್ಯೆಯನ್ನು ಪೀಳಿಗೆ ಕಲಿಯಬೇಕಿರುವುದು ಜ್ಞಾನಾರ್ಜನೆಗೆ. ಮತ್ತು ತಾನು ಕಲಿತ ವಿದ್ಯೆಯಿಂದ ಈ ಪ್ರಪಂಚ, ದೇಶ, ಕುಟುಂಬಕ್ಕೆ ಸಹಾಯಕವಾಗಬೇಕೆಂಬ ಉದ್ದೇಶದಿಂದ. ಆದರೆ ಇಂದೇನಾಗಿದೆ ? ಇಂದಿನ ಪೀಳಿಗೆ ಕಾಲೇಜಿನ ನಾಲ್ಕು ಗೋಡೆಗಳ ನಡುವೆ ಕಲಿಯುವ ಇಂದಿನ ತಾಂತ್ರಿಕ ವಿದ್ಯೆ ನಿಜಕ್ಕೂ ಸಮಾಜದ ಮತ್ತು ದೇಶದ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗಿದೆಯೇ ? ಈ ಸಮಸ್ಯೆ ಬಹುವಾಗಿ ಕಾಡುತ್ತಿರುವುದು ಭಾರತದಲ್ಲಿ.
ಏಕೆಂದರೆ ಇಡೀ ಪ್ರಪಂಚಕ್ಕೆ ಯುವ ಸಂಪನ್ಮೂಲವನ್ನು ಪೂರೈಸುವ ಏಕೈಕ ಅಗ್ರದೇಶ ಭಾರತ. ಶೇ ೬೨ಕ್ಕೂ ಅಧಿಕ ಯುವಜನಾಂಗವನ್ನು ಹೊಂದಿರುವ ಭಾರತದ ವಿದ್ಯಾವಂತ ತರುಣ, ತರುಣಿಯರ ಕಡೆ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ರಷ್ಯಾ ದೇಶಗಳು ಆಸೆಗಣ್ಣಿನಿಂದ ನೋಡುತ್ತಿರುವುವುದು ವಾಸ್ವವ. ಹೇಳಬೇಕೆಂದರೆ ಜಾಗತಿಕ ಮಟ್ಟದಲ್ಲಿ ಸ್ಥಾಪಿತ ವಾದ ಎಲ್ಲ ಉದ್ಯಮಗಳು ಮತ್ತು ರಂಗಗಳಲ್ಲಿ ಭಾರತೀಯ ಯುವ ಮಾನವ ಸಂಪನ್ಮೂಲಗಳ ನೇರ ಪಾತ್ರವಿಲ್ಲದೆ ಯಾವ ದೇಶವೂ ತನ್ನ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಇದೆಲ್ಲವೂ ನಿಜವೇ. ಆದರೆ ಇಂದು ಭಾರತದಲ್ಲಿ ಇಂಜಿನಿಯರುಗಳ ಯುವ ಗುಂಪು, ಕಾರ್ಖಾನೆಯಲ್ಲಿ ಸಾಬೂನು ಹೊರಬರುವ ರೀತಿಯಲ್ಲಿ ಪ್ರತಿ ವರ್ಷ ಹೊರಬರುತ್ತಿರುವುದು ಗಮನಾರ್ಹ.
ಇಂಜಿನಿಯರಿಂಗ್ ಡಿಗ್ರಿ ಪಡೆದು ಕಾಲೇಜಿಂದ ಹೊರಬರುವ ಪ್ರತಿ ಇಂಜಿನಿಯರಿಂಗ್ ಪದವೀಧರನಿಗೂ ಸರ್ಕಾರಗಳು ಸೂಕ್ತ ಉದ್ಯೋಗ ಅಥವಾ ಅಂತಹ ಯುವಕ, ಯುವತಿಗೆ ಸೂಕ್ತ ಜೀವನಾಧಾರ ಕಲ್ಪಿಸುವ ಸ್ಥಿತಿಯಲ್ಲಿಲ್ಲ. ಹಾಗಾದರೆ ಇಂತಹ ವಿದ್ಯೆಯನ್ನು ಕಲಿಯುವುದರಿಂದ ಪ್ರಯೋಜನ ಏನು? ಕೋವಿಡ್ ಮತ್ತು ಜಾಗತಿಕ ಆರ್ಥಿಕ ತಲ್ಲಣಗಳಲ್ಲದೆ ಮಧ್ಯಪ್ರಾಚ್ಯದ ವಲಯದಲ್ಲಿ ತಲೆದೋರಿರುವ ಯುದ್ಧ ವಾತಾವರಣದಿಂದ ಭಾರತದ ತರುಣ ತರುಣಿಯರ ಉದ್ಯೋಗ ಅವಕಾಶಗಳು ಮಂದಗೊಂಡಿವೆ. ಇದು ಸಾಮಾಜಿಕ ಮತ್ತು ಅರ್ಥಿಕವಾಗಿ ಭಾರತೀಯ ಸಮಾಜದ ಮೇಲೆ ಪರಿಣಾಮ ಬೀರಿದೆ. ಒಂದೆಡೆ ಪ್ರತಿ ವರ್ಷ ವಿವಿಗಳಿಂದ ಪದವಿ ಪಡೆದು ಹೊರ ಬರುತ್ತಿರುವ ಯುವಪಡೆ. ಮತ್ತೊಂದು ಕಡೆ ಇವರಿಗೆ ಸ್ವದೇಶದಲ್ಲಿ ಉದ್ಯೋಗವನ್ನು ಕಲ್ಪಿಸಿಕೊಡಲು ಇಲ್ಲದಂತಹ ಪರಿಸರ ಮತ್ತು ಪರಿಸ್ಥಿತಿ. ಸರ್ಕಾರಗಳಿಂದ ಯುವನತೆಗೆ ಭರವಸೆಯನ್ನು ಮೂಡಿಸುವಂತಹ ವಾತಾವರಣವೇ ಸೃಷ್ಟಿಯಾಗದಿರುವುದು ಒಂದು ದುರಂತ.
ಒಟ್ಟಿನಲ್ಲಿ ಸರ್ಕಾರಗಳು ಈ ಕುರಿತು ಗಂಭೀರ ಆಲೋಚನೆ ಮಾಡುವ ಅನಿವಾರ್ಯತೆ ಇದೆ. ಪರಿಸ್ಥಿತಿಗಳನ್ನು ನಿಭಾಯಿಸುವ ಮೂಲಕ ಯುವ ಇಂಜಿನಿಯರುಗಳು ಹತಾಶಗೊಳ್ಳದೆ ಅವರ ಬದುಕು ಕಟ್ಟಿಕೊಳ್ಳಲು ಅವಕಾಶವಾಗುವ ದಿಶೆಯಲ್ಲಿ ಸರ್ಕಾರ ಮುಂದಾಗಬೇಕಿದೆ.


