Wednesday, September 16, 2026
Menu

ಕ್ರಿಮಿನಲ್‌ ಹಿನ್ನೆಲೆಯ ಪೊಲೀಸ್‌ ಅಧಿಕಾರಿಯನ್ನು ಸಮರ್ಥಿಸುವ ಸಿಎಂ: ಆರ್‌ ಅಶೋಕ

ದಲಿತರ ಮೇಲೆ ಹಲ್ಲೆ ಮಾಡಿದ, ಹೆಣ್ಣುಮಗಳ ಬದುಕು ಹಾಳು ಮಾಡಿ ಚರಿತ್ರೆ ಇರುವ ಟಿ.ನರಸೀಪುರ ಠಾಣೆಯ ಇನ್ಸ್‌ಪೆಕ್ಟರ್‌ ಪರವಾಗಿ ಮಾತಾಡುತ್ತಾರೆ ಎಂದರೆ ಮುಖ್ಯಮಂತ್ರಿ ಯಾವ ಮಟ್ಟಕ್ಕೆ ಹೋಗಿದ್ದಾರೆ, ನಾನಾದರೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹೋಗಿದ್ದೇನೆ. ಹಿಂದೂಗಳಿಗೆ ಆ ರೀತಿಯ ಸಂದೇಶ ನೀಡಿದರೆ ಎಲ್ಲ ಪೊಲೀಸ್‌ ಠಾಣೆಗಳಲ್ಲೂ ಹೀಗೆಯೇ ನಡೆಯುತ್ತದೆ. ಕ್ರಿಮಿನಲ್‌ ಹಿನ್ನೆಲೆ ಇರುವ ಪೊಲೀಸ್‌ ಅಧಿಕಾರಿಯನ್ನು ಮುಖ್ಯಮಂತ್ರಿಯೇ ಸಮರ್ಥಿಸುತ್ತಾರೆ  ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ  ಟೀಕಿಸಿದ್ದಾರೆ.

ಬೆಂಗಳೂರು ಮತ್ತು ಮದ್ದೂರುಗಳಲ್ಲಿ ಮಾತನಾಡಿದ ಅವರು, ಸರ್ಕಾರ ಹಿಂದೂಗಳ ಗಣೇಶೋತ್ಸವಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು. ತಾಕತ್ತಿದ್ದರೆ ಹಿಂದೂಗಳನ್ನು ಕರೆದು ಎಚ್ಚರಿಕೆ ನೀಡಿದಂತೆಯೇ ಮುಸ್ಲಿಮರಿಗೂ ಎಚ್ಚರಿಕೆ ನೀಡಲಿ ಎಂದು ಸವಾಲು ಹಾಕಿದ್ದಾರೆ.

ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಎಂದು ನಾನು ಭಾವಿಸಿದ್ದು, ದೊಡ್ಡ ನಾಯಕರಾಗಿರಬೇಕು ಎಂದು ನಿರೀಕ್ಷೆ ಮಾಡಿದ್ದೆ. ಆದರೆ ಅವರು ಗ್ರಾಮದ ಇನ್ಸ್‌ಪೆಕ್ಟರ್‌ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. ಪೊಲೀಸರು ಜನರಿಗೆ ಧಮಕಿ ಹಾಕಬೇಕಾಗುತ್ತದೆ ಎಂದಿದ್ದಾರೆ. ಕ್ರಿಮಿನಲ್‌ ಹಿನ್ನೆಲೆ ಇರುವ ಪೊಲೀಸ್‌ ಅಧಿಕಾರಿಯನ್ನು ಮುಖ್ಯಮಂತ್ರಿಯೇ ಸಮರ್ಥಿಸುತ್ತಾರೆ ಎಂದರು.

ಬಿಜೆಪಿ ನಾಯಕರ ಎದೆ ಸೀಳಿದರೆ ಆಂಜನೇಯನೋ ಶ್ರೀರಾಮನೋ ಕಾಣುತ್ತಾನೆ.  ಕಾಂಗ್ರೆಸ್‌ ನಾಯಕರ ಎದೆ ಸೀಳಿದರೆ ಅಲ್ಲಾ ಮಾತ್ರ ಕಾಣುತ್ತಾನೆ. ಪಾಕಿಸ್ತಾನ, ಬಾಂಗ್ಲಾ ಸೃಷ್ಟಿ ಮಾಡಿದ್ದು, ಜಮ್ಮು ಕಾಶ್ಮೀರವನ್ನು ಪ್ರತ್ಯೇಕ ಮಾಡಿದ್ದೇ ಕಾಂಗ್ರೆಸ್‌. ಆರ್‌ಎಸ್‌ಎಸ್‌ ಪಥ ಸಂಚಲನ ತಡೆಯಲು ಕಾನೂನು ತರಲಾಗಿದೆ. ಹಾಗೆಯೇ, ಮಸೀದಿಗಳ ಮುಂಭಾಗ ಯಾರೂ ಮೆರವಣಿಗೆ ಮಾಡಬಾರದೆಂದು ಆದೇಶ ಮಾಡಲಿ.  ಮುಸ್ಲಿಮರು ಹಿಂದೂ ದೇವಾಲಯ, ಜೈನ ದೇವಾಲಯಗಳ ಮುಂದೆ ಹೋಗಬಾರದೆಂದು ಕಾನೂನು ಮಾಡಲಿ. ಸರ್ಕಾರಕ್ಕೆ ತಾಕತ್ತಿದ್ದರೆ ಮದ್ದೂರಲ್ಲಿ ಕಲ್ಲು ತೂರಾಟ ಮಾಡಿದವರನ್ನು ಕರೆಸಿ ನಿಮಗೆ ಗ್ರಹಚಾರ ಬಿಡಿಸುತ್ತೇನೆಂದು ಹೇಳಬೇಕಿತ್ತು. ಮತಕ್ಕಾಗಿ ಒನ್‌ ಸೈಡ್‌ ಆಗುವುದು ಬೇಡ. ಮದ್ದೂರಲ್ಲಿ ಕಲ್ಲು ಹೊಡೆದವರು ಬೇರೆಯವರು.  ಹಿಂದು ಮುಖಂಡರಿಗೆ ಈಗ ನೋಟಿಸ್‌ ನೀಡಲಾಗಿದೆ. ನಾನು ಮದ್ದೂರಿಗೆ ಹೋಗಿ ಬೆಂಬಲ ನೀಡುತ್ತೇನೆ. ಹಿಂದೂಗಳಿಗೆ ಅಪಮಾನ ಕಡೆಗಳಿಗೆ ಹೋಗಿ ನಾನು ಬೆಂಬಲ ನೀಡುತ್ತೇನೆ ಎಂದಿದ್ದಾರೆ.

ಸಿಎಂ ಡಿಕೆ ಶಿವಕುಮಾರ್‌ ಅವರು ಕುಮಾರಸ್ವಾಮಿಯ ದಾಖಲೆಗಳನ್ನು ಇಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ.  ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿವೆ. ಕಾಂಗ್ರೆಸ್‌ನವರು ಭಯೋತ್ಪಾದಕನನ್ನು ಬ್ರದರ್‌ ಎಂದರು. ಕಾಶ್ಮೀರದಲ್ಲಿ ಉಗ್ರವಾದಿಗಳೊಂದಿಗೆ ಸಂಪರ್ಕ ಇಟ್ಟುಕೊಂಡ ಉಮರ್‌ ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದಿದ್ದಾರೆ. ಇದು ನಕಲಿ ಕಾಂಗ್ರೆಸ್‌. ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಇಲ್ಲ, ಇದು ಸೋನಿಯಾ ಗಾಂಧಿಯವರ ಇಟಲಿ ಕಾಂಗ್ರೆಸ್‌ ಎಂದರು.

ಮದ್ದೂರಿನಲ್ಲಿ ಗಣೇಶೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ವರ್ಷ ಹಿಂದೂಗಳ ಮೇಲೆ ಬೆದರಿಕೆ ಹಾಕಲಾಗಿತ್ತು. ಆಗ ಪ್ರತಿ ವರ್ಷ ಬರುತ್ತೇವೆಂದು ಹಿಂದೂ ಕಾರ್ಯಕರ್ತರಿಗೆ ಭರವಸೆ ನೀಡಿದ್ದು, ಈಗ ಇಲ್ಲಿಗೆ ಭೇಟಿ ನೀಡಿದ್ದೇವೆ. ಈ ತಾಲಿಬಾನ್‌ ಸರ್ಕಾರ ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿದೆ. ಟಿ.ನರಸೀಪುರದ ಘಟನೆ ಸಣ್ಣದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಎಲ್ಲೇ ಹಿಂದೂಗಳಿಗೆ ನೋವಾದರೂ ನಾವು ಅಲ್ಲಿಗೆ ಹೋಗುತ್ತೇವೆ. ಅಲ್ಲಿನ ಇನ್ಸ್‌ಪೆಕ್ಟರ್‌ ಸಂಘಟನೆಗಳವರ ಜೊತೆ ಅವಾಚ್ಯವಾಗಿ ಮಾತಾಡಿದ್ದಾರೆ. ಹಿಂದೂಗಳು ಮಾತ್ರ ಮಸೀದಿ ಮುಂದೆ ಹೋಗಬಾರದು. ಆದರೆ ಮುಸ್ಲಿಮರು ಮಾತ್ರ ಮಸೀದಿಯಲ್ಲಿ ಇಡೀ ವರ್ಷ ಆಜಾನ್‌ ಕೂಗಬಹುದು. ಮುಖ್ಯಮಂತ್ರಿಗಳು ನದಿಯಲ್ಲಿ ಮುಳುಗಿ ನಾಮ ಹಾಕಿದರೆ ಅದನ್ನು ಯಾರೂ ನಂಬಲ್ಲ. ನಿಜವಾದ ಹಿಂದೂ ಆಗಿದ್ದರೆ, ಪೊಲೀಸರ ವಿರುದ್ಧ ಕಠಿಣ ಕ್ರಮ ವಹಿಸಬೇಕಿತ್ತು. ಈ ಕಪಟ ಹಿಂದುತ್ವವನ್ನು ಯಾರೂ ನಂಬಲ್ಲ. ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೋಡುವುದು ಕಾಂಗ್ರೆಸ್‌ನ ರಕ್ತದಲ್ಲೇ ಇದೆ. ಟಿ.ನರಸೀಪುರದ ಠಾಣೆಯ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಿಮಿನಲ್‌ ಕೇಸ್‌ಗಳಿವೆ. ಹಿಂದೂ ಪರಂಪರೆ ನಮಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ನ ನಿಯಮಗಳನ್ನು ನೋಡಿದರೆ ಬ್ರಿಟಿಷರೇ ವಾಸಿ ಎನಿಸುತ್ತದೆ. ಗಣೇಶೋತ್ಸವಕ್ಕೆ ಆ ಮಟ್ಟಿಗಿನ ನಿರ್ಬಂಧಗಳನ್ನು ಹೇರಿದ್ದಾರೆ. ಇದನ್ನು ಹಿಂದೂಗಳ ಗಣೇಶೋತ್ಸವ ಎನ್ನಲಾಗುವುದಿಲ್ಲ. ಇದನ್ನು ಪೊಲೀಸರ ಗಣೇಶೋತ್ಸವ ಎನ್ನಬೇಕಾಗುತ್ತದೆ. ಹಿಂದೂಗಳನ್ನೇ ಕರೆದು ಬೆದರಿಕೆ ಹಾಕುತ್ತಾರೆ. ಆದರೆ ರಸ್ತೆಯಲ್ಲೇ ಕೂರುವ ಮುಸ್ಲಿಮರನ್ನು ಕರೆದು ಎಚ್ಚರಿಕೆ ನೀಡುವುದಿಲ್ಲ. ಚುನಾವಣೆ ಬಂದಾಗ ಹಿಂದೂ ಆಗುವ ಕಾಂಗ್ರೆಸ್ಸಿಗರು ನಂತರ ಮುಸ್ಲಿಮರಾಗಿ ಬದಲಾಗುತ್ತಾರೆ ಎಂದರು.

ಮಸೀದಿಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಆಜಾನ್‌ ಕೂಗುತ್ತಾರೆ. ಇಷ್ಟೇ ಡೆಸಿಬಲ್‌ ಇರಬೇಕೆಂದು ಕೋರ್ಟ್‌ ಆದೇಶವಿದ್ದರೂ ಅದನ್ನು ಸರ್ಕಾರ ಪಾಲಿಸಿಲ್ಲ. ಹೀಗೆ ಮಾಡಿಯೇ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *