Menu

ವಜ್ರಾಭರಣ ಗಿಫ್ಟ್‌ ಆಮಿಷಕ್ಕೆ 1.75 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ

ಸೋಷಿಯಲ್‌ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯ ಮಾತು ನಂಬಿ ಬೆಂಗಳೂರಿನ ಯಶವಂತಪುರದ ಮಹಿಳೆಯೊಬ್ಬರು ಫಾರಿನ್‌ ಸೀರೆ, ವಜ್ರಾಭರಣಗಳ ಆಮಿಷಕ್ಕೆ ಒಳಗಾಗಿ 1.75 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬಹಿರಂಗಗೊಂಡಿದೆ.

ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಾಹಿಲ್ ಜುಗ್ಗಲ್ ಎಂಬಾತ ಫೇಸ್‌ಬುಕ್ ಮೂಲಕ ಮಹಿಳೆಗೆ ಪರಿಚಯವಾಗಿದ್ದಾನೆ. ಇಬ್ಬರೂ ಮೊಬೈಲ್ ನಂಬರ್‌ ಪಡೆದು ಸಂಪರ್ಕ ಬೆಳೆಸಿ ಆತ್ಮೀಯರಾಗಿದ್ದಾರೆ. ತಾನು ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಸಾಹಿಲ್, ಮಹಿಳೆಗೆ ವಿದೇಶದಿಂದ ದುಬಾರಿ ಸೀರೆ, ರತ್ನ ಹಾಗೂ ವಜ್ರಾಭರಣಗಳನ್ನ ಗಿಫ್ಟ್ ಆಗಿ ಕಳುಹಿಸುತ್ತಿರುವುದಾಗಿ ನಂಬಿಸಿದ್ದ.

ಕೆಲವು ದಿನಗಳ ನಂತರ ಮಹಿಳೆಗೆ ಕರೆ ಮಾಡಿದ ಸಾಹಿಲ್, ನನ್ನ ಬಳಿ ಭಾರತೀಯ ಕರೆನ್ಸಿ ಇಲ್ಲ. ಕಸ್ಟಮ್ಸ್ ಶುಲ್ಕ ಪಾವತಿಸಲು ತಾತ್ಕಾಲಿಕವಾಗಿ 40 ಲಕ್ಷ ರೂ. ನೀಡಿ. ನಾನು ಭಾರತಕ್ಕೆ ಬಂದ ಬಳಿಕ ಹಣವನ್ನ ಹಿಂದಿರುಗಿಸುತ್ತೇನೆ ಎಂದು ಮನವೊಲಿಸಿದ್ದ.

ಮಹಿಳೆಯು ಹಣ ಯಾರಿಗೆ ನೀಡಬೇಕು ಎಂದು ಮಹಿಳೆ ಕೇಳಿದಾಗ, ಅರ್ಧಕ್ಕೆ ಹರಿದಿದ್ದ 10 ನೋಟಿನ ಪೋಟೊ ತೋರಿಸಿ ಅದೇ ರೀತಿಯ ನೋಟು ತೋರಿಸುವ ವ್ಯಕ್ತಿಗೆ ಹಣ ನೀಡುವಂತೆ ತಿಳಿಸಿದ್ದ. ಸಾಹಿಲ್ ಹೇಳಿದಂತೆ ಹೋಟೆಲ್‌ಗೆ ತೆರಳಿದ ಮಹಿಳೆ, ಹರಿದ ನೋಟು ತೋರಿಸಿದ ವ್ಯಕ್ತಿಗೆ 40 ಲಕ್ಷ ರೂ. ಕೊಟ್ಟಿದ್ದಾರೆ. ಬಳಿಕ ತಾನು ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ, ಗಿಫ್ಟ್‌ನಲ್ಲಿರುವ ವಜ್ರಾಭರಣಗಳ ಮೌಲ್ಯ ಹೆಚ್ಚಿರುವುದರಿಂದ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿ ಮತ್ತೆ ಹಣ ಕೇಳಿದ್ದಾನೆ.

ಮಹಿಳೆಯನ್ನು ನಂಬಿಸಿ ತೆರಿಗೆ, ಇತರ ಕಾರಣ ನೀಡಿ ಒಟ್ಟು ಒಂದು ಮುಕ್ಕಾಲು ಕೋಟಿ ರೂ. ಪಡೆದು ವಂಚಿಸಲಾಗಿದೆ. ಬಹಳ ದಿನಗಳಾದರೂ ಗಿಫ್ಟ್ ತಲುಪದ ಹಿನ್ನೆಲೆ ಮಹಿಳೆಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಮೋಸ ಹೋಗಿರುವುದು ಗೊತ್ತಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *