Menu

ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ಸಹಿಸಲ್ಲ: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

ಸುಖಾ ಸುಮ್ಮನೆ ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ನಾನು ಸಹಿಸುವುದಿಲ್ಲ. ನಿಮ್ಮ ಹಂತದಲ್ಲೇ ಕೆಲಸ ಸರಾಗವಾಗಿ ಆದರೆ ಸಣ್ಣ ಪುಟ್ಟ ಕೆಲಸಗಳಿಗೂ ಜನತೆ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ.  ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ  ಅಧೀನ ಅಧಿಕಾರಿಗಳ ಮಾಹಿತಿ ಅಂಗೈ ತುದಿಯಲ್ಲಿ ಇರಬೇಕು. ಯಾವ ಯಾವ ಅಧಿಕಾರಿ ಫೀಲ್ಡ್‌ ವರ್ಕ್‌ಗೆ ಹೋಗಿದ್ದಾರೆ, ಯಾವ ಪ್ರದೇಶಕ್ಕೆ ಹೋಗಿದ್ದಾರೆ, ಜನರ ಬಳಿಗೆ ಹೋಗಿ ಯಾವ ಸಮಸ್ಯೆ ಬಗೆಹರಿಸಿದ್ದಾರೆ ಎನ್ನುವ ನಿತ್ಯದ ಅಪ್‌ಡೇಟ್‌ ನಿಮ್ಮ ಬಳಿ ಇರಬೇಕು. ಈ ರೀತಿಯ ಒಂದು ರಿಜಿಸ್ಟರ್‌ ನಿರ್ವಹಣೆ ಮಾಡುವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಜವಾಬ್ದಾರಿ ಎಂದು ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಸುವರ್ಣಸೌಧದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ,   ಜನ ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಎಚ್ಚರದಲ್ಲಿ ಕೆಲಸ ಮಾಡಿ, ನಾವು ಎರಡು ಕಣ್ಣಲ್ಲಿ ನೂರು ಜನರನ್ನು ನೋಡಿದರೆ, ನೂರು ಜನರ ಇನ್ನೂರು ಕಣ್ಣುಗಳು ನಮ್ಮನ್ನು ಗಮನಿಸುತ್ತಿರುತ್ತವೆ ಎಂದು ಹೇಳಿದರು.

ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನಾದೇಶಕ್ಕಾಗಿ ಜನರ ಬಳಿಕೆ ಹೋಗಬೇಕು. ಅಧಿಕಾರಿಗಳಿಗೆ ಇದರ ಅಗತ್ಯ ಇರುವುದಿಲ್ಲ. ಹಾಗಂಥಾ ಅಧಿಕಾರಿಗಳು ಮೈ ಮರೆತರೆ, ಕರ್ತವ್ಯ ಮರೆತರೆ ಅದು ಜನತೆಗೆ ಬಗೆಯುವ ದ್ರೋಹವಾಗುತ್ತದೆ. ಅಧಿಕಾರಿ ವರ್ಗ ತಮ್ಮ ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಸರ್ಕಾರದ ಮೇಲೆ ಜನತೆ ಇಟ್ಟಿರುವ ನಿರೀಕ್ಷೆ ಈಡೇರಿದಂತಾಗುತ್ತದೆ.  ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೇ ನೆಲೆಸಬೇಕು. ಹಾಗಾದಾಗ ಮಾತ್ರ ನೀವು ಜನರ ಕೈಗೆ ಸಿಗಲು, ಅವರಿಗೆ ಸ್ಪಂದಿಸಲು ನೆರವಾಗುತ್ತದೆ. ಸಭೆಯ ನಡುವೆ ಯಾವುದೇ ಅಧಿಕಾರಿ ಮೊಬೈಲ್‌ ನಲ್ಲಿ ಮಾತಾಡುವುದು ಕಂಡು ಬಂದರೆ ಸಂಜೆ ಮೀಟಿಂಗ್‌ ಮುಗಿಯುವ ವೇಳೆಗೆ ನಿಮ್ಮ ಅಮಾನತು ಆದೇಶ ಬರುತ್ತದೆ. ಈ ಎಚ್ಚರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಸಭೆಯಲ್ಲಿ ಭಾಗವಹಿಸಿ ಎಂದರು.

ಕ್ರಾಂತಿಕಾರಕ ರೀತಿಯಲ್ಲಿ ಜನರ ಸಮಸ್ಯೆ ಬಗೆಹರಿಸಲು “ಪ್ರಜಾಸೇವಾ ಇಲಾಖೆ”ಯನ್ನು ಸ್ಥಾಪಿಸಿದ್ದೇವೆ. ಶಾಸಕರು, ಜಿಲ್ಲಾ ಮಂತ್ರಿಗಳು, ಅಧಿಕಾರಿಗಳು ನಿಯಮಿತವಾಗಿ ಜನರ ಬಳಿಗೆ ಹೋಗಬೇಕು. ನಾನು ನಿರಂತರವಾಗಿ ಜನ ಸ್ಪಂದನೆ ಕಾರ್ಯಕ್ರಮಗಳನ್ನು ನಡೆಸುತ್ತೇನೆ. ನೀವೂ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಪ್ರಜಾಸೇವೆ ಇಲಾಖೆಯ ಗೈಡ್‌ ಲೈನ್ಸ್‌ಗಳನ್ನು ಸರಿಯಾಗಿ ಜಾರಿ ಮಾಡಬೇಕು. ಈ ವಿಚಾರದಲ್ಲಿ ನಾನು ಉದಾಸೀನ, ದೌರ್ಜನ್ಯ ಸಹಿಸಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕೊಡಲು ಸಾಧ್ಯವಿರುವುದನ್ನು ತಪ್ಪದೇ ನೀಡಬೇಕು. ಜನ ಜಿಲ್ಲಾ ಕೇಂದ್ರ, ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಿ ಎಂದು ಸೂಚಿಸಿದರು.

ಅವೈಜ್ಞಾನಿಕವಾಗಿ ನಗರಗಳು, ಪಟ್ಟಣಗಳು ಬೆಳೆಯುವುದನ್ನು ತಪ್ಪಿಸಿ ಶಿಸ್ತುಬದ್ದವಾದ, ಯೋಜನಾಬದ್ದವಾದ ನಗರಗಳು, ಪಟ್ಟಣಗಳ ಬೆಳವಣಿಗೆಗೆ ಪೂರಕವಾಗಿ ನಾವು ಕೆಲವು ಬದಲಾವಣೆಗಳನ್ನು ತರುತ್ತೇವೆ. ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳುವ ನಮ್ಮ ತೀರ್ಮಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಜಾರಿಗೆ ತನ್ನಿ. ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಪಾಲಿಕೆಗಳ ವ್ಯಾಪ್ತಿಯಲ್ಲಿ ಯೋಜನಾಬದ್ದ ಬೆಳವಣಿಗೆ ಆಗಬೇಕು. ಅನುಮತಿ ಪಡೆಯದೆ ಯಾರೂ ಬಡವಾವಣೆಗಳನ್ನು ನಿರ್ಮಿಸಲು ಅವಕಾಶ ಇರಬಾರದು ಎಂದು ಹೇಳಿದರು.

ಒಂದು ಪೈಸೆ ಖರ್ಚಿಲ್ಲದಂತೆ  ಆಸ್ತಿಗೆ ಇ-ಖಾತೆ  ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಬೆಂಗಳೂರಿನ ಬಳಿಕ ಇಡೀ ರಾಜ್ಯಕ್ಕೆ ಇದು ವಿಸ್ತರಣೆ ಆಗುತ್ತಿದೆ. ನಮ್ಮ ಸರ್ಕಾರದ ಈ ಕ್ರಾಂತಿಕಾರಕ ಯೋಜನೆ ಅಷ್ಟೇ ಪರಿಣಾಮಕಾರಿ ಆಗಿ  ತಳಮಟ್ಟದಲ್ಲಿ ಜಾರಿ ಆಗಬೇಕು.   ಸಿಎಸ್‌ಆರ್‌ ಶಾಲೆಗಳನ್ನು ನಾವು ಆರಂಭಿಸುತ್ತಿದ್ದೇವೆ. ಕೆಪಿಎಸ್‌ ಶಾಲೆಗಳ ಮಾದರಿಯಲ್ಲಿ ಸಿಎಸ್‌ಆರ್‌ ಶಾಲೆಗಳನ್ನು ಅಭಿವೃದ್ಧಿ ಪಡಿಸಲಿದ್ದೇವೆ. ಗ್ರಾಮಾಂತರ ಭಾಗದಲ್ಲೂ ಉತ್ತಮ ಗುಣಮಟ್ಟದ ಶಾಲೆಗಳು  ಇರಬೇಕು ಎನ್ನುವುದು ನನ್ನ ಆಲೋಚನೆಯಾಗಿದೆ. ಇದಕ್ಕಾಗಿ ಎಲ್ಲಾ ಉದ್ಯಮಿಗಳನ್ನು ನಾನು ಕರೆಸಿ ಮಾತುಕತೆ ನಡೆಸುತ್ತಿದ್ದೇನೆ ಎಂದರು.

ಎಸ್‌ಐಆರ್‌ ವಿಚಾರದಲ್ಲಿ ನಾವು ರಾಜಕಾರಣ ಮಾಡಬಾರದು. ರಾಜ್ಯ ಚುನಾವಣಾಧಿಕಾರಿಗಳು ಎಲ್ಲವನ್ನೂ ಸ್ಪಷ್ಟವಾಗಿ ತಿಳಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗದ ಕಾರ್ಯಯೋಜನೆಗೆ ನಾವು ಪೂರಕವಾಗಿ ನೆರವು ನೀಡುತ್ತಿದ್ದೇವೆ. ಪ್ರತಿಯೊಬ್ಬರ ಮತದಾನದ ಹಕ್ಕು ಉಳಿಯಬೇಕು. ಇದಕ್ಕೆ ಪೂರಕವಾಗಿ ಯಾರ್ಯಾರಿಗೆ ಯಾವ ಯಾವ ದಾಖಲೆಗಳ ಅಗತ್ಯವಿದೆಯೋ ಅದನ್ನೆಲ್ಲಾ ನಮ್ಮ ಸರ್ಕಾರ ಒದಗಿಸಬೇಕು. ಅಧಿಕಾರಿಗಳು ಗಮನಿಸಬೇಕು. ಮುಖ್ಯವಾಗಿ ಪ್ರತೀ ಮನೆಗೆ ಮೂರು ಬಾರಿ ಬಿಎಲ್‌ಒಗಳು ಭೇಟಿ ನೀಡಿ ಅರ್ಜಿಯನ್ನು ಒದಗಿಸಬೇಕು ಎಂದು ಸಿಎಂ ವಿವರಿಸಿದರು.

ಯಾರ ಮತದಾನದ ಹಕ್ಕು ಉಳಿಯುತ್ತದೋ ಅವರಿಗೆ ಸರ್ಕಾರದ ಸವಲತ್ತುಗಳು ಸಿಗುತ್ತವೆ. ಮತದಾರನೇ ಅಲ್ಲದವನಿಗೆ ಸವಲತ್ತುಗಳು ಸಿಗುವುದಿಲ್ಲ. ಆದ್ದರಿಂದ ನಾವು ಹೆಲ್ಪ್‌ ಡೆಸ್ಕ್‌ಗಳನ್ನು ಪ್ರತೀ ವಾರ್ಡ್‌ಗಳು ಮತ್ತು ಏರಿಯಾಗಳಲ್ಲಿ ತೆರೆಯುತ್ತಿದ್ದೇವೆ. ಇದರ ಸದುಪಯೋಗ ಪಡಿಸಿಕೊಳ್ಳಿ. ಒಬ್ಬೇ ಒಬ್ಬ ಮತದಾರನ ಹಕ್ಕು ಕಳೆದುಹೋಗಬಾರದು. ಇದು ನಮ್ಮ ಸರ್ಕಾರದ ಉದ್ದೇಶ ಎಂದರು.

ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ಹಲವು ಯೋಜನೆಗಳನ್ನು ಘೋಷಿಸಿದ್ದೇನೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ಯೋಜನೆಯನ್ನೂ ಘೋಷಿಸಿದ್ದೇನೆ. ಈ ಎಲ್ಲಾ ಘೋಷಣೆಗಳೂ ಕಾರ್ಯಕ್ರಮಗಳಾಗಿ ಸಂಬಂಧಪಟ್ಟ ಫಲಾನುಭವಿಗಳಿಗೆ ತಲುಪಬೇಕು. ಇದಕ್ಕಾಗಿ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಖಾಸಗಿ ಉದ್ಯೋಗ ವಿನಿಮಯ ಕೇಂದ್ರವನ್ನೂ ತೆರೆಯಲು  ತೀರ್ಮಾನಿಸಿದ್ದೇವೆ. ಇದಕ್ಕೆ “ಯುವ ಉದ್ಯೋಗ ಸೇತು” ಕಾರ್ಯಕ್ರಮ ಜಾರಿ ಮಾಡುತ್ತಿದ್ದೇವೆ. ಖಾಸಗಿ ಕ್ಷೇತ್ರದ ಉದ್ಯೋಗಗಳ ಬಗ್ಗೆಯೂ ಮಾಹಿತಿ ವಿದ್ಯಾರ್ಥಿ ಯುವ ಜನರಿಗೆ ಸಿಗಲಿದೆ.

ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ನಾಡಗೀತೆಯಲ್ಲಿರುವ ಆಶಯಗಳು ಮತ್ತು ಸಂವಿಧಾನಬದ್ದ ಮೌಲ್ಯಗಳು ಪ್ರತಿಯೊಬ್ಬರ ಮನೆ-ಮನ ತಲುಪಲು ಪೂರಕವಾಗಿ ಸೌಹಾರ್ಧಯುತ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ರಾಜ್ಯದಲ್ಲಿ ಹತ್ತು ಸಾವಿರ “ಭಾರತ್‌ ಜೋಡೋ ಯುವ ಸಂಘ”ಗಳನ್ನು ತೆರೆಯುತ್ತಿದ್ದೇವೆ. ಪ್ರತೀ ಸಂಘಕ್ಕೆ ಹತ್ತು ಲಕ್ಷ ರೂಪಾಯಿ ಅನುದಾನ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯದಾದ್ಯಂತ ಕಂದಾಯ ಇಲಾಖೆ ಭೂಮಿ ಎಲ್ಲೆಲ್ಲಿದೆಯೋ ಅದೆಲ್ಲದರ ಆಡಿಟಿಂಗ್‌ ಆಗಲಿದೆ. ನಿವೇಶನ ರಹಿತ ಎಲ್ಲಾ ಬಡವರಿಗೂ ನಿವೇಶನ ಕೊಡುವುದು ಕಡ್ಡಾಯವಾಗಿ ಜಾರಿಯಾಗಬೇಕು. ಇದಕ್ಕೆ  ಸ್ಪಷ್ಟವಾದ ಯೋಜನೆ ರೂಪಿಸುತ್ತಿದ್ದೇವೆ. ನೀವೆಲ್ಲರೂ ಕಂದಾಯ ಭೂಮಿ ಎಲ್ಲೆಲ್ಲಿದೆಯೋ ಅವುಗಳ ಬಗ್ಗೆ ಸ್ಪಷ್ಟ ದಾಖಲೆ, ವಿವರಗಳನ್ನು ಸಂಗ್ರಹಿಸಿ ಕಳುಹಿಸಬೇಕು ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *