Menu

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಭಾವನ ಕೊಲೆ ಮಾಡಿಸಿದ ನಾದಿನಿ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಭಾವನನ್ನು ನಾದಿನಿಯೇ ಕೊಲೆ ಮಾಡಿಸಿರುವ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ.  ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ನಿವಾಸಿ ಶಿವಮೂರ್ತಿ (49) ಕೊಲೆಯಾದವರು ಎಂದು ಗುರುತಿಸಲಾಗಿದೆ. ಶಿವಮೂರ್ತಿ ಪಾವಗಡದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದರು, ರಜೆ ದಿನಗಳಲ್ಲಿ ಕಾರು ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು.

ಜೂನ್ 26ರಂದು ಕಾರು ಬಾಡಿಗೆ ನೆಪದಲ್ಲಿ ಆರೋಪಿಗಳು ಶಿವಮೂರ್ತಿಯನ್ನು ಚನ್ನಗಿರಿಗೆ ಕರೆಸಿಕೊಂಡು ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸುವುದಕ್ಕಾಗಿ ಶವವನ್ನು ಚಿತ್ರದುರ್ಗದ ಇಂಗಳದಾಳ್ ಗ್ರಾಮದ ಸಮೀಪ ತಂದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಜುಲೈ 1ರಂದು ಇಂಗಳದಾಳ್ ಗ್ರಾಮದ ಬಳಿ ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಶಿವಮೂರ್ತಿ ಶವ ಪತ್ತೆಯಾಗಿತ್ತು. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದ ತಂಡ ಕೊಲೆಯ ಸಂಚನ್ನು ಬಯಲಿಗೆಳೆದಿದೆ.

ಶಿವಮೂರ್ತಿ ಅವರ ಸಹೋದರನ ಪತ್ನಿ ಸುಮತಿ ಹಾಗೂ ನೂರ್ ಅಹ್ಮದ್ ನಡುವೆ ಅಕ್ರಮ ಸಂಬಂಧವಿತ್ತು, ಇದಕ್ಕೆ ಶಿವಮೂರ್ತಿ ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶಿವಮೂರ್ತಿ ಅವರ ನಾದಿನಿ ಸುಮತಿ, ನೂರ್ ಅಹ್ಮದ್, ಅಕ್ಷಯ್ ಹಾಗೂ ಜೇಂಕಾರ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

Related Posts

Leave a Reply

Your email address will not be published. Required fields are marked *