ಬಿಡದಿ ಟೌನ್‌ಶಿಪ್‌ಗೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ರಾಜಕೀಯ ವಿವಾದ, ಪ್ರತಿಭಟನೆಗಳ ನಡುವೆಯೂ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿ ಯೋಜನಾ ವ್ಯಾಪ್ತಿಯ 9 ಕಂದಾಯ ಗ್ರಾಮಗಳಲ್ಲಿ ಮೊದಲಿಗೆ ಮೂರು ಗ್ರಾಮಗಳ 519 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ ಮಾಡಿದೆ.
ಮೊದಲ ಹಂತದ ಭೂ ಸ್ವಾಧೀನ ರಾಮನಗರ ಹಾಗೂ ಹಾರೋಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ನಡೆಯಲಿದ್ದು, ಪ್ರತಿ ಎಕರೆಗೆ 2.07 ಕೋಟಿಯಿಂದ 2.50 ಕೋಟಿ ರೂಪಾಯಿವರೆಗೂ ದರ ನಿಗದಿ ಮಾಡಲಾಗಿದೆ ಇಲ್ಲವೇ ವಾ ಶೇ.50ರಷ್ಟು ಅಭಿವೃದ್ಧಿ ಪಡಿಸಿರುವ ಭೂಮಿ ನೀಡಲು ಆದೇಶಿಸಲಾಗಿದೆ. ಕೆಂಪಯ್ಯನಪಾಳ್ಯದ 384 ಎಕರೆ 22 ಗುಂಟೆ, ಮಂಡಲಹಳ್ಳಿಯ 71 ಎಕರೆ 13 ಗುಂಟೆ ಹಾಗೂ ವಡೇರಹಳ್ಳಿಯ 63 ಎಕರೆ 10 ಗುಂಟೆ ಭೂಸ್ವಾಧೀನಕ್ಕೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ಒಟ್ಟು 754 ರೈತರ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. ಭೂಮಿಗೆ ಸಂಬಂಧಿಸಿದ ಎಲ್ಲಾ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ನಿರ್ದಿಷ್ಟ ಸಮಯದಲ್ಲಿ ಪರಿಹಾರವನ್ನು ಪಡೆಯಲು ಸೂಚಿಸಲಾಗಿದೆ. ಪ್ರತಿ ಎಕರೆಗೆ ಕನಿಷ್ಠ 2.14 ಕೋಟಿರೂ ದರ ನಿಗದಿ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಸರ್ಕಾರ ಫೈನಲ್ ನೋಟಿಫಿಕೇಶನ್ ಮಾಡಿದೆ. ಕಳೆದ 470 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ ಅಲ್ಲಿ ರೈತರ ಮೇಲೆ ಎಫ್ಐಆರ್ ಹಾಕುತ್ತದೆ. ಸರ್ಕಾರ ಯಾವುದೇ ಅಧಿಸೂಚನೆ ಹೊರಡಿಸಿದರೂ ಅದಕ್ಕೆ ರೈತರ ಒಪ್ಪಿಗೆ ಬೇಕು ಎಂದು ಹೇಳಿದ್ದಾರೆ.
ಶೇ. 80% ಪರ್ಸೆಂಟ್ ರೈತರ ವಿರೋಧ ಇದೆ, ಸರ್ಕಾರ ನಾವು ಮಾಡಿದ್ದೇ ತೀರ್ಮಾನ ಅಂತ ದಬ್ಬಾಳಿಕೆಯಲ್ಲಿ ಹೊರಟಿದೆ. ಹಲವು ಪ್ರದೇಶಗಳಲ್ಲಿ ಡ್ರೈ ಲ್ಯಾಂಡ್ ಏರಿಯಾ ಇದೆ. 2006ರಲ್ಲಿ ಐದು ಟೌನ್ ಶಿಪ್ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಅದಕ್ಕೆ ರೈತರ ವಿರೋಧ ಬಂದಿತ್ತು. ಕಾಂಗ್ರೆಸ್ ಅವರು ವಿರೋಧ ಮಾಡಿದ್ದರು. ರೈತರ ಭಾವನೆಗೆ ಬೆಲೆಕೊಟ್ಟು ಯೋಜನೆಯನ್ನು ಸ್ಥಗಿತ ಮಾಡಿದ್ದೆ ಎಂದು ಹೇಳಿದ್ದಾರೆ.


