ದೇಶದಲ್ಲಿ ತೈಲ ಬೆಲೆ ಹೆಚ್ಚಾದಂತೆ ಸಾಮಾನ್ಯ ಜನತೆಯ ಮೇಲೆ ಇದು ನೇರವಾಗಿ ಪರಿಣಾಮ ಬೀರದೆ ಇರಲು ಸಾಧ್ಯ್ಯವಿಲ್ಲ. ಅಗತ್ಯ ವಸ್ತುಗಳು , ಸಾರಿಗೆ, ಕರೆಂಟ್, ನೀರು, ಹಣ್ಣು ತರಕಾರಿ ಹಾಗೂ ಇತರ ಎಲ್ಲ ವಸ್ತುಗಳ ಖರೀದಿ ವಿಚಾರದಲ್ಲಿ ಸಾಮಾನ್ಯ ಪ್ರಜೆಗೆ ಸಂಕಷ್ಟ ಮತ್ತು ಆರ್ಥಿಕ ಹೊರೆ ತಪ್ಪಿದ್ದಲ್ಲ. ಇದರಿಂದ ಪಾರಾಗಬೇಕಾದರೆ ಸರ್ಕಾರಗಳು ನಿಶ್ಚಿತವಾಗಿ ಯಾವ ಪರಿಹಾರೋಪಾಯ ಕಂಡು ಹಿಡಿಯಬೇಕು, ಇದರ ಮಾರ್ಗೋಪಾಯಗಳೇನು ಎಂಬುದರ ಗಂಭೀರ ಚರ್ಚೆ ಸರ್ಕಾರಗಳ ಮಟ್ಟದಲ್ಲಿ ಆಗಬೇಕಿದೆ.
ಮಧ್ಯ ಪ್ರಾಚ್ಯ ಯುದ್ದ ಮತ್ತೆ ಭುಗಿಲೆದ್ದಿದೆ. ಇರಾನ್- ಅಮೆರಿಕ ನಡುವೆ ಮತ್ತಷ್ಟು ಬಿರುಕು ಉಂಟಾಗಿದೆ. ಕಾಯಂ ಶಾಂತಿ ಸೂತ್ರದ ಬಗ್ಗೆ ಇದುವರೆಗಿನ ಎಲ್ಲ ರಾಜತಾಂತ್ರಿಕ ಪ್ರಯತ್ನ ವಿಫಲವಾಗಿದೆ. ಹಿಂದಿನ ಕಹಿ ಘಟನೆಗಳನ್ನು ಮರೆಯದ ಇರಾನ್, ಈಗ ದೊಡ್ಡಣ್ಣನ ಜೊತೆ ಶಾಂತಿ ಸಂಧಾನ ನಡೆಸಲು ನಿರಾಕರಿಸಿದೆ. ಇದರ ಪರಿಣಾಮವಾಗಿ ತೈಲ ದೇಶಗಳಲ್ಲಿ ಅನಿಶ್ಚಿತತೆ ಹಾಗೂ ಆತಂಕ ಮುಂದುವರಿದಿದೆ. ಅಲ್ಲದೆ ಇದರ ಅಡ್ಡ ಪರಿಣಾಮ ಭಾರತವೂ ಸೇರಿದಂತೆ ಎಲ್ಲ ತೈಲ ಅವಲಂಬಿತ ದೇಶಗಳ ಮೇಲೆ ಬೀರಿದೆ.
ಭಾರತದಲ್ಲಿ ಕಳೆದ ಎರಡು ವಾರಗಳ ಅಂತರದಲ್ಲಿ ತೈಲ ಬೆಲೆ ಗಣನೀಯವಾಗಿ ಹೆಚ್ಚಿದೆ ತೈಲ ದರ ಹೆಚ್ಚಳ ವಿಚಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅತಿ ಜಾಣ ಅನುಸರಿಸಿದೆ. ಜನಾಕ್ರೋಶವನ್ನು ನಿಗ್ರಹಿಸುವ ದಿಶೆಯಲ್ಲಿ ಈಗ ಈ ವಿಷಯದಲ್ಲಿ ಕೇಂದ್ರ ಸರ್ಕಾರ ವ್ಯೂಹಾತ್ಮಕ ನಡೆ ಅನುಸರಿಸಿದೆ. ಆದರೆ ತೈಲ ಬೆಲೆ ಹೆಚ್ಚಾದಂತೆ ಸಾಮಾನ್ಯ ಜನತೆಯ ಮೇಲೆ ಇದು ನೇರವಾಗಿ ಪರಿಣಾಮ ಬೀರದೆ ಇರಲು ಸಾಧ್ಯ್ಯವಿಲ್ಲ. ಅಗತ್ಯವಸ್ತುಗಳು ಬಸ್ ಸಂಚಾರ, ಕರೆಂಟ್, ನೀರು, ಹಣ್ಣು ತರಕಾರಿ ಹಾಗೂ ಇತರೆ ಎಲ್ಲ ವಸ್ತುಗಳ ಖರೀದಿ ವಿಚಾರದಲ್ಲಿ ಸಾಮಾನ್ಯ ಪ್ರಜೆಗೆ ಸಂಕಷ್ಟ ಮತ್ತು ಆರ್ಥಿಕ ಹೊರೆ ತಪ್ಪಿದ್ದಲ್ಲ. ಇದರಿಂದ ಪಾರಾಗಬೇಕಾದರೆ ಸರ್ಕಾರಗಳು ನಿಶ್ಚಿತವಾಗಿ ಯಾವ ಪರಿಹಾರೋಪಾಯ ಕಂಡು ಹಿಡಿಯಬೇಕು, ಇದರ ಮಾರ್ಗೋಪಾಯಗಳೇನು ಎಂಬುದರ ಗಂಭೀರ ಚರ್ಚೆ ದೇಶದ ಮಟ್ಟದಲ್ಲಿ ನಡೆಸಬೇಕು.
ದುರಂತ ಎಂದರೆ ದೇಶದ ರಾಜಧಾನಿಯಲ್ಲಿ ಈ ಕುರಿತು ಸಂಬಂಧಿತ ಮಂತ್ರಿಗಳು ಕೂಡಾ ಜನತೆಗೆ ಸೂಕ್ತ ಮತ್ತು ನಂಬಲರ್ಹ ಹೇಳಿಕೆಗಳನ್ನು ನೀಡದಿರುವುದು, ಮೋದಿ ಸರ್ಕಾರಕ್ಕೆ ರಾಜಕೀಯವಾಗಿ ತನ್ನ ಬುಡವನ್ನು ಭದ್ರಪಡಿಸಿಕೊಳ್ಳುವ ಕಡೆಯೇ ಹೆಚ್ಚು ಆಸಕ್ತಿ ಇದೆ. ಜಾಗತಿಕವಾಗಿ ಕಳೆದ ಆರು ತಿಂಗಳಿಂದ ತಲೆಯೆತ್ತಿದ ತೈಲ ಬಿಕ್ಕಟ್ಟು ಮತ್ತು ಕೊಲ್ಲಿ ದೇಶಗಳಲ್ಲಿ ಭಾರತೀಯರು ಅನುಭವಿಸುತ್ತಿರುವ ಯಾತನೆ ಮತ್ತು ಅಲ್ಲಿ ನೆಲೆಸಿರುವ ಭಾರತೀಯ ಯುವ ಸಮುದಾಯದ ನೌಕರಿ ಮತ್ತು ಭವಿಷ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ . ಇದೊಂದು ಕಳವಳಕಾರಿ ವಿದ್ಯಮಾನ. ವಿದೇಶಾಂಗ ಸಚಿವ ಜೈಶಂಕರ್ ಇರಾನ್ ಮತ್ತು ಇಸ್ರೇಲ್ ನಡುವೆ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಶಮನಗೊಳಿಸಲು ಭಾರತದ ನಿಜವಾದ ರಾಜತಾಂತ್ರಿಕ ಪಾತ್ರದ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿಲ್ಲ.
ಈ ಹಿಂದೆ ಇಂತಹ ಬಿಕ್ಕಟ್ಟು ತಲೆದೋರಿದಾಗ ಅಂದಿನ ವಿದೇಶಾಂಗ ಮಂತ್ರಿಗಳಾಗಿದ್ದ ವಾಜಪೇಯಿ, ಪಿವಿ ನರಸಿಂಹರಾವ್ , ನಟವರ್‌ಸಿಂಗ್, ಪ್ರಣಬ್ ಮುಖರ್ಜಿ ಮೊದಲಾದವರು ಸಮಸ್ಯೆ ಪರಿಹಾರದ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದರು. ಈಗ ಈ ವಿಚಾರದಲ್ಲಿ ದೇಶದ ನಿಲುವು ಅಸ್ಪಷ್ಟವಾಗಿದ್ದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪಕ್ಷಗಳನ್ನು ಸಂಪೂರ್ಣವಾಗಿ ಅಳಿಸಿ ಹಾಕಬೇಕೆಂಬ ಹಪಾಹಪಿಯಲ್ಲಿರುವ ದಿಲ್ಲಿ ಬಿಜೆಪಿ ಅಗ್ರ ನಾಯಕರಿಗೆ ಈ ದೇಶದ ಸಾಮಾನ್ಯ ಬವಣೆ ಮತ್ತು ಸಂಕಷ್ಟ ವಂತೂ ಬೇಕಿಲ್ಲ. ಇದು ಕಳವಳಕಾರಿ ಸಂಗತಿ ಹೌದು.


