Menu

ಮೇಕೆದಾಟು ಯೋಜನೆ ವಿರುದ್ಧ ನಿಂತ ಟಿವಿಕೆ, ಕಾಂಗ್ರೆಸ್‌ ಬೆಂಬಲ ವಾಪಸ್‌ ಪಡೆಯಲಿ: ಆರ್‌ ಅಶೋಕ ಸವಾಲು

ತಮಿಳುನಾಡಲ್ಲಿ ಟಿವಿಕೆ ಪಕ್ಷದ ಸರ್ಕಾರ ಮೇಕೆದಾಟು ಯೋಜನೆಗೆ ವಿರುದ್ಧವಾಗಿ ನಿರ್ಣಯ ಕೈಗೊಂಡಿದೆ. ಈಗ ಕಾಂಗ್ರೆಸ್‌ ತನ್ನ ಬೆಂಬಲವನ್ನು ಹಿಂಪಡೆಯಲಿ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಲ್ಲಿ ಡಿಎಂಕೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್‌, ಟಿವಿಕೆ ಜೊತೆ ಸೇರಿಕೊಂಡಿದೆ. ಅದೇ ಟಿವಿಕೆ ಪಕ್ಷ ಈಗ ಮೇಕೆದಾಟು ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ನಿರ್ಣಯ ಕೈಗೊಂಡಿದೆ. ಕಾಂಗ್ರೆಸ್‌ ಪಕ್ಷಕ್ಕೆ ಧೈರ್ಯವಿದ್ದರೆ ಟಿವಿಕೆಗೆ ನೀಡಿದ ಬೆಂಬಲವನ್ನು ವಾಪಸ್‌ ಪಡೆಯಬೇಕು. ಇಲ್ಲವಾದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಡಬಲ್‌ ಸ್ಟಾಂಡರ್ಡ್‌ ಹಾಗೂ ಎರಡು ನಾಲಿಗೆ ಎಂದು ಒಪ್ಪಿಕೊಳ್ಳಬೇಕು. ಕಾಂಗ್ರೆಸ್‌ ಸರ್ಕಾರ ಇರುವವರೆಗೂ ಮೇಕೆದಾಟು ಯೋಜನೆ ಜಾರಿಯಾಗಲು ಸಾಧ್ಯವಿಲ್ಲ. ಇವರು ಪಾದಯಾತ್ರೆ ಮಾಡಿದ್ದು ಕೇವಲ ಮತಕ್ಕಾಗಿ ಎಂದು ಟೀಕೆ ಮಾಡಿದರು.

ಕಾಂಗ್ರೆಸ್‌ ಸರ್ಕಾರ ರೇಷನ್‌ ಕಾರ್ಡ್‌ಗಳಿಗೆ ಕತ್ತರಿ ಹಾಕಿ ಗ್ಯಾರಂಟಿ ಫಲಾನುಭವಿಗಳನ್ನು ಕಡಿಮೆ ಮಾಡುತ್ತಿದೆ. ಉಚಿತ ವಿದ್ಯುತ್‌  ಯೋಜನೆಯಲ್ಲೂ ಬೋಗಸ್‌ ಇದೆ ಎನ್ನುತ್ತಿದ್ದಾರೆ. ಸುಮಾರು 20 ಲಕ್ಷ ಫಲಾನುಭವಿಗಳನ್ನು ಕಡಿಮೆ ಮಾಡಲು ಕುತಂತ್ರ ಮಾಡಲಾಗಿದೆ. 1.20 ಲಕ್ಷ ಕೋಟಿ ಸಾಲವಿದ್ದು, ಅದಕ್ಕೆ ಬಡ್ಡಿ ಕಟ್ಟಲು ಕೂಡ ಆಗುತ್ತಿಲ್ಲ. ನೌಕರರಿಗೆ ಸಂಬಳ ಕೂಡ ನೀಡುತ್ತಿಲ್ಲ. ನಾಲ್ಕು ತಿಂಗಳಿಂದ ಅನೇಕ ಪಿಂಚಣಿಗಳನ್ನು ನೀಡಿಲ್ಲ. ಪಿಂಚಣಿ ನೀಡಿಲ್ಲವೆಂದರೆ ಸರ್ಕಾರ ಪಾಪರ್‌ ಆಗಿದೆ ಎಂದೇ ಅರ್ಥ ಎಂದರು.

ಮಳೆ ಕಡಿಮೆಯಾಗಿರುವುದರಿಂದ ಬರ ಶುರುವಾಗಲಿದೆ. ಮುಂದೆ ಹಸುಗಳಿಗೆ ಮೇವು ಇರುವುದಿಲ್ಲ. ಇಂತಹ ಸಮಯದಲ್ಲಿ ಮೇವು ನೀಡುವ ಬಿಡದಿಯಲ್ಲಿ ಲೇಔಟ್‌ ಮಾಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಆಹಾರ ಧಾನ್ಯಗಳ ಕೊರತೆಗೆ ಏನು ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದಿಲ್ಲ. ಸಿದ್ದರಾಮಯ್ಯನವರಿಗೆ ಆಡಳಿತದ ಬಗ್ಗೆ ಗೊತ್ತಿತ್ತು. ಆದರೆ ಸಿಎಂ ಡಿ.ಕೆ.ಶಿವಕುಮಾರ್‌ಗೆ ರಾಜಕೀಯ ಗೊತ್ತಿದೆಯೇ ಹೊರತು ಆಡಳಿತದ ಬಗ್ಗೆ ಏನೂ ಗೊತ್ತಿಲ್ಲ ಎಂದು ಟೀಕಿಸಿದರು.

ಅಡ್ಡ ಮತದಾನ ಮಾಡಿರುವುದರ ಬಗ್ಗೆ ಹಲವು ಮಾಹಿತಿ ಬಂದಿದೆ. ಈ ಬಗ್ಗೆ ಸಮಿತಿ ರಚಿಸಿದ್ದು, ಸತ್ಯ ಹೊರಬರಲಿದೆ. ಪಕ್ಷಕ್ಕೆ ಚೂರಿ ಹಾಕಿದ ಖದೀಮರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಡ್ಡ ಮತದಾನ ಮಾಡಿದ್ದು ಯಾರೆಂದು ತಿಳಿಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಕೆಲವರು ಹಣ ಪಡೆದು ಮತ ಚಲಾಯಿಸಿದ್ದಾರೆ. ಕೋಟ್ಯಂತರ ಹಣ ಹಾಗೂ ಅನುದಾನದ ವಿಚಾರ ಹೊರಬರಲಿದೆ. ಮತದಾನದ ಸಮಯದಲ್ಲಿ ಯಾರು ಎಲ್ಲಿದ್ದರು, ಯಾರು ಯಾರೊಂದಿಗೆ ಮಾತಾಡಿದ್ದರು ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ವಿಚಾರವನ್ನು ಕೇಂದ್ರದ ನಾಯಕರ ಗಮನಕ್ಕೂ ತರಲಾಗಿದೆ. ಮುಂದಿನ ವಾರ ಬಂದು ಭೇಟಿ ಮಾಡುವಂತೆ ಕೇಂದ್ರದ ನಾಯಕರು ಸೂಚಿಸಿದ್ದಾರೆ. ಆ ಸಮಯದಲ್ಲಿ ವರದಿ ನೀಡುತ್ತೇವೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ಮಾಡಿದ್ದು, ಅವರಿಗೂ ಇದರಿಂದ ಬೇಸರವಾಗಿದೆ. ಇದಕ್ಕೆ ಸರಿಯಾದ ಉತ್ತರ ನೀಡುತ್ತೇವೆ. ಇದು ಬಿಜೆಪಿ ಅಥವಾ ಜೆಡಿಎಸ್‌ನಿಂದ ಆಗಿದೆ ಎಂದು ಹೇಳಲ್ಲ. ಮೋಸ ಮಾಡಿರುವವರು ಯಾರು ಎಂದು ಕಂಡುಹಿಡಿಯುತ್ತೇವೆ. ಅಡ್ಡ ಮತದಾನ ಮಾಡಿರುವವರು ಮತ್ತೆ ಶಾಸಕರಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

Related Posts

Leave a Reply

Your email address will not be published. Required fields are marked *