Thursday, September 17, 2026
Menu

ತುಮಕೂರು ಟ್ರಿಪ್ ನಿಂದ ಮರಳುತ್ತಿದ್ದ ಮೂವರು ಟೆಕ್ಕಿಗಳ ಸಾವು

tumakur accident

ತುಮಕೂರು: ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಟೆಕ್ಕಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ನೆಲಹಾಳ್ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಕಾರಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಅನಿಕೇತ್ (42), ಅಭೀರ್ (44) ಹಾಗೂ ಆಂಧ್ರ ಪ್ರದೇಶ ಮೂಲದ ಸನ್ಮೋಕ್ತಿ (35) ಮೃತ ಸಾಫ್ಟ್​ವೇರ್ ಎಂಜಿನಿಯರ್ ಎಂದು ಗುರುತಿಸಲಾಗಿದೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ರಜೆಗೆಂದು ಪ್ರವಾಸಕ್ಕೆ ತೆರಳಿದ್ದ ಟೆಕ್ಕಿಗಳು: ಮೃತರೆಲ್ಲರೂ ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಎಂಜಿನಿಯರ್​ಗಳಾಗಿ ಕೆಲಸ ಮಾಡುತ್ತಿದ್ದರು. ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗೋಕರ್ಣ, ಮುರುಡೇಶ್ವರ, ಉಡುಪಿ ಕಡೆಗೆ ಕಾರಿನಲ್ಲಿ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಇಂದು ಬೆಂಗಳೂರಿಗೆ ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ತುಮಕೂರು ಎಸ್​​ಪಿ ಅಶೋಕ್ ಕೆವಿ ಹಾಗೂ ಕೋರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾರಿಗೆ ಹಿಂಬದಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಮಾರುತಿ ಎರಿಟಿಗಾ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಲ್ಲಿ ಚಾಲಕ ಸೇರಿ 6 ಜನರಿದ್ದರು. ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು, ಇನ್ನುಳಿದ ಮೂವರು ಅಪಾಯದಿಂದ ಪಾರಾಗಿದ್ದಾರೆ. ಮೃತರನ್ನು ಮರಣೋತ್ತರ ಪರೀಕ್ಷೆಗೆ ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ ಎಂದು ತುಮಕೂರು ಎಸ್​ಪಿ ಅಶೋಕ್ ಕೆವಿ ಮಾಹಿತಿ ನೀಡಿದರು.

ಏರಿ ಇದ್ದರಿಂದ ಲಾರಿ ನಿಧಾನವಾಗಿ ಚಲಿಸುತ್ತಿತ್ತು. ಆಗ ಹಿಂದಿನಿಂದ ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದಿದೆ. ಮಲಗಿದ್ದರಾ ಅಥವಾ ಅಜಾಗರೂಕತೆಯಿಂದ ಅಪಘಾತವಾಗಿದೆಯಾ ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಮೃತರು ಎಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿಲ್ಲ ಎಂದು ಎಸ್​ಪಿ ತಿಳಿಸಿದರು.

ಏರು ಇದ್ದಿದ್ದರಿಂದ ಲೋಡ್ ಆದ ಲಾರಿ ನಿಧಾನವಾಗಿ ಚಲಿಸುತ್ತಿತ್ತು. ಆಗ ವೇಗವಾಗಿ ಬಂದ ಕಾರು ಹಿಂಬದಿಯಿಂದ ಲಾರಿಗೆ ಗುದ್ದಿದೆ. ಪರಿಣಾಮ ಲಾರಿ ಕೆಳಗೆ ಕಾರು ಸಿಕ್ಕಿಕೊಂಡಿತ್ತು. ಬಳಿಕ ಕ್ರೇನ್ ಮೂಲಕ ಕಾರು ತೆರವುಗೊಳಿಸಿ, ಕಾರಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರು ಮತ್ತು ಲಾರಿ ತೆರವುಗೊಳಿಸಿದ ಪೊಲೀಸರು, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Related Posts

Leave a Reply

Your email address will not be published. Required fields are marked *