Thursday, September 17, 2026
Menu

ಬೆಂಗಳೂರು- ಕುಣಿಗಲ್‌ ಬಿಎಂಟಿಸಿ ಹವಾನಿಯಂತ್ರಿತ ವಜ್ರ ವಿಸ್ತಾರ ಬಸ್‌ಗಳಿಗೆ ಚಾಲನೆ

ಬೆಂಗಳೂರಿನಿಂದ ತುಮಕೂರು ಜಿಲ್ಲೆಯ ಕುಣಿಗಲ್ ಗೆ 8 ಬಿಎಂಟಿಸಿ ಹವಾನಿಯಂತ್ರಿತ ವಜ್ರ ವಿಸ್ತಾರ ಬಸ್ ಗಳ ಸಂಚಾರಕ್ಕೆ ಸಾರಿಗೆ ಸಚಿವ ಬೈರತಿ ಸುರೇಶ್  ಹಸಿರು ನಿಶಾನೆ ತೋರಿದರು.

ಕುಣಿಗಲ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಬೈರತಿ ಸುರೇಶ್ ಅವರು, ಈ ಸಾರಿಗೆ ಸಂಪರ್ಕದಿಂದ ಕುಣಿಗಲ್ ರಾಜಧಾನಿಗೆ ಇನ್ನಷ್ಟು ಹತ್ತಿರವಾಗಲಿದೆ ಎಂದರು. ಕೇಂದ್ರ ಸರ್ಕಾರದಿಂದ 4550 ಎಲೆಕ್ಟ್ರಿಕ್ ಬಸ್ ಗಳನ್ನು ಬಿಎಂಟಿಸಿ ಗೆ ಪಡೆಯಲಾಗುತ್ತಿದೆ. ಈ ಬಸ್ ಗಳು ಮುಂದಿನ 4-5 ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ ಎಂದು ತಿಳಿಸಿದರು.

ಈ ಬಸ್ ಗಳಿಗಾಗಿ  ರಾಜ್ಯ ಸರ್ಕಾರ 12 ವರ್ಷಗಳಲ್ಲಿ  21 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ ಎಂದು ಮಾಹಿತಿ ನೀಡಿದರು. ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಗಳಲ್ಲಿ ಶಕ್ತಿ ಯೋಜನೆಯಡಿ 26473 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ವಾರ್ಷಿಕ 10 ಸಾವಿರ ಕೋಟಿ ರೂಪಾಯಿಗಳನ್ನು ಭರಿಸುತ್ತಿದೆ ಎಂದು  ಸಚಿವರು ತಿಳಿಸಿದರು.

ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣವೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ  ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ  50 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ. ಇದಕ್ಕೆ ಸರ್ಕಾರ ವಾರ್ಷಿಕ 350-400 ಕೋಟಿ ರೂಪಾಯಿ ಹಣ ವ್ಯಯಿಸಲಿದೆ ಎಂದರು.

ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜನಪರ ಕಾಳಜಿಯಿಂದಾಗಿ ಕಾಂಗ್ರೆಸ್ ಸರ್ಕಾರ ಜನತೆಗೆ ಪಂಚ ಗ್ಯಾರೆಂಟಿ ಕಾರ್ಯಕ್ರಮಗಳನ್ನು ನೀಡಿದೆ. ಇದರಿಂದ ಕೋಟ್ಯಂತರ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ಮತ್ತು ಜೆಡಿಎಸ್ ನವರು ಇಂತಹ ಒಂದೇ ಒಂದು ಕಾರ್ಯಕ್ರಮ ನೀಡಲಿಲ್ಲ. ಎರಡೂ ಪಕ್ಷಗಳ ನಾಯಕರು ಕೇವಲ ರಾಜಕೀಯ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ ಎಂದು ಲೇವಡಿ ಮಾಡಿದರು.

ಬಿಡದಿ ಟೌನ್ ಶಿಪ್ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ರೂಪಿಸಿದ್ದಲ್ಲ. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರೂಪಿಸಿದ್ದರು.  ಯಾವ ಕಾರಣದಿಂದ ನಿಲ್ಲಿಸಿದರೋ ಗೊತ್ತಿಲ್ಲ ಎಂದು ಸಚಿವರು ಹೇಳಿದರು.  ಶೇಕಡಾ 70-80 ರಷ್ಟು ರೈತರು ಈ ಯೋಜನೆಗೆ ಭೂಮಿ ನೀಡಲು ಮುಂದಾಗಿದ್ದಾರೆ. ಅವರಿಗೆ ಉತ್ತಮ ಪರಿಹಾರ ಕೊಡಲಾಗುತ್ತಿದೆ. ಬೆಂಗಳೂರು ನಗರ ಇನ್ನಷ್ಟು ವಿಸ್ತಾರವಾಗಬೇಕೆಂಬುದು ಸಿಎಂ ಡಿಕೆ ಶಿವಕುಮಾರ್ ಮತ್ತು ನಮ್ಮೆಲ್ಲರ ಆಶಯ.  ಐಟಿ ಬಿಟಿ ಸೇರಿದಂತೆ ಅನೇಕ ಕೈಗಾರಿಕೆಗಳು ಹೆಚ್ಚಾಗಬೇಕು. ಇದರಿಂದ ಉದ್ಯೋಗ ಅವಕಾಶಗಳು ಹೆಚ್ಚಲಿವೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕರ್ನಾಟಕವನ್ನು ದೇಶದಲ್ಲಿ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ನಾವೆಲ್ಲಾ ಪಣ ತೊಟ್ಟಿದ್ದೇವೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು. ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಎಂ ಡಿಕೆ ಶಿವಕುಮಾರ್  ಅಣ್ಣ ತಮ್ಮಂದಿರಂತೆ ಇದ್ದಾರೆ. ಅವರಿಬ್ಬರ ಶ್ರಮದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 2028 ಕ್ಕೂ ಇವರಿಬ್ಬರ ನಾಯಕತ್ವದಲ್ಲಿ ಪಕ್ಷ 140ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆದ್ದು ಭರ್ಜರಿಯಾಗಿ ಅಧಿಕಾರಕ್ಕೆ ಬರಲಿದೆ ಎಂದು ಘೋಷಿಸಿದರು.

ಹಗಲಿರುಳೂ ಜನರ ಬಗ್ಗೆ ಕಾಳಜಿ ತೋರಿ ಹಲವು ಕಾರ್ಯಕ್ರಮಗಳನ್ನು ಕೊಟ್ಟಿರುವ ಡಿಕೆ ಸುರೇಶ್ ಅವರನ್ನು ರಾಮನಗರ ಮತದಾರರು ಯಾವ ಕಾರಣದಿಂದ ಸೋಲಿಸಿದ್ದಾರೋ ಗೊತ್ತಿಲ್ಲ. ಈಗ ತಪ್ಪಿನ ಅರಿವಾಗಿರಬಹುದು. ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವುದು ಅಗತ್ಯವಾಗಿದೆ ಎಂದರು.

Related Posts

Leave a Reply

Your email address will not be published. Required fields are marked *