ರಾಜ್ಯ ವಿಧಾನಮಂಡಲದ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗಿದ್ದು, ಮುಂದಿನ ಆರು ತಿಂಗಳೊಳಗೆ ವಿಧಾನಸಭೆ ಹಾಗೂ ವಿಧಾನಪರಿಷತ್ ಸಂಪೂರ್ಣ ಕಾಗದರಹಿತ ವ್ಯವಸ್ಥೆಗೆ ಪರಿವರ್ತನೆ ಆಗಲಿವೆ ಎಂದು ಸ್ಪೀಕರ್ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದ ವೇಳೆ ಸದಸ್ಯರಿಗೆ ಮುದ್ರಿತ ಕಡತಗಳು, ಪ್ರಶ್ನೋತ್ತರ ಪಟ್ಟಿ, ಕಾರ್ಯಸೂಚಿ ಹಾಗೂ ವಿಧೇಯಕಗಳ ಪ್ರತಿಗಳನ್ನು ವಿತರಿಸುವ ಬದಲು, ಇನ್ ಬಿಲ್ಟ್ ಅಪ್ಲಿಕೇಶನ್ ಹೊಂದಿರುವ ಐಪ್ಯಾಡ್‌ಗಳ ಮೂಲಕವೇ ಎಲ್ಲ ಮಾಹಿತಿ ಒದಗಿಸಲಾಗುವುದು. ಈ ಮೂಲಕ ಕೋಟ್ಯಂತರ ರೂಪಾಯಿ ಮುದ್ರಣ ವೆಚ್ಚ ಉಳಿತಾಯ ಆಗುವುದರ ಜತೆಗೆ ಪರಿಸರ ಸಂರಕ್ಷಣೆ ಸಾಧ್ಯ ಆಗಲಿದೆ ಎಂದು ಹೇಳಿದರು.
ಡಿಜಿಟಲ್ ವಿಧಾನಮಂಡಲ ನಿರ್ಮಾಣಕ್ಕಾಗಿ ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ ಜಂಟಿಯಾಗಿ ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (ನೆವಾ) ಯೋಜನೆಯೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಯೋಜನೆಯ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ನೆವಾ ಅಧಿಕಾರಿಗಳು ಹಾಗೂ ರಾಜ್ಯ ಉಸ್ತುವಾರಿ ಸಮಿತಿ ನಿರ್ವಹಿಸಲಿದೆ. ಬೆಂಗಳೂರು ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣಸೌಧದಲ್ಲಿನ ವಿಧಾನಸಭಾ ಕಲಾಪಗಳ ಡಿಜಿಟಲೀಕರಣಕ್ಕೆ ₹ 78 ಕೋಟಿ ಹಾಗೂ ವಿಧಾನಪರಿಷತ್ ಡಿಜಿಟಲೀಕರಣಕ್ಕೆ ₹52 ಕೋಟಿ ಸೇರಿದಂತೆ ಒಟ್ಟು ₹ 130 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 60 ರಷ್ಟು ಅನುದಾನ ನೀಡಲಿದೆ ಎಂದರು.
ಅಧಿವೇಶನದ ದಿನದ ಕಾರ್ಯಸೂಚಿ, ಪ್ರಶ್ನೋತ್ತರ ಪಟ್ಟಿ, ವಿಧೇಯಕಗಳು ಸೇರಿದಂತೆ ಇತರೆ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸದಸ್ಯರಿಗೆ ಕಳುಹಿಸಲಾಗುತ್ತದೆ. ಇದರಿಂದ ದಾಖಲೆಗಳು ಕಳೆದುಹೋಗುವ ಸಾಧ್ಯತೆ ಕಡಿಮೆಯಾಗುವುದರ ಜೊತೆಗೆ ತ್ವರಿತ ಮಾಹಿತಿ ವಿನಿಮಯಕ್ಕೂ ನೆರವಾಗಲಿದೆ. ಅಧಿವೇಶನದ ವೇಳೆ ಸದಸ್ಯರ ಮೇಜುಗಳಲ್ಲಿ ಐಪ್ಯಾಡ್‌ಗಳನ್ನು ಅಳವಡಿಸಲಾಗುವುದು. ಕಲಾಪ ಮುಗಿದ ಬಳಿಕ ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಹೊಸ ವ್ಯವಸ್ಥೆಯ ಪರಿಣಾಮಕಾರಿ ಬಳಕೆಗಾಗಿ ಎಲ್ಲ ಶಾಸಕರಿಗೂ ವಿಶೇಷ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಶಾಸಕರ ಹಾಜರಾತಿ ದಾಖಲಾತಿ ಸೇರಿದಂತೆ ಹಲವು ಆಡಳಿತಾತ್ಮಕ ಪ್ರಕ್ರಿಯೆಗಳನ್ನೂ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾಜರಾತಿ ಸೇರಿದಂತೆ ಅನೇಕ ಸೇವೆಗಳು ಆನ್‌ಲೈನ್ ಮೂಲಕವೇ ನಿರ್ವಹಣೆಯಾಗಲಿವೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿಧಾನಸೌಧದ ವಿವಿಧ ಮಹಡಿಗಳಲ್ಲಿರುವ ಕಚೇರಿಗಳು, ಅಧಿಕಾರಿಗಳು ಹಾಗೂ ಸೇವೆಗಳ ಕುರಿತು ಮಾಹಿತಿ ನೀಡಲು ವಿಶೇಷ ಡಿಜಿಟಲ್ ಮಾಹಿತಿ ಕೇಂದ್ರಗಳನ್ನು ಅಳವಡಿಸಲು ವಿಧಾನಮಂಡಲದ ಐಟಿ ತಂಡ ಸಿದ್ಧತೆ ನಡೆಸಿದೆ ಎಂದರು.
6 ತಿಂಗಳಲ್ಲಿ ಸಂಪೂರ್ಣ ಕಾಗದರಹಿತ ವಿಧಾನಮಂಡಲ, ಸದಸ್ಯರಿಗೆ ಐಪ್ಯಾಡ್ ಮೂಲಕ ದಾಖಲೆಗಳ ವಿತರಣೆ , ಡಿಜಿಟಲೀಕರಣಕ್ಕೆ ₹130 ಕೋಟಿ ರೂ. ವೆಚ್ಚ, ಕೇಂದ್ರ ಸರ್ಕಾರದಿಂದ ಶೇ.60 ಅನುದಾನ, ಶಾಸಕರಿಗೆ ವಿಶೇಷ ತರಬೇತಿ, ವಿಧಾನಸೌಧದಲ್ಲಿ ಡಿಜಿಟಲ್ ಮಾಹಿತಿ ಕಿಯೋಸ್ಕ್ ಜಾರಿಗೆ ಬರಲಿದೆ ಎಂದು ತಿಳಿಸಿದರು.


