Menu

ನಿಸ್ವಾರ್ಥ ಸೇವೆಯೇ ಧರ್ಮ, ನನಗೆ ಸೇವಾ ಚಟುವಟಿಕೆ ಬಿಟ್ಟರೆ ಬೇರೆ ಆಯ್ಕೆ ಇಲ್ಲ: ಸದ್ಗುರು ಶ್ರೀ ಮಧುಸೂದನ ಸಾಯಿ

ಹಸಿದ ಮಗು ಅಮ್ಮನ ಹತ್ತಿರ, ಬದುಕುವ ಆಸೆಯಿರುವ ರೋಗಿ ವೈದ್ಯರ ಹತ್ತಿರ, ಕಲಿಯುವ ಆಸೆಯಿರುವ ವಿದ್ಯಾರ್ಥಿ ಶಿಕ್ಷಕರ ಹತ್ತಿರ ಕೋರಿಕೆ ಇಟ್ಟರೆ ಅವರು ಏನು ಮಾಡಬಹುದು? ಅವರಿಗೆ ಇಲ್ಲ ಎನ್ನುವ ಆಯ್ಕೆ ಇರುತ್ತದೆಯೇ? ಅದೇ ರೀತಿ ನನಗೂ ಸೇವಾ ಚಟುವಟಿಕೆ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಚಿಕ್ಕಬಳಾಪುರದಲ್ಲಿ  ನಡೆದ “ದಿವ್ಯ ಸಂಜೆ” ಸಂವಾದ ಸರಣಿಯ ಮೊದಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಟ ಸುಚೇಂದ್ರ ಪ್ರಸಾದ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಎಲ್ಲರೂ ನಮ್ಮವರೇ ಇಲ್ಲಿ ಯಾರೂ ಬೇರೆಯವರಲ್ಲ ಎನ್ನುವ ಸಂಕಲ್ಪದಿಂದ ನಾನು ಕೆಲಸ ಮಾಡುತ್ತಿದ್ದೇನೆ. ಸೇವೆಯು ನನಗೆ ಆಯ್ಕೆಯಲ್ಲ. ತಾಯಿಗೆ ಮಗುವಿನ ಬಗ್ಗೆ ಇರುವಂಥದ್ದೇ ಪ್ರೇಮ, ನಿಸ್ವಾರ್ಥ ಮನೋಭಾವದಿಂದ ನಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ತಮ್ಮ ನಿಲುವನ್ನು ಪುನರುಚ್ಚರಿಸಿದರು.

ಊಟ, ನಿದ್ರೆ, ಸಂಸಾರ ಇಷ್ಟನ್ನೇ ಮಾಡಿದರೆ ಮನುಷ್ಯ ಪಶು ಆಗ್ತಾನೆ. ಹೀಗಾಗಿ ಮನುಷ್ಯನಾಗಿ ಹುಟ್ಟಿದ ಮೇಲೆ ಧರ್ಮವನ್ನು ಪಾಲಿಸಬೇಕು. ಧರ್ಮ ಎಂದರೆ ಮಸೀದಿ, ಮಂದಿರಕ್ಕೆ ಹೋಗುವುದು ಅಲ್ಲ. ನಿಸ್ವಾರ್ಥ ಸೇವೆಯೇ ಧರ್ಮ’ ಎಂದು ಬಣ್ಣಿಸಿದರು.

ನಾನು ಛತ್ತೀಸಗಡದಲ್ಲಿ ಹುಟ್ಟಿದರೂ ಕನ್ನಡ ತಾಯಿಯ ಮಡಿಲಲ್ಲಿ ಬೆಳೆಯುತ್ತಿದ್ದೇನೆ. ಅನ್ನ ಅಕ್ಷರ ಆರೋಗ್ಯ ಸೇವೆಗಳನ್ನು ಉಚಿತವಾಗಿ ಕೊಡಬೇಕು ಎನ್ನುವುದಕ್ಕೆ ಸತ್ಯ ಸಾಯಿ ಬಾಬಾ ಅವರೇ ಪ್ರೇರಣೆ. ಅವರು ಸುಸ್ಥಿರ ಸಂಸ್ಥೆಗಳನ್ನು ಕಟ್ಟಿದ್ದರಿಂದಲೇ ನಾನು ಒಂದು ಹಂತಕ್ಕೆ ಬರಲು ಸಾಧ್ಯವಾಯಿತು. ನನಗೆ ಬಾಬಾ ಅವರಿಂದ ಏನು ಸಿಕ್ಕಿದೆಯೋ ಅದನ್ನೇ ನಾನು ಸಮಾಜಕ್ಕೆ ಕೊಡಲು ಪ್ರಯತ್ನಿಸುತ್ತಿರುವೆ ಎಂದು ವಿವರಿಸಿದರು.

ಭಾರತೀಯ ಪರಂಪರೆಯಲ್ಲಿ ಅನ್ನ, ಅಕ್ಷರ ಮತ್ತು ಅರೋಗ್ಯ ಸೇವೆಗೆ ಎಂದಿಗೂ ಶುಲ್ಕ ಇರಲಿಲ್ಲ. ಹಣವಿದ್ದವರು ಮಾತ್ರವೇ ಓದಬೇಕು, ಶ್ರೀಮಂತರ ಜೀವ ಮಾತ್ರ ಉಳಿಯಬೇಕು ಎನ್ನುವುದು ಸರಿಯಾಗುತ್ತದೆಯೇ? ಹೀಗೆ ನಿರ್ಧರಿಸಲು ನಾವು ಯಾರು ಎಂದು ಪ್ರಶ್ನಿಸಿದರು.

ನಮ್ಮ ಸೇವಾ ಅಭಿಯಾನಕ್ಕೆ ಕರ್ನಾಟಕ, ಭಾರತಗಳಿಂದ ಮಾತ್ರವಲ್ಲ ವಿದೇಶಗಳಿಂದಲೂ ಸ್ಪಂದನೆಯಿದೆ. ನಾವು ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಿದರೆ ಜನರು ಖಂಡಿತ ಜೊತೆಯಾಗುತ್ತಾರೆ. ಪ್ರೇಮವೇ ನನ್ನ ಶಕ್ತಿ ಎಂದು ಆಶಯ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೂರಾರು ನಾಗರಿಕರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ “ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್” ನಿರ್ವಹಿಸುತ್ತಿರುವ ಸೇವಾ ಚಟುವಟಿಕೆಗಳ ಪರಿಚಯ ಮಾಡಿಕೊಂಡರು.

ಕಾರ್ಯಕ್ರಮವು ನಲ್ಲಕದಿರೇನಹಳ್ಳಿ ಕ್ಯಾಂಪಸ್‌ನ ವೈದಿಕ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರ ಶ್ರೀಸೂಕ್ತ ಪಾರಾಯಣದೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ “ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ” ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ವಾದ್ಯಗೋಷ್ಠಿ (ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.

ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ, ಸತ್ಯ ಸಾಯಿ ಗ್ರಾಮದ ಆರಂಭದ ದಿನಗಳಲ್ಲಿ ಕೈಜೋಡಿಸಿ ಸಹಕರಿಸಿದ ದೇಶ ನಂಜಪ್ಪ, ಶ್ರೀರಾಮಶೆಟ್ಟಿ, ಕಂಟೇನಹಳ್ಳಿ ನಾರಾಯಣಪ್ಪ, ಲಕ್ಷ್ಮಣಯ್ಯ, ಬೊಂಬು ನಂಜಪ್ಪ ಸೇರಿದಂತೆ ಹಲವರ ನೆನಪಿಸಿಕೊಂಡರು.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ಒನ್ ವರ್ಲ್ಡ್‌ ಒನ್ ಫ್ಯಾಮಿಲಿ’ ಅಭಿಯಾನದಲ್ಲಿ ನೀವು ಕೈಜೋಡಿಸಿದರೆ ಇಡೀ ವಿಶ್ವಕ್ಕೆ ಸೇವೆ ಸಲ್ಲಿಸಿದಂತೆ ಆಗುತ್ತೆ ಎಂದು ವಿವರಿಸಿದರು.

ಸಂಸ್ಥೆಯ ವಿದ್ಯಾರ್ಥಿನಿ ಶಿಡ್ಲಘಟ್ಟದ  ತೇಜಸ್ವಿನಿ ಮಾತನಾಡಿ, ಈ ಸಂಸ್ಥೆಗೆ ನಾನು ಕೇವಲ ಉಟ್ಟ ಬಟ್ಟೆಯೊಂದಿಗೆ ಬಂದೆ. ನನಗೆ ಊಟ, ವಸತಿ, ವಸ್ತ್ರ ಸೇರಿ ಎಲ್ಲವನ್ನೂ ಸಂಸ್ಥೆಯೇ ಕೊಟ್ಟಿದೆ. ವೈದ್ಯೆಯಾಗಬೇಕು ಎನ್ನುವ ಕನಸು ಈ ಸಂಸ್ಥೆಯಲ್ಲಿ ನನಸಾಗುತ್ತಿದೆ. ಸಂಸ್ಥೆಗೆ ಯಾರೇ ಯಾವುದೇ ರೀತಿ ಮಾಡಿದ ಸಹಾಯವು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಹೇಳಿದರು. ಮುದ್ದೇನಹಳ್ಳಿ ಬಾಲಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಡಾ ಟಿ.ಸಿ.ನಿಕೇತನ್ ಸ್ವಾಗತಿಸಿದರು.

Related Posts

Leave a Reply

Your email address will not be published. Required fields are marked *