ಆರ್ ಎಸ್ ಎಸ್ ಅಂತಹ ಸ್ವಯಂ ಸೇವಾ ಸಂಘಟನೆ ಈಗ ಸಿಜೆಪಿ ಕುರಿತು ವಿವಿಧ ಕೋನಗಳಲ್ಲಿ ಗಂಭೀರವಾಗಿ ಆಲೋಚಿಸುವಂತಾಗಿದೆ. ಒಟ್ಟಿನಲ್ಲಿ ಆಡಳಿತದಲ್ಲಿ ಆಗಿರುವ ವೈಫಲ್ಯವನ್ನು ಆಡಳಿತದ ಚುಕ್ಕಾಣಿ ಹಿಡಿದಿರುವ ಚುನಾಯಿತ ಪ್ರತಿನಿಧಿಗಳು ಒಪ್ಪಿಕೊಳ್ಳದಿದ್ದಲ್ಲಿ ಇದಕ್ಕೆ ಯಾವುದೇ ಸರ್ಕಾರವಿರಲಿ, ಭಾರಿ ಬೆಲೆ ತೆರಬೇಕಾಗುತ್ತೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ನಗ್ನಸತ್ಯವಾಗಿದೆ.
ವಿಶಾಖಪಟ್ಟಣದಲ್ಲಿ ಜರುಗಿದ ಆರ್ ಎಸ್ ಎಸ್ ಬೈಠಕ್‌ನಲ್ಲಿ ದೇಶದ ಯುವಜನತೆ ಹಾಗೂ ಭ್ರಷ್ಟಾಚಾರ ಮತ್ತು ಸರ್ಕಾರದ ವೈಫಲ್ಯಗಳ ಬಗ್ಗೆ ಗಂಭೀರ ಚರ್ಚೆ ನಡೆದಿರುವುದು ಗಮನಾರ್ಹ. ದಿಲ್ಲಿ ಜಂತರ್ ಮಂತರ್ ವಿದ್ಯಾರ್ಥಿ ಆಂದೋಲನದ ತರುವಾಯ ದೇಶದ ಅತಿದೊಡ್ಡ ರಾಜಕೀಯೇತರ ಸಂಘಟನೆ ಎನಿಸಿಕೊಂಡಿರುವ ಆರ್ ಎಸ್ ಎಸ್, ಯುವಜನತೆ ಎದುರಿಸುತ್ತಿರುವ ಪ್ರಸಕ್ತ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ಹಾಗೂ ಚಿಂತನ ಮಂಥನಕ್ಕೆ ಮುಂದಾಗಿದೆ.
ರಾಷ್ಟ್ರೀಯತೆ ಮತ್ತು ಭಯೋತ್ಪಾದನೆ ವಿರುದ್ದದ ಹೋರಾಟವೇ ಆರ್ ಎಸ್ ಎಸ್ ಅಜೆಂಡಾ ಅಲ್ಲ ಎಂಬುದು ಸಂಘಟನೆಗೆ ಪರಮಾಶಯವಲ್ಲ. ಇಂದಿನ ದೇಶದ ಯುವಜನತೆ ಮತ್ತು ಅವರಿಗೆ ಎದುರಾದ ಸಮಸ್ಯೆಗಳನ್ನು ಪ್ರಜಾ ಪ್ರತಿನಿಧಿಗಳು ಮತ್ತು ಸರ್ಕಾರ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಆಲೋಚಿಸಿ ಕ್ರಮಕ್ಕೆ ಮುಂದಾಗದಿದ್ದಲ್ಲಿ, ಜಂತರ್ ಮಂತರ್‌ನಲ್ಲಿ ಮೊನ್ನೆ ತಲೆಯೆತ್ತಿದ್ದ ಸಮಸ್ಯೆ ಮತ್ತೆ ಮತ್ತೆ ಮರುಕಳಿಸುವುದು ಖಂಡಿತ. ಆಡಳಿತ ವ್ಯವಸ್ಥೆಯಲ್ಲಿ ಆಗಿರುವ ಮತ್ತು ಆಗುವ ಲೋಪ ಮತ್ತು ವೈಫಲ್ಯ ಗಳನ್ನು ಸರ್ಕಾರಗಳು ಪ್ರಾಮಾಣಿಕವಾಗಿ ಪರಾಮರ್ಶಿಸಿ ಸೂಕ್ತ ಕ್ರಮ ಜರುಗಿಸಬೇಕಾಗುತ್ತೆ. ಆದರೆ ತಮ್ಮ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕಿಗಳ ರಕ್ಷಣೆಯ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನು ಒಪ್ಪಿಕೊಳ್ಳದಿದ್ದಲ್ಲಿ ಇದು ಮುಂದೊಂದು ದಿನ ಬೃಹದಾಕಾರವಾಗಿ ಬೆದು ಅತಿದೊಡ್ಡ ಸಮಸ್ಯೆಯಾಗಿ ಕಾಡುವುದು ಸಹಜವೇ. ಇದರಲ್ಲಿ ಯಾವ ಅನುಮಾನವೂ ಇಲ್ಲ.
ಸಮಸ್ಯೆಗಳನ್ನು ಅರಿತುಕೊಳ್ಳಲು ಸರ್ಕಾರಗಳು ಮೊದಲು ಮುಕ್ತ ಮನಸು ಹೊಂದಿರಬೇಕು ಮತ್ತು ಸರ್ಕಾರದ ಕಣ್ ಮತ್ತು ಕಿವಿ ಯಾವಾಗಲೂ ಇದನ್ನು ಸ್ವೀಕರಿಸಲು ಸಿದ್ಧವಿರಬೇಕು. ಅಲ್ಲದೆ ಸಮಸ್ಯೆಗಳನ್ನು ಹೊತ್ತು ತಂದವರನ್ನು ದೂರವಿಟ್ಟು ಗಾಜಿನಮನೆಯಲ್ಲಿ ಕುಳಿತು ಇದನ್ನು ಪರಿಹರಿಸುವುದೂ ಸಾಧ್ಯವಿಲ್ಲ. ಆಡಳಿತ ವೈಫಲ್ಯಕ್ಕೆ ಏಕಮುಖ ಮತ್ತು ಏಕಾಧಿಪತ್ಯದ ಧೋರಣೆಯೂ ಕಾರಣ ಎಂಬುದು ಗಮನಾರ್ಹ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಅನುಸರಿಸಿದ ಧೋರಣೆ ಮತ್ತು ತಾಳಿದ ನಿರ್ಧಾರವೇ ಸರಿಯಲ್ಲ ಎಂಬ ಸಾರ್ವತ್ರಿಕ ಆರೋಪವಿದೆ. ಇದರಲ್ಲಿ ಹುರುಳಿಲ್ಲ ಎನ್ನಲಾಗದು. ಮೂರು ವರ್ಷಗಳ ಹಿಂದೆಯೇ ಈ ದಿಶೆಯಲ್ಲಿ ಆರಂಭವಾದ ಸಮಸ್ಯೆಯನ್ನು ಕೇಂದ್ರ ಸರ್ಕಾರ ಸರಿಯಾದ ಸಮಯದಲ್ಲಿ ಗುರುತಿಸಿ ಇದಕ್ಕೆ ಸಕಾಲಿಕ ಪರಿಹಾರವನ್ನು ಸೂಚಿಸಿದಿದ್ದರೆ ಇದು ಜಂತರ್ ಮಂತರ್ ವಿದ್ಯಾರ್ಥಿ ಆಂದೋಲನದವರೆಗೂ ತಲುಪುತ್ತಿರಲಿಲ್ಲ. ಒಟ್ಟಿನಲ್ಲಿ ಜಂತರ್ ಮಂತರ್ ಬಳಿ ಸಿಜೆಪಿ ಕೈಗೆತಿಕೊಂಡ ವಿದ್ಯಾರ್ಥಿ ಆಂದೋಳನದ ಯಶಸ್ಸಿನ ಬಳಿಕ ದೇಶದ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಜಾಗೃತಗೊಂಡಿವೆ. ಅದರಲ್ಲಿಯೂ ಮುಖ್ಯವಾಗಿ ಆರ್ ಎಸ್ ಎಸ್ ಅಂತಹ ಸ್ವಯಂ ಸೇವಾ ಸಂಘಟನೆ ಈಗ ಸಿಜೆಪಿ ಕುರಿತು ವಿವಿಧ ಕೋನಗಳಲ್ಲಿ ಗಂಭೀರವಾಗಿ ಆಲೋಚಿಸುವಂತಾಗಿದೆ.
ಒಟ್ಟಿನಲ್ಲಿ ಆಡಳಿತದಲ್ಲಿ ಆಗಿರುವ ವೈಫಲ್ಯವನ್ನು ಆಡಳಿತದ ಚುಕ್ಕಾಣಿ ಹಿಡಿದಿರುವ ಚುನಾಯಿತ ಪ್ರತಿನಿಧಿಗಳು ಒಪ್ಪಿಕೊಳ್ಳದಿದ್ದಲ್ಲಿ ಇದಕ್ಕೆ ಪ್ರಜಾತಂತ್ರದಲ್ಲಿ ಯಾವುದೇ ಸರ್ಕಾರವಿರಲಿ. ಭಾರಿ ಬೆಲೆ ತೆರಬೇಕಾಗುತ್ತೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ನಗ್ನಸತ್ಯವಾಗಿದೆ.


