Menu

ಸರ್ಕಾರ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿ ಮತದಾರರ ನಂಬಿಕೆ ಉಳಿಸಲಿ

ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಈ ಸರ್ಕಾರವು ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮತದಾರರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ. ಗೃಹಜ್ಯೋತಿ, ಭಾಗ್ಯಜ್ಯೋತಿ ಮತ್ತು ಸ್ತ್ರೀಶಕ್ತಿ ಯೋಜನೆಗಳ ಸಂಪೂರ್ಣ ಲಾಭವನ್ನು ಸರ್ಕಾರ ಪಡಯಬೇಕಾದರೆ ಶಿವಕುಮಾರ್ ಅವರ ಇಡೀ ಮಂತ್ರಿಮಂಡಲವೀಗ ಸಮರೋಪಾದಿಯಲ್ಲಿ ಕಾರ್ಯಶ್ರದ್ಧೆ ವಹಿಸಬೇಕಿದೆ.

ವಿಳಂಬವಾದರೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಾರಥ್ಯದ ಮಂತ್ರಿಮಂಡಲಕ್ಕೆ ಈ ಶ್ರಾವಣ ಮಾಸದ ಮೊದಲ ದಿನವಾದ ಗುರುವಾರದಂದು ವಿದ್ಯುಕ್ತ ಚಾಲನೆ ದೊರೆತಿದೆ. ಆಷಾಡದ ಮೋಡ ಕವಿದ ವಾತಾವರಣ ಈಗ ತಿಳಿಯಾಗಬೇಕಿದೆ. ಗುರುವಾರದಂದು ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರಬೇಕಿದ್ದ ತಮಿಳುನಾಡು ಅರ್ಜಿಯೂ ಈಗ ಮುಂದಿನ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಇದು ಕೂಡಾ ರಾಜ್ಯದ ಈಗಿನ ಪರಿಸ್ಥಿತಿ ಮತ್ತು ಸನ್ನಿವೇಶಕ್ಕೆ ಒಳ್ಳೆಯದೇ. ಆಗಸ್ಟ್ ೧೭ರ ವೇಳೆಗೆ ಕಾವೇರಿ ಕಣಿವೆಯಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಈಗ ಶಿವಕುಮಾರ್ ನೇತೃತ್ವದ ಮಂತ್ರಿಮಂಡಲವೀಗ ಸ್ಪಷ್ಟ ಹೊಣೆಗಾರಿಕೆ ಮೂಲಕ ರಾಜ್ಯದ ಆಡಳಿತದತ್ತ ದಾಪುಗಾಲು ಹಾಕಿದೆ.

ಖಾತೆಗಳ ಹಂಚಿಕೆಯಲ್ಲಿ ತುಸು ವಿಳಂಬವಾಗಿದೆ ಎಂಬ ಸಾರ್ವತ್ರಿಕ ಟೀಕೆ ಟಿಪ್ಪಣಿಗಳಲ್ಲಿ ಹುರುಳಿಲ್ಲ ಎನ್ನಲಾಗದು. ಆದರೆ ಈ ಗೊಂದಲವೀಗ ಪರಿಹಾರಗೊಂಡಿದೆ. ಕೆಲ ಮಂತ್ರಿಗಳು ಅವರು ಬಯಸಿದ ಖಾತೆಗಳೇ ಅವರಿಗೆ ದೊರೆತಂತಾಗಿದೆ. ರಾಮಲಿಂಗಾರೆಡ್ಡಿ ಅವರ ಬಳಿಯಿದ್ದ ಜಲಸಂಪನ್ಮೂಲ ಖಾತೆ ಈಗ ಚಲುವರಾಯಸ್ವಾಮಿ ಅವರಿಗೆ ನೀಡಲಾಗಿದೆ. ಯಾವುದೇ ಮಂತ್ರಿ ಮಂಡಲದಲ್ಲಿ ಹಣಕಾಸು, ಗೃಹ, ಇಂಧನ, ಜಲಸಂಪನ್ಮೂಲ ಮತ್ತು ಬೃಹತ್ ಕೈಗಾರಿಕೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಗಳ ನಿರ್ವಹಣೆಯನ್ನು ಸಾಮಾನ್ಯವಾಗಿ ಹಿರಿಯ ಸಚಿವರಿಗೇ ವಹಿಸುವುದು ಸಂಪ್ರದಾಯ.

ಮಂತ್ರಿ ಮಂಡಲ ರಚನೆ ಮತ್ತು ಖಾತೆಗಳ ಹಂಚಿಕೆ ಎಂದರೆ ಮಂತ್ರಿಗಳಾದವರ ಬೇಕು- ಬೇಡಗಳ ಉದ್ದೇಶ ಮುಖ್ಯವಲ್ಲ. ಜನತೆಯ ಹಿತದೃಷ್ಟಿಯಿಂದ ಎಲ್ಲ ಸಚಿವರೂ ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿದಾಗಲೇ ರಾಜ್ಯಾಡಳಿತವು ಸುಗಮವಾಗುತ್ತೆ ಮಂತ್ರಿ ಖಾತೆ ದೊರೆತಿಲ್ಲವೆಂದು ಅಸಮಾಧಾನ ಮತ್ತು ಅತೃಪ್ತಿ ಹೊಂದಿದವರಿಗೆ ಪಕ್ಷವು ಕೆಲವೊಂದು ಗುರುತರ ಹುದ್ದೆಗಳನ್ನು ನೀಡಬಹುದು. ಒಟ್ಟಿನಲ್ಲಿ ಎಲ್ಲ ಮಂತ್ರಿಮಂಡಲದಲ್ಲಿ ಎಲ್ಲರನ್ನೂ ಸಮಾಧಾನಗೊಳಿಸಿ ಸರ್ಕಾರ ನಡೆಸುವುದು ಅತಿ ಕಷ್ಟ. ರಾಜ್ಯದಲ್ಲಿ ಮೂರೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾರ್ಯ ನಿರ್ವಹಿಸಿದೆ. ಈ ವೇಳೆ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಯೋಜನೆಗಳ ಸಾರ್ಥಕತೆಗೆ ಈಗ ಡಿ ಕೆ ಮಂತ್ರಿಮಂಡಲದ ಎಲ್ಲ ಸಚಿವರೂ ಲಕ್ಷ್ಯ ವಹಿಸುವುದು ಅಗತ್ಯ. ಈ ದಿಶೆಯಲ್ಲಿ ಪಕ್ಷದ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಮಯೋಚಿತ ನಿರ್ಧಾರವನ್ನು ಕೈಗೊಂಡಿರುವುದು ಗಮನಾರ್ಹ.

ಎಲ್ಲ ಮಂತ್ರಿಗಳ ಅನುಭವ ಮತ್ತು ಸಮರೋಪಾದಿ ಕೆಲಸ ಹಾಗೂ ಜನತೆಗೆ ಅಗತ್ಯವಾಗಿ ಆಗಬೇಕಿರುವ ಕೆಲಸಗಳಿಗೆ ಸಮಯ ಮೀಸಲಾಗಬೇಕಿದೆ. ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಸರ್ಕಾರವು ಯೋಜನಾಭದ್ಧವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮತದಾರರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ ಗೃಹಜ್ಯೋತಿ, ಭಾಗ್ಯಜ್ಯೋತಿ ಮತ್ತು ಸ್ತ್ರೀ ಶಕ್ತಿ ಯೋಜನೆಗಳ ಸಂಪೂರ್ಣ ಲಾಭವನ್ನು ಸರ್ಕಾರ ಪಡಯಬೇಕಾದರೆ ಶಿವಕುಮಾರ್ ಅವರ ಇಡೀ ಮಂತ್ರಿಮಂಡಲವೀಗ ಒಟ್ಟಾಗಿ ಕಾರ್ಯಮಗ್ನವಾಗಬೇಕಿದೆ . ಬರ ಮತ್ತು ನೆಲ, ಜಲದ ವಿಚಾರದಲ್ಲಿ ಪ್ರಸ್ತುತ ತಲೆ ಎತ್ತಿರುವ ಸವಾಲುಗಳನ್ನು ಶಿವಕುಮಾರ್ ಸರ್ಕಾರ ಹೇಗೆ ನಿಭಾಯಿಸುವುದೆಂಬುದೂ ಪ್ರಮುಖ ವಿಚಾರ.

Related Posts

Leave a Reply

Your email address will not be published. Required fields are marked *