ಕಾಡನೆ ದಾಳಿಗೆ ಪ್ರವಾಸಿಗರೊಬ್ಬರು ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪದ ತೆರಲು ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಆರ್ ಆರ್ ನಗರದ ಮುರಳಿಕೃಷ್ಣ (40) ಎಂದು ಆನೆ ದಾಳಿಗೆ ಬಲಿಯಾದವರು ಗುರುತಿಸಲಾಗಿದೆ.
ಅವರು ಸ್ಥಳೀಯ ಹೋಂಸ್ಟೇಯೊಂದರಲ್ಲಿ ತಂಗಿದ್ದು, ವಿಹಾರಕ್ಕಾಗಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ನಾಯಿಯೊಂದನ್ನು ಅಟ್ಟಿಸಿಕೊಂಡು ಬಂದ ಕಾಡಾನೆ, ಮುರಳಿಕೃಷ್ಣ ಅವರ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ತಕ್ಷಣ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯಿಂದ ತೆರಾಲು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ಸಂಚಾರದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ವಿರಾಜಪೇಟೆಯಲ್ಲಿ ಹುಲಿದಾಳಿಗೆ ಹಸು ಸಾವು
ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಳ ಗ್ರಾಮದ ಚೋಟೆಪಾಲಿ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಪುಷ್ಪ ಉನ್ನಿಕೃಷ್ಣ ಅವರಿಗೆ ಸೇರಿದ ಹಸು ಗದ್ದೆಯಲ್ಲಿ ಮೇಯುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದ್ದೆದರಿಂದ ಹಸು ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳಕ್ಕೆ ಚೆನ್ನಂಗಿ ಶಾಖೆಯ ಅರಣ್ಯ ಇಲಾಖೆಯ ಡಿ ಆರ್ ಎಫ್ಒ ನಾಗರಾಜ್ ಹಾಗೂ ಶಿವು ಸೇರಿದಂತೆ ಆರ್‌ಆರ್‌ಟಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹುಲಿಯ ಚಲನವಲನದ ಬಗ್ಗೆ ನಿಗಾ ವಹಿಸಲಾಗಿದ್ದು, ಸಾರ್ವಜನಿಕರು, ಕಾರ್ಮಿಕರು, ಬೆಳೆಗಾರರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.


