ಕಾವೇರಿ ಜಲಾನಯನ ಪ್ರದೇಶದಲ್ಲಿ ಸಕಾಲದಲ್ಲಿ ಬೀಳದ ಮಳೆ ಹಾಗೂ ಗಣನೀಯ ಪ್ರಮಾಣದಲ್ಲಿ ಕುಸಿದ ಜಲ ಸಂಗ್ರಹ. ಹಾರಂಗಿ, ಕಬಿನಿ, ಹೇಮಾವತಿ ಮತ್ತು ಕೆ ಆರ್ ಎಸ್ ಜಲಾಶಯಗಳ ಸಾಮರ್ಥ್ಯ ಹೆಚ್ಚಳಕ್ಕೆ ಹೂಳೆತ್ತಲು ಉಂಟಾಗಿರುವ ಅನಗತ್ಯ ರಾಜಕೀಯ ಅಡ್ಡಿ. ಇವುಗಳೇ ಕಾವೇರಿ ಜಲ ವಿವಾದದ ಮೂಲ ಕೇಂದ್ರ ಬಿಂದು. ಮೊದಲು ಈ ಸಮಸ್ಯೆ ಬಗೆಹರಿಯಲಿ. ಇದಾದ ಬಳಿಕ ಮುಂದಿನ ಮುಂದಿನ ಎಲ್ಲ ಸಂದಿಗ್ಧತೆಗಳೂ ಒಂದೊಂದಾಗಿ ಬಗೆಹರಿಯುವುದು ನಿಶ್ಚಿತ.
ಮುಂದಿನ ದಶಕಗಳಿಗೂ ಕರ್ನಾಟಕ -ತಮಿಳುನಾಡು ರಾಜ್ಯಗಳ ನಡುವಣ ತಲೆದೋರಿದ ಕಾವೇರಿ ಜಲ ವಿವಾದ ಬಗೆಹರಿಯದು. ಇದು ಕೇಂದ್ರ ಸಕಾರಕ್ಕೂ ದಿಟ್ಟ ಸವಾಲು ಕೂಡಾ. ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಿದ ನರೇಂದ್ರ ಮೋದಿ ಸರ್ಕಾರಕ್ಕೆ ಕಾವೇರಿ ಸಮಸ್ಯೆ ಇತ್ಯರ್ಥಪಡಿಸಲಾಗಿಲ್ಲ ! ದಕ್ಷಿಣ ಭಾರತದ ಜಲ ವಿವಾದಗಳ ಶಾಶ್ವತ ಪರಿಹಾರಗಳಿಗೆ ದೇಶದ ಸಂಸತ್, ಆರು ತಿಂಗಳ ಕಾಲ ವಿಶೇಷ ಅಧಿವೇಶನವನ್ನು ಕರೆದರೂ ಈ ಸಮಸ್ಯೆಗಳಿಗೆ ಸರಿಯಾದ ಮಾರ್ಗೋಪಾಯ ದೊರೆಯುವುದು ಸಂದೇಹಾಸ್ಪದ.
ಕೃಷ್ಣಾ ಕಣಿವೆಯ ಜಲ ಹಂಚಿಕೆ ವಿಚಾರದಲ್ಲಿ ತುಸು ಆಶಾದಾಯಕ ಸಂಗತಿಗಳಿದ್ದರೂ, ಕಾವೇರಿ ವಿಷಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಸಂಪೂರ್ಣ ಸಹಮತ ಮೂಡುವುದೆಂಬ ಭರವಸೆ ಕೇವಲ ಗಗನಕುಸುಮವಷ್ಟೆ ! ಶತಮಾನದಿಂದಲೂ ಮುಂದುವರಿದ ಈ ಜಲಕದನಕ್ಕೆ ಮುಕ್ತಾಯ ಎಂಬುದೇ ಇಲ್ಲ ! ದಿನೇ ದಿನೇ ವಿವಾದ ಸಂಕೀರ್ಣಗೊಳ್ಳುತ್ತಿದೆ. ಎರಡೂ ಕಡೆಯ ಸರ್ಕಾರಗಳು, ಆಡಳಿತಗಾರರು , ನ್ಯಾಯವಾದಿಗಳು ಮತ್ತು ಜಲ ಆಯೋಗ ಮತ್ತು ಪ್ರಾಧಿಕಾರಗಳು ಈ ಸಮಸ್ಯೆಯ ಸಣ್ಣ ಗಂಟನ್ನು ಕೂಡಾ ಬಿಡಿಸಲಾರದಷ್ಟು ಅಸಹಾಯಕ ಸ್ಥಿತಿಗೆ ತಲುಪಿರುವುದು ಕಟುಸತ್ಯ. ಸಂಕಟ ಬಂದಾಗ ನಡೆಯುವ ತರಾತುರಿ ಚಟುವಟಿಕೆ ಕೇವಲ ಬೀಸೋ ದೊಣ್ಣೆಯ ಪೆಟ್ಟು ತಪ್ಪಿಸಿಕೊಳ್ಳುವ ಪ್ರಯತ್ನವಷ್ಟೆ.
ಶತಮಾನದಷ್ದು ಹಳೆಯದಾದ ಕಾವೇರಿ ಜಲ ವಿವಾದ ಬಗೆಹರಿಯಬೇಕಾದರೆ ಇದಕ್ಕೆ ಹಿಂದೆಂದೂ ಕಾಣದಂತಹ ರಾಜಕೀಯ ಸೌಹಾರ್ದತೆ ಮತ್ತು ಸಹಮತ ಬೇಕು. ಇದು ಎರಡೂ ರಾಜ್ಯಗಳ ಕಡೆಯಿಂದ ಆದಾಗ ಮಾತ್ರ , ಗೋಜಲು ಮತ್ತು ಕಗ್ಗಂಟು ಬಿಡಿಸಿಕೊಳ್ಳುತ್ತೆ . ಜಲಾಶಯಗಳಿರುವ ಪ್ರದೇಶದಲ್ಲಿ ಸಕಾಲದಲ್ಲಿ ಆಗದ ಮಳೆ ಮತ್ತು ಕಡಿಮೆಯಾಗುತ್ತಿರುವ ಮಳೆ ಪ್ರಮಾಣ. ಅಲ್ಲದೆ ಜಲ ಸಂಗ್ರಹ ಸಾಮರ್ಥ್ಯ ಹೆಚ್ಚಳಕ್ಕೆ ಉಂಟಾದ ಅನಗತ್ಯ ರಾಜಕೀಯ ಅಡ್ಡಿ. ಇದೇ ಕಾವೇರಿ ಜಲ ವಿವಾದದ ಕೇಂದ್ರ ಬಿಂದು. ಮೊದಲು ಈ ಸಮಸ್ಯೆ ಬಗೆಹರಿದರೆ ಮುಂದಿನ ಸಮಸ್ಯೆ ಬಗೆಹರಿಸುವ ದಾರಿ ಸುಗಮವಾದೀತು. ಕರ್ನಾಟಕದ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರಿನ ಮೇಲೆ ಕೇಂದ್ರ ಜಲ ಆಯೋಗದ ನಿಗಾ ಮತ್ತು ಅ ನಿರ್ವಹಣೆ. ಜಲಾಶಯಗಳ ಸಂಗ್ರಹ ಆಧರಿಸಿ ಕಣಿವೆಯ ರಾಜ್ಯಗಳಿಗೆ ಸಮಾನ ಅನುಪಾತದಲ್ಲಿ ನೀರು ಹಂಚಿಕೆ, ಓಬೀರಾಯನ ಕಾಲದಲ್ಲಿ ಸಿದ್ದಗೊಂಡ ಫರ್ಮಾನು ಮತ್ತು ಒಪ್ಪಂದಗಳನ್ನು ಇಂದು ಮಳೆ ಪ್ರಮಾಣ ಆಧರಿಸಿ ಹೊಸ ಒಪ್ಪಂದ ಮತ್ತು ಸಂಧಾನ ಸೂತ್ರಗಳನ್ನು ಉಭಯ ರಾಜ್ಯಗಳು ಅಂಗೀಕರಿಸಬೇಕಾಗುತ್ತೆ.
ಕಾವೇರಿ ಕಣಿವೆಯ ಹಳೆಯ ಜಲ ಮಾಹಿತಿ ಮತ್ತು ಅಂಕಿ, ಅಂಶಗಳಾವುದೂ ಇಂದಿನ ಪರಿಸ್ಥಿತಿಗೆ ಹೊಂದುವಂತಹದಲ್ಲ. ಒಟ್ಟಿನಲ್ಲಿ ಇವೆಲ್ಲವೂ ಕಾರ್ಯಾನುಗತವಾಗಬೇಕಾದರೆ ಇದಕ್ಕೆ ರಾಜಕೀಯ ಇಚ್ಚಾಶಕ್ತಿಯೇ ಬಹಳ ಮುಖ್ಯ ಅಂತಾರಾಜ್ಯಗಳ ನಡುವೆ ಹರಿಯುವ ನೀರಿನ ಹಕ್ಕುಗಳ ಬಗ್ಗೆ ಕೇಂದ್ರ ಸಂಪೂರ್ಣವಾಗಿ ಪ್ರೇಕ್ಷಕನಾಗಿರಬೇಕೆಂಬ ನಿಯಮವೇನೂ ಇಲ್ಲ. ಕ್ಷೇತ್ರ ಮರುವಿಂಗಡಣೆಗೆ ತೋರುವ ಮುತುವರ್ಜಿ ಮತ್ತು ಪರಮಾಸಕ್ತಿಯನ್ನು ತೋರುವ ಕೇಂದ್ರ ಈಗ ಕೃಷ್ಣಾ- ಕಾವೇರಿ, ಗೋದಾವರಿ ನದಿಗಳ ಅನುಸಂಧಾನ ಮತ್ತು ಸಂಬಂಧಿತ ರಾಜ್ಯಗಳಿಗೆ ಸಮಾನ ಜಲ ಹಂಚಿಕೆಯಾಗುವ ಬಿಗಿ ನ್ಯಾಯ ಸೂತ್ರಗಳನ್ನು ಒದಗಿಸುವ ವಿಚಾರದಲ್ಲಿಯೂ ಕಾಳಜಿ ವಹಿಸಬೇಕು.


