ರಾಜ್ಯ ಬರದಿಂದ ತತ್ತರಿಸುತ್ತಿರುವ ಮಧ್ಯೆಯೇ ಹಾರಂಗಿ ಜಲಾಶಯ ಭರ್ತಿಯಾದ ಬಳಿಕ ಆಲಮಟ್ಟಿ, ನಾರಾಯಣಪುರ ಡ್ಯಾಂಗಳ ಜೊತೆ ಕಬಿನಿ ಜಲಾಶಯ ತುಂಬಿದ್ದು ಕಬಿನಿಯ ಎಂಟರಿಂದ 10 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲು ಸಿದ್ಧತೆ ನಡೆದಿದೆ.
ಕೇರಳದ ವಯನಾಡ್ ಭಾಗದಲ್ಲಿ ಮಳೆ ಸುರಿದ ಪರಿಣಾಮ ಕಬಿನಿ ಜಲಾಶಯ ಭರ್ತಿಯಾಗುತ್ತಿದೆ. ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ 15,500 ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಾಗಿದೆ. 2,284 ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ 2,280 ಅಡಿ ಭರ್ತಿಯಾಗಿದೆ. ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದ್ದು, ಎಂಟರಿಂದ 10 ಸಾವಿರ ಕ್ಯೂಸೆಕ್‌ನಷ್ಟು ನೀರು ನದಿಗೆ ಹರಿಸಲು ತಯಾರಿ ಮಾಡಿಕೊಳ್ಳಲಾಗಿದೆ.
ನದಿ ಪಾತ್ರದ ರೈತರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲು ಜಿಲ್ಲಾಡಳಿತ ಸೂಚಿಸಿದೆ. 19.52 ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಪ್ರಸ್ತುತ 18 ಟಿಎಂಸಿ ನೀರು ಸಂಗ್ರಹವಾಗಿದೆ. ಹಾರಂಗಿ ಅಣೆಕಟ್ಟೆಗೆ 11,800ಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಹೆಚ್ಚಿದೆ. 13,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಾಲ್ಕು ಕ್ರಸ್ಟ್ ಗೇಟ್, ವಿದ್ಯುತ್ ಘಟಕದ ಮೂಲಕ ನೀರು ರಿಲೀಸ್ ಮಾಡಲಾಗಿದೆ. ಕಾವೇರಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ , ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಡ್ಯಾಂ ತುಂಬಿದರೆ ನಾವು ನೀರು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇನ್ನೂ ನೀರು ಬಿಟ್ಟಿಲ್ಲ. ಸಂಜೆಗೆ ಒಂದು ಡ್ಯಾಂ ತುಂಬುವ ಸ್ಥಿತಿ ಇದೆ. ಡ್ಯಾಂ ತುಂಬಿದರೆ ನೀರನ್ನು ಹಿಡಿದಿಟ್ಟುಕೊಳ್ಳಲು ಆಗದು ಎಂದಿದ್ದಾರೆ.
ನಾಳೆ ಸರ್ವ ಪಕ್ಷ ಸಭೆ ಕರೆದಿದ್ದೇನೆ. ಬಿಜೆಪಿ ಅವರೇ ಸರ್ವಪಕ್ಷ ಸಭೆಗೆ ಸಲಹೆ ಕೊಟ್ಟಿದ್ದು, ತಮಿಳುನಾಡಿನವರು ಸುಪ್ರೀಂ ಕೋರ್ಟ್ ಗೆ ಹೋಗುತ್ತಾರೆಂದು ಗೊತ್ತಾಯಿತು. ಮತ್ತೊಂದು ಡ್ಯಾಂ ತುಂಬಬಹುದು, ನೀರನ್ನು ನಾವೇನು ತಡೆಹಿಡಿಯಲಾಗದು. ನಾಳೆಯ ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.


