Menu

ಕಾರ್ಮಿಕ ವಿವಾದಗಳಲ್ಲಿ ಎಸ್‌ಸಿ ಎಸ್​ಟಿ ಕಾಯ್ದೆ ದುರ್ಬಳಕೆ ಸಲ್ಲದು: ಹೈಕೋರ್ಟ್​

Karnataka High Court

ಕಾರ್ಮಿಕ ಮತ್ತು ಸಿವಿಲ್ ಪ್ರಕರಣಗಳಿಗೆ ಕ್ರಿಮಿನಲ್ ರೂಪ ನೀಡಿ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್​ ಹೇಳಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ರದ್ದು ಮಾಡಬೇಕು ಎಂದು ಕೋರಿ ಭದ್ರಾವತಿಯ ‘ಮಾಲ್ನಾಡ್ ಅಲೋಯ್ಸ್ ಕಾಸ್ಟಿಂಗ್ಸ್ ವ್ಯವಸ್ಥಾಪಕ ಮಧುಕರ್ ಜೋಯಿಸ್ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಕಂಪನಿ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಐವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿ ಆದೇಶ ಪ್ರಕಟಿಸಿದೆ.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಕಂಪನಿಯು ಶೋಕಾಸ್ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಂಡಿದ್ದಕ್ಕೆ ಪ್ರತೀಕಾರವಾಗಿ ಹಾಗೂ ಆಡಳಿತ ಮಂಡಳಿಯ ವಿರುದ್ಧ ಈ ಸುಳ್ಳು ದೂರನ್ನು ದಾಖಲಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆಯಡಿ ಪ್ರಕರಣ ದಾಖಲಿಸಲು, ನಿಂದನಾತ್ಮಕ ಘಟನೆ ಸಾರ್ವಜನಿಕರು ನೋಡುವ ಅಥವಾ ಇರುವ ಜಾಗದಲ್ಲಿ ನಡೆದಿರಬೇಕು ಎಂಬುದಾಗಿ ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್​ ತಿಳಿಸಿದೆ.  ಈ ಪ್ರಕರಣದಲ್ಲಿ ಆರೋಪಿಸಲಾದ ಘಟನೆಯು ಕಂಪನಿಯ ಒಳಗಿನ ನಾಲ್ಕು ಗೋಡೆಗಳ ಮಧ್ಯೆ ನಡೆದಿದೆ. ಅಲ್ಲಿ ಯಾವುದೇ ಸಾರ್ವಜನಿಕರು ಇರಲಿಲ್ಲ. ಹಾಗಾಗಿ ಇದು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೀಠ ತಿಳಿಸಿದೆ.

ಜೊತೆಗೆ, ಸಿವಿಲ್ ಮತ್ತು ಸೇವಾ ವಿವಾದಗಳಿಗೆ ಕ್ರಿಮಿನಲ್ ಬಣ್ಣ ಬಳಿದು ವಿಶೇಷ ಕಾಯ್ದೆಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆ ಮಾಡಿದಂತಾಗಲಿದೆ. ದೂರುದಾರರು ಮಾಡಿರುವ ಆರೋಪಗಳಲ್ಲಿ ಯಾವುದೇ ಪ್ರಮುಖ ಅಂಶಗಳಿಲ್ಲದ ಕಾರಣ, ಶಿವಮೊಗ್ಗದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣ ಮತ್ತು ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶಿಸಿದೆ.

Related Posts

Leave a Reply

Your email address will not be published. Required fields are marked *