ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ತನ್ನ ಗುರು ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರಿಂದ ಗೋತ್ರ ಸ್ವೀಕರಿಸಿ ಹೊಸ ಗುರುತು ಮತ್ತು ಹೊಸ ಹೆಸರು ಪಡೆದುಕೊಂಡಿದ್ದಾರೆ.
ಪ್ರಯಾಗ್ರಾಜ್ಗೆ ಕಾಲಿಟ್ಟ ಬಳಿಕ ಮೊದಲು ತಮ್ಮ ಗುರುಗಳಾದ ನಿರಂಜನಿ ಅಖಾಡ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರನ್ನು ಭೇಟಿಯಾಗಿದ್ದಾರೆ. ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಮಹಾರಾಜ್ ಅವರು, ಲಾರೆನ್ ಪೊವೆಲ್ ಅವರಿಗೆ ಗೋತ್ರದ ಪ್ರಕಾರ ಕಮಲಾ ಎಂಬ ಹೆಸರು ಕೊಟ್ಟಿದ್ದೇನೆ. ಲಾರೆನ್ ಅವರು ನಮಗೆ ಮಗಳಿದ್ದಂತೆ. ಆಕೆ ಭಾರತಕ್ಕೆ ಎರಡನೇ ಬಾರಿ ಬಂದಿದ್ದಾರೆ ಎಂದು ಹೇಳಿದ್ದಾರೆ.
ಕಮಲಾ ಸನಾತನ ಧರ್ಮದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಜನವರಿ 29ರ ವರೆಗೆ ಹಿಂದೂ ಆಚರಣೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಂಭಮೇಳಕ್ಕೆ ಬರುವ ಮುನ್ನ ಪೊವೆಲ್ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಕಾಶಿ ವಿಶ್ವನಾಥದಲ್ಲಿ ಬೇರೆ ಯಾವುದೇ ಸಮುದಾಯದವರು ಶಿವಲಿಂಗವನ್ನು ಮುಟ್ಟುವಂತಿಲ್ಲ. ಅದಕ್ಕಾಗಿಯೇ ಲಾರೆನ್ ಶಿವಲಿಂಗವನ್ನು ಹೊರಗಿನಿಂದ ನೋಡುವ ವ್ಯವಸ್ಥೆ ಮಾಡಲಾಗಿತ್ತು.