ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ಆರಂಭಿಸಿದ ಚಳವಳಿ ಮೊದಮೊದಲು ಉತ್ತಮ ದಾರಿಯಲ್ಲಿ ಸಾಗಿತ್ತು. ರಾಜಕೀಯದ ವಾಸನೆ ಇರಲಿಲ್ಲ. ಸಂಸತ್ತಿಗೆ ಮುತ್ತಿಗೆ ಎಂದು ಪ್ರಕಟಿಸಿದ್ದು ಪರಿಸ್ಥಿತಿ ಕೈಮೀರಿ ಹೋಗಲು ಕಾರಣವಾಯಿತು. ಅದರಲ್ಲೂ ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದು ಚಳವಳಿ ದಿಕ್ಕು ತಪ್ಪಲು ಕಾರಣವಾಯಿತು. ಉಪವಾಸ ಸತ್ಯಾಗ್ರಹ ಕೈಗೊಂಡ ವಾಂಗ್ಚುಕ್ ಕೇಂದ್ರದ ಒತ್ತಡಕ್ಕೆ ಮಣಿದು ಉಪವಾಸ ಅಂತ್ಯಗೊಳಿಸಿದ್ದಾರೆ.
ಕೇಂದ್ರದೊಂದಿಗೆ ವಿದ್ಯಾರ್ಥಿ ಮುಖಂಡರ ನಿಯೋಗ ಮಾತುಕತೆ ನಡೆಸುತ್ತಿದೆ. ಸರ್ಕಾರ ಈಗ ವಿದ್ಯಾರ್ಥಿಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ತುರ್ತು ಸಚಿವ ಸಂಪುಟದಲ್ಲಿ ಹಲವು ತೀರ್ಮಾನಗಳನ್ನು ಕೈಗೊಂಡಿದೆ. ಹೊಸ ಕಾಯ್ದೆಯನ್ನು ರಚಿಸಿ ಸೋಮವಾರ ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ತ್ವರಿತ ನ್ಯಾಯಾಲಯಗಳನ್ನು ೪ ರಾಜ್ಯಗಳಲ್ಲಿ ರಚಿಸಲಾಗಿದ್ದು, ಮೂರು ತಿಂಗಳಲ್ಲಿ ತಪ್ಪಿತಸ್ತರಿಗೆ ಶಿಕ್ಷೆಯಾಗಲಿದೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಸಿಕ್ಕಿ ಬಿದ್ದವರಿಗೆ ೧೦ ಕೋಟಿರೂ. ದಂಡ ಮತ್ತು ೧೦ ವರ್ಷ ಜೈಲುವಾಸ ವಿಧಿಸಲಾಗುತ್ತಿದೆ. ಕೇಂದ್ರದ ಕ್ಷಿಪ್ರ ನಡೆ ಈಗ ಪ್ರತಿಪಕ್ಷಗಳನ್ನು ದಂಗುಬಡಿಸಿದೆ.
ಧರ್ಮೇಂದ್ರ ಪ್ರದಾನ್ ರಾಜೀನಾಮೆಯೊಂದನ್ನು ಹೊರತುಪಡಿಸಿ ಉಳಿದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಿದೆ. ಇದರಿಂದ ಪ್ರತಿಪಕ್ಷಗಳ ರಾಜಕೀಯ ಅಜೆಂಡಾ ಕೈಗೂಡುವ ಲಕ್ಷಣ ಕಂಡು ಬರುತ್ತಿಲ್ಲ. ನೀಟ್ ಹಗರಣ ಬಗ್ಗೆ ಕೇಂದ್ರ ಸರ್ಕಾರ ಮೊದಮೊದಲು ನಿರ್ಲಕ್ಷ್ಯ ತೋರಿದ್ದು ನಿಜ. ಆಗಲೇ ಎಚ್ಚೆತ್ತು ಕ್ರಮ ಕೈಗೊಂಡಿದ್ದರೆ ಹಿಂಸಾಚಾರವನ್ನು ತಡೆಗಟ್ಟಬಹುದಾಗಿತ್ತು. ಕೇಂದ್ರ ಗುಪ್ತಚರ ಪಡೆ ಈ ವಿಷಯದಲ್ಲಿ ತೂಗಡಿಸಿತೇ ಎಂಬ ಅನುಮಾನ ಮೂಡುತ್ತಿದೆ. ಉಗ್ರ ಬಿಲಗಳನ್ನೇ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿದ್ದ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಕಣ್ಣು ಮುಚ್ಚಿದ್ದು ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಎಲ್ಲ ಪರೀಕ್ಷೆಗಳಲ್ಲಿ ಸೋರಿಕೆ ದೊಡ್ಡ ಪಿಡುಗು. ನೀಟ್ ಪರೀಕ್ಷೆ ಪ್ರಾಮುಖ್ಯತೆ ಪಡೆಯಲು ಇರುವ ಪ್ರಮುಖ ಕಾರಣ ಎಂದರೆ ಮೆಡಿಕಲ್ ಸೀಟು ಖಾಸಗಿಯಲ್ಲಿ ದುಬಾರಿಯಾಗಿರುವುದು. ಇದನ್ನು ತಪ್ಪಿಸಬೇಕು ಎಂದರೆ ಮೊದಲು ಕೇಂದ್ರ ಸರ್ಕಾರ ವಂತಿಗೆ ಶುಲ್ಕ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಹಲವು ತೀರ್ಪುಗಳನ್ನು ಕೊಟ್ಟಿದ್ದರೂ ರಾಜ್ಯ ಸರ್ಕಾರಗಳು ಅದನ್ನು ಕಡೆಗಣಿಸಿವೆ. ಇದಕ್ಕೆ ಪ್ರಮುಖ ಕಾರಣ ಖಾಸಗಿ ಮೆಡಿಕಲ್ ಕಾಲೇಜು ರಾಜಕಾರಣಿಗಳ ಹಿಡಿತದಲ್ಲಿವೆ. ಹೈಕೋರ್ಟ್ ರಚಿಸಿದ ಮೆಡಿಕಲ್ ಸೀಟು ಶುಲ್ಕ ನಿಗದಿ ನ್ಯಾಯಾಧಿಕರಣ ಮತ್ತು ಸೀಟು ಹಂಚಿಕೆ ನ್ಯಾಯಾಧಿಕರಣಗಳು ಕೇವಲ ಹಲ್ಲಿಲ್ಲದ ಹಾವುಗಳಾಗಿವೆ. ರಾಜ್ಯ ಸರ್ಕಾರವೇ ಇವುಗಳ ಹಲ್ಲು ಕಿತ್ತಿವೆ. ಈ ನ್ಯಾಯಾಧಿಕರಣದ ತೀರ್ಪುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.
ನೀಟ್ ಪರೀಕ್ಷೆ ಪ್ರಶ್ನಪತ್ರಿಕೆ ಸೋರಿಕೆಯಲ್ಲಿ ದೊಡ್ಡ ಜಾಲವೇ ಇದೆ. ಕೇಂದ್ರಕ್ಕೆ ಇದನ್ನು ಸದೆಬಡಿಯುವುದು ಕಷ್ಟ ಕೆಲಸವೇನಲ್ಲ. ಇದುವರೆಗೆ ಕಡೆಗಣಿಸಿದ್ದಕ್ಕೆ ಕೇಂದ್ರ ದಂಡ ತೆರಬೇಕಾದ ಪರಿಸ್ಥಿತಿ ಬಂದಿದೆ. ಇನ್ನು ಮುಂದಾದರೂ ಕೇಂದ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ. ಸಿಜೆಪಿ ಮೂಲ ಉದ್ದೇಶ ರಾಜಕೀಯ ಅಲ್ಲ. ಶಿಕ್ಷಣ ರಂಗದ ಶುದ್ಧೀಕರಣಕ್ಕೆ ಕೇಂದ್ರ ಸರ್ಕಾರ ನುರಿತ ಶಿಕ್ಷಣ ತಜ್ಞರ ನೆರವನ್ನು ಪಡೆಯುವುದು ಅಗತ್ಯ. ಕೇಂದ್ರ ಸರ್ಕಾರ ಆಧುನಿಕತೆಯನ್ನು ಎಲ್ಲ ರಂಗದಲ್ಲಿ ತರಲು ಹಲವು ಕ್ರಮಗಳನ್ನು ಕೈಗೊಂಡಿದೆ. ಶಿಕ್ಷಣ ರಂಗದಲ್ಲಿ ಮಾತ್ರ ಇನ್ನೂ ಭ್ರಷ್ಟಾಚಾರವನ್ನು ತೊಡೆದು ಹಾಕಲು ಸಾಧ್ಯವಾಗಿಲ್ಲ. ನೀಟ್ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಅಕ್ರಮಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿ ಇಡೀ ಭ್ರಷ್ಟ ವ್ಯವಸ್ಥೆಯನ್ನು ಮೂಲದಿಂದಲೇ ತೆಗೆದುಹಾಕುವುದು ಬಹಳ ಮುಖ್ಯ.


