Menu

ನೀಟ್‌ ಅಕ್ರಮ: ಸತ್ಯಾಸತ್ಯತೆಗೆ ನ್ಯಾಯಾಂಗ ತನಿಖೆಯೇ ಮಾರ್ಗ

ದೇಶದ ಯುವಜನತೆಯನ್ನು ಕಳವಳಕ್ಕೆ ತಳ್ಳಿದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವನ್ನು ಕೇಂದ್ರ ಸರ್ಕಾರವೀಗ ಸುಪ್ರೀಂಕೋರ್ಟ್ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ಸಮಕ್ಷಮದಲ್ಲಿ ಪ್ರತ್ಯೇಕ ತನಿಖೆಗೆ ಆದೇಶಿಸಲಿ. ಇಂತಹ ತನಿಖೆಗಳಿಂದ ಏನು ಫಲ ಎಂಬ ನಕಾರಾತ್ಮಕ ಧೋರಣೆ ಸರ್ಕಾರಕ್ಕೆ ಸಲ್ಲದು. ಸತ್ಯಾಸತ್ಯತೆ ಹೊರಗೆ ತೆಗೆಯದೆ ವಿದ್ಯಾರ್ಥಿಗಳಿಗೆ ಪರಮ ಅನ್ಯಾಯ ಎಸಗಿದ ವ್ಯಕ್ತಿಗಳನ್ನು ಸರ್ಕಾರ ಶಿಕ್ಷಿಸುವುದಾದರೂ ಹೇಗೆ ? ಈ ವಿಚಾರದಲ್ಲಿ ಮೋದಿ ಸರ್ಕಾರ ತನ್ನ ವಿವೇಚನೆಯನ್ನು ಕಳೆದು ಕೊಳ್ಳಬಾರದು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಆವೇದನೆ ಮತ್ತು ಆಕ್ರೋಗಳಿಗೆ ಬೆಲೆ ಇದೆ. ಪ್ರಜಾತಂತ್ರದ ನ್ಯಾಯ ಎಂದರೆ ಕೇವಲ ಮೆಜಾರಿಟಿ ಒಂದೇ ಅಲ್ಲ. ದೇಶದ ಸರ್ವೋನ್ನತ ಪ್ರಜಾಸದನವಾದ ಭಾರತೀಯ ಸಂಸತ್‌ನಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೊಂದೇ ಸರ್ಕಾರದ ಉದ್ದೇಶ ವಾದರೆ ಇದು ಅರ್ಥಹೀನ ಮತ್ತು ಬಾಲಿಶ. ಅಧಿಕಾರದ ಚುಕ್ಕಾಣಿ ಹಿಡಿದ ರಾಜಕೀಯ ಪಕ್ಷಕ್ಕೆ ಪ್ರಜಾತಂತ್ರದ ಹಿತಮಿತವೂ ಗೊತ್ತಿರಬೇಕು. ಇಲ್ಲಿ ಯಾವುದೂ ಅತಿಯಾದರೆ ಅದು ಸರ್ಕಾರಕ್ಕೇ ಮುಪ್ಪು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ದ ಈಗ ವಿಪಕ್ಷಗಳು ಮತ್ತು ವಿದ್ಯಾರ್ಥಿ ಸಮೂಹ ಸಿಡಿದೆದ್ದಿದೆ. ವಿದ್ಯಾರ್ಥಿಗಳ ಸಮೂಹ ತನ್ನ ಹಕ್ಕುಗಳಿಗಾಗಿ ಬೀದಿಗಿಳಿದಿದೆ. ಇವರ ಪರವಾಗಿ ಕಾಳಜಿ ಹೊಂದಿರುವ ಸಂಘ, ಸಂಸ್ಥೆಗಳು ಮತ್ತು ಸಂಘಟಕರು ಸರ್ಕಾರದ ವಿರುದ್ದ ಧ್ವನಿ ಎತ್ತಿದ್ದಾರೆ. ಆದರೆ ದೆಹಲಿಯಲ್ಲಿ ಪ್ರಧಾನಿ ನಿವಾಸದ ಮುಂದೆ ಧರಣಿ ಕುಳಿತ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ನಾಯಕರ ಮೇಲೆ ಪೊಲೀಸ್ ಬಲ ಪ್ರಯೋಗ ಮಾಡಿದ್ದು ಖಂಡನೀಯ. ರಾಹುಲ್‌ಗಾಂಧಿ ಸೇರಿದಂತೆ ಇನ್ನೂ ಕೆಲವು ರಾಷ್ಟ್ರೀಯ ನಾಯಕರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಖಟ್ಲೆ ಹೂಡಿದೆ. ಆದರೆ ಸರ್ಕಾರದ ಬಳಿ ಸರಿಯಾದ ಸಮಜಾಯಿಷಿ ಇದ್ದಲ್ಲಿ, ಇಂತಹ ಧರಣಿ ಮತ್ತು ಪ್ರತಿಭಟನೆಗಳನ್ನು ಪೊಲೀಸ್ ಬಲ ಪ್ರಯೋಗವಿಲ್ಲದೆ ಹತೋಟಿಗೆ ತರಲು ಸಾಧ್ಯ. ಆದರೆ ಇದಾವುದನ್ನೂ ಪರಿಗಣಿಸದ ಮೋದಿ ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿರುವುದು ದುರದೃಷ್ಟಕರ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಸರ್ಕಾರ ವಾಸ್ತವಿಕ ಸಂಗತಿಗಳಿಗೆ ತನ್ನ ಮೊದಲ ಆದ್ಯತೆ ನೀಡಬೇಕೇ ವಿನಹ ರಾಜಕೀಯ ವಿಷಯಗಳಿಗೆ ಅಲ್ಲ. ನೀಟ್ ವಿಚಾರದಲ್ಲಿ ಈ ದೇಶದ ಜನತೆಗೆ ಸತ್ಯಾಸತ್ಯತೆ ಕೂಡಾ ಸಕಾಲದಲ್ಲಿ ತಿಳಿಯಬೇಕಿದೆ ಮತ್ತು ಸರ್ಕಾರವು ಈ ವಿಷಯದಲ್ಲಿ ಎಲ್ಲವನ್ನೂ ಗೌಪ್ಯವಾಗಿಟ್ಟುಕೊಂಡು ಪಟ್ಟಭದ್ರರ ಹಿತ ಕಾಪಾಡುವ ಪ್ರವೃತ್ತಿ ಸರಿಯಿಲ್ಲ.

ಹೌದು. ನೀಟ್ ವಿಚಾರದಲ್ಲಿ ಕೆಲವೊಂದು ಗುರುತರವಾದ ತನಿಖೆಗಳು ನಡೆದಿವೆ. ಅಂದ ಮಾತ್ರಕ್ಕೆ ಇದು ಸಂಸತ್‌ನಲ್ಲಿ ಚರ್ಚೆ ಆಗಲೇ ಬಾರದೆಂಬುದಲ್ಲ. ಕೆಲವೊಂದು ವಿಚಾರಗಳಲ್ಲಿ ಸಬ್ ಜುಡೀಸ್ ಪರಿದಿಯಲ್ಲಿ ಇಲ್ಲದ ವಿಷಯಗಳನ್ನು ಸಂಸತ್ ಚರ್ಚಿಸಲು ಅಡ್ಡಿ ಇಲ್ಲ. ಹಾಗೆ ನೋಡಿದರೆ ಇಂದು ಸಂಸತ್ ಮುಂದೆ ಬರುವ ಬಹುತೇಕ ವಿಷಯಗಳು ಒಂದಲ್ಲ ಒಂದು ರೀತಿಯಲ್ಲಿ ಕೋರ್ಟ್ ಮುಂದೆ ವಿಚಾರಣೆಗೆ ಇರುವಂತಹದು. ಇಡೀ ಯುವಜನತೆಯನ್ನು ಕಳವಳಕ್ಕೆ ತಳ್ಳಿದ ಈ ವಿಚಾರವನ್ನು ಸರ್ಕಾರವೀಗ ಸುಪ್ರೀಂಕೋರ್ಟ್ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ಸಮಕ್ಷಮದಲ್ಲಿ ಪ್ರತ್ಯೇಕ ತನಿಖೆಗೆ ಆದೇಶಿಸಲಿ. ಇಂತಹ ತನಿಖೆಗಳಿಂದ ಏನು ಫಲ ಎಂಬ ನಕಾರಾತ್ಮಕ ಧೋರಣೆ ಸರ್ಕಾರಕ್ಕೆ ಸಲ್ಲದು. ಸತ್ಯಾಸತ್ಯತೆ ಹೊರಗೆ ತೆಗೆಯದೆ ವಿದ್ಯಾರ್ಥಿಗಳಿಗೆ ಪರಮ ಅನ್ಯಾಯ ಎಸಗಿದ ವ್ಯಕ್ತಿಗಳನ್ನು ಸರ್ಕಾರ ಶಿಕ್ಷಿಸುವುದಾದರೂ ಹೇಗೆ ? ಈ ವಿಚಾರದಲ್ಲಿ ಮೋದಿ ಸರ್ಕಾರ ತನ್ನ ವಿವೇಚನೆಯನ್ನು ಕಳೆದು ಕೊಳ್ಳಬಾರದು.

Related Posts

Leave a Reply

Your email address will not be published. Required fields are marked *