Saturday, September 05, 2026
Menu

ಸಿಜೆಪಿ ದೇಶದ್ರೋಹಿ ಸಂಘಟನೆ, ದೀಪ್ಕೆಗೆ ಪಾಕ್‌, ಬಾಂಗ್ಲಾ ಸಂಬಂಧವಿದೆ: ಆರ್‌ ಅಶೋಕ

ಕಾಕ್ರೋಚ್‌ ಜನತಾ ಪಾರ್ಟಿ ದೇಶದ್ರೋಹಿ ಸಂಘಟನೆ, ಅದರ ಮುಖ್ಯಸ್ಥ ಅಭಿಜಿತ್‌ ದೀಪ್ಕೆ ಪಾಕಿಸ್ತಾನ, ಬಾಂಗ್ಲಾದೇಶದ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾನೆ. ಅದರ ಜೊತೆಗೆ ಈಗ ರಾಹುಲ್‌ ಗಾಂಧಿ ಹೋಗಿದ್ದಾರೆ ಎಂದು ಪ್ರತಿಪಕ್ಷ ನಾಯಕ  ಆರ್‌ ಅಶೋಕ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಪ್ರತಿಭಟನೆ ನಡೆಯುತ್ತಿದೆ. ನೀಟ್‌ ನೆಪದಲ್ಲಿ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷ ಹೋರಾಟ ಮಾಡಿ ವಿದ್ಯಾರ್ಥಿಗಳ ಬಗ್ಗೆ ಹುಸಿ ಕಾಳಜಿ ತೋರಿಸುತ್ತಿದೆ. ಬೆಂಗಳೂರಲ್ಲಿ 11 ವಿದ್ಯಾರ್ಥಿಗಳು ಸತ್ತಾಗ ಈ ಕಾಳಜಿ ಇರಲಿಲ್ಲ. 11 ಯುವಜನರ ಸಾವಿಗೆ ಯಾರೂ ಕಾರಣರಲ್ಲ ಎಂದು ವರದಿ ಬಂದಿದೆ. ಹುಬ್ಬಳ್ಳಿಯಲ್ಲೂ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಲಾಗಿತ್ತು. ಆಗ ವಿದ್ಯಾರ್ಥಿಗಳ ಬಗ್ಗೆ ರಾಹುಲ್ ಗಾಂಧಿ ಕಾಳಜಿ ತೋರಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಟೀಕೆ ಮಾಡುವ ಯಾವುದೇ ಯೋಗ್ಯತೆ ಕಾಂಗ್ರೆಸ್‌ಗಿಲ್ಲ. ಪ್ರಧಾನಿ ನಿವಾಸದ ಮುಂದೆ ಪ್ರತಿಭಟನೆ ಮಾಡುವುದು ಒಳ್ಳೆಯ ಸಂಪ್ರದಾಯವಲ್ಲ ಎಂದು ಕಿಡಿ ಕಾರಿದ್ದಾರೆ.

ಮೋದಿ ಸರ್ಕಾರ ಅಧಿಕಾರದಲ್ಲಿ ಎಂಬಿಬಿಎಸ್‌ ಸೀಟುಗಳನ್ನು 51,000 ದಿಂದ 1.36 ಲಕ್ಷಕ್ಕೆ, ಪಿಜಿ ಸೀಟುಗಳನ್ನು 31,000 ದಿಂದ 1.17 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು.  ಅಮೆರಿಕದ ಹಣದಲ್ಲಿ ಪಾರ್ಟಿ ಆರಂಭಿಸಿ ಕೇಂದ್ರ ಸರ್ಕಾರದ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಲೋಕಸಭೆಯಲ್ಲಿ ಮಾತನಾಡಬೇಕಾದ ರಾಹುಲ್‌ ಗಾಂಧಿ ಬೀದಿಗೆ ಹೋಗಿ ನಾಟಕ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಅಕ್ರಮದ ವಿರುದ್ಧ ನಾನು ವಿಧಾನಸಭೆಯಲ್ಲಿ ಮಾತಾಡಿದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದರು.

ಶಿವಾಜಿನಗರದಲ್ಲಿ ಒತ್ತುವರಿ ತೆರವು ಮಾಡಲು ಹೋದ ಅಧಿಕಾರಿಗಳ ಮುಖಕ್ಕೆ ಪೆಪ್ಪರ್‌ ಸ್ಪ್ರೇ ಹಾಕಲಾಗಿದೆ. ಕಾನೂನು ಸುವ್ಯವಸ್ಥೆ ಈ ಮಟ್ಟಿಗೆ ಹಾಳಾಗಿದೆ. ಅವರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡುವುದಾಗಿ ಹೇಳಿದ್ದರೂ ಅದು ಸಾಧ್ಯವಾಗುವುದಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ 2,800 ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರತಿಪಕ್ಷ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬರ ಸಂಕಷ್ಟ ತಂದೊಡ್ಡಿದೆ. ಆದರೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು, ಶಾಸಕರು ದೆಹಲಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ಶೇ.80ರಷ್ಟು ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ರೈತರು ದನ-ಕರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ಸಿಎಂ ಮತ್ತು ಡಿಸಿಎಂ ಬೆಳೆ ಬೆಳೆಯಬೇಡಿ ಎನ್ನುತ್ತಿದ್ದಾರೆ. ಹಾಗಾದರೆ ರೈತರು ಏನು ಮಾಡಬೇಕು, ರೈತರಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಪರಿಹಾರ ನೀಡಲಾಗಿತ್ತು. ಈಗ ಸರ್ಕಾರ ಬರ ಘೋಷಣೆ ಮಾಡುವಲ್ಲಿ ಕೂಡ ವಿಳಂಬ ಮಾಡುತ್ತಿದೆ ಎಂದು ಟೀಕಿಸಿದರು.

ಬರ ನಿರ್ವಹಣೆಗೆ ಪ್ರತಿ ತಾಲೂಕಿಗೆ 20 ಕೋಟಿ ರೂ. ಬಿಡುಗಡೆ ಮಾಡಬೇಕು. ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಸಾಲಮನ್ನಾ ಘೋಷಿಸಬೇಕು. ಬೇರೆ ರಾಜ್ಯಗಳಿಗೆ ನೀರು ಬಿಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕೃಷಿ ಸಚಿವರು ಇಲ್ಲ, ತೋಟಗಾರಿಕೆ ಸಚಿವರು ಇಲ್ಲ. ಸಮೀಕ್ಷೆ ಮಾಡೋರು ಯಾರು, ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಬೇಕು ಅಂತಾರೆ. ರಾಜ್ಯ ಸರ್ಕಾರವೇ ವಿಪತ್ತು ಅಂತ ಘೋಷಣೆ ಮಾಡಿಲ್ಲ. ಕೇಂದ್ರ ಹೇಗೆ ಮಾಡುತ್ತದೆ ಎಂದು ಪ್ರಶ್ನಿಸಿದರು.

ಸಿಎಂ ದೆಹಲಿಯಲ್ಲಿದ್ದಾರೆ, ಎಲ್ಲರಿಗೂ ಈಗ ದೆಹಲಿ ಬೇಕು. ಪ್ರಿಯಾಂಕ್ ಖರ್ಗೆಆರ್‌ಎಸ್‌ಎಸ್‌ ಲೆಕ್ಕ ಕೊಡಿ ಅಂತಾರೆ, ಕಲಬುರಗಿಯಿಂದ ಗುಳೆ ಹೋಗ್ತಾ ಇದ್ದಾರೆ. ಅದರ ಲೆಕ್ಕ ಕೊಡಪ್ಪ ನೀನು ಎಂದು ವಾಗ್ದಾಳಿ ನಡೆಸಿದರು.

Related Posts

Leave a Reply

Your email address will not be published. Required fields are marked *