ಮಗನ ಸಾವಿನ ಸುದ್ದಿ ತಿಳಿದ ತಾಯಿ ಹೃದಯಾಘಾತದಿಂದ ಅಸು ನೀಗಿರುವ ಪ್ರಕರಣ ಗ್ವಾಲಿಯರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
33 ವರ್ಷದ ಎಂಜಿನಿಯರಿಂಗ್ ಪದವೀಧರ ಮನೀಶ್ ನೌಕರಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ತಾಯಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಮೃತನ ಸಹೋದರ ರಾತ್ರಿ ಮದುವೆ ಸಮಾರಂಭದಲ್ಲಿದ್ದಾಗ ಕಿರಿಯ ಸಹೋದರ ವಿಷ ಸೇವಿಸಿದ ಬಗ್ಗೆ ತಂದೆಯಿಂದ ಕರೆ ಬಂದಿತ್ತು. ಮನೆಗೆ ತಲುಪಿದಾಗ ರೂಮಿನ ಒಳಗಂಡೆಯಿಂದ ಚಿಲಕ ಹಾಕಿತ್ತು. ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿ ರೂಮಿಗೆ ನುಗ್ಗಿದಾಗ ಮನೀಶ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿತ್ತು ಎಂದು ಸಹೋದರ ಹೇಳಿದ್ದಾರೆ.
ಮೃತನ ತಾಯಿಗೆ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿಯುತ್ತಿದ್ದಂತೆ ಆಘಾತ ಸಹಿಸಲಾಗದೆ ಸಾವನ್ನಪ್ಪಿದ್ದಾರೆ ಎಂದು ಸಹೋದರ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ನೌಕರಿ ಪಡೆಯಲು ಸಾಕಷ್ಟು ಬಾರಿ ಪ್ರಯತ್ನ ಪಟ್ಟಿದ್ದ, ಆದರೆ ವಿಫಲವಾಗುತ್ತಿದ್ದ, ಇದು ಆತನನ್ನು ಆತ್ಮಹತ್ಯೆಗೆ ಪ್ರೇರೇಪಿಸಿತ್ತು.