ಎಸ್ಎಂ ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ಬರ ಪರಿಹಾರ ಕಾಮಗಾರಿಗಳ ನಿರ್ವಹಣೆಯಲ್ಲಿ ಕಂಡು ವ್ಯಾಪಕ ಅಕ್ರಮಗಳು ಕಂಡು ಬಂದಾಗ ಅಂದಿನ ಸರ್ಕಾರ ಅಂದಿನ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನೆರವು ಪಡೆದಿದ್ದರು. ಲೋಕಾಯುಕ್ತ , ಉಪಲೋಕಾಯುಕ್ತರ ಖುದ್ದು ಭೇಟಿಯಿಂದ ಬರ ಪರಿಹಾರ ಕಾಮಗಾರಿಗಳ ನಿರ್ವಹಣೆಯ ಮೇಲೆ ಸರ್ಕಾರ ನಿಗಾ ಇಡಲು ಸಾಧ್ಯ ಮತ್ತು ನಿಧಿಯ ಸಮರ್ಪಕ ಬಳಕೆಗೂ ಇದು ಸಹಾಯಕ.
ದೇಶದ ಹತ್ತು ರಾಜ್ಯಗಳಲ್ಲಿ ಬರದ ಛಾಯೆ. ಕರ್ನಾಟಕದಲ್ಲಿಯೂ ಬಹುತೇಕ ಜಿಲ್ಲೆಗಳಲ್ಲಿ ಅನಾವೃಷ್ಟಿಯ ದಟ್ಟ ನೆರಳು. ಬತ್ತಿದ ಜೀವಜಲ, ಕೆರೆ, ಕುಂಟೆ, ಕುಡಿಯುವ ನೀರಿಗೆ ತತ್ವಾರ. ಜಾನುವಾರು ಮೇವಿಗೂ ಸಂಕಷ್ಟ.
ಕಳೆದ ವಾರದಲ್ಲಿ ಕೇರಳದ ಸಮುದ್ರದ ತೀರದಲ್ಲಿ ಮುಂಗಾರು ಋತುವಿನ ಮಾರುತ ಕಾಣಿಸಿಕೊಂಡರೂ ಅದು ರಾಜ್ಯ ಪ್ರವೇಶಿಸುವ ವೇಳೆಗೆ ಅತಿ ದುರ್ಬಲವಾಗಿದ್ದು ಗಮನಾರ್ಹ. ರಾಷ್ಟ್ರೀಯ ಹವಾಮಾನ ಇಲಾಖೆಯ ತಜ್ಞರ ಪ್ರಕಾರ, ದೇಶದಲ್ಲಿ ಒಟ್ಟಾರೆ ಈ ಸಾರಿ ಶೇ . ೨೫ ರಿಂದ ೩೦ ರಷ್ಟು ಮಳೆಯ ಕೊರತೆ ಉಂಟಾಗಿದೆ.
ಸಕಾಲದಲ್ಲಿ ಮುಂಗಾರು ಆರಂಭವಾಗಿ ಇನ್ನೇನು ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಖರೀದಿಸಿರುವ ವೇಳೆ ವರುಣರಾಯನ ಅವಕೃಪೆಯಿಂದ ಮುಗಿಲತ್ತ ದಿಟ್ಟಿಸಿ ನೋಡುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಕಂದಾಯ, ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸುವ ಸಂಬಂಧ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರಮುಖ ಸಭೆಯೊಂದನ್ನು ನಡೆಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ತಲೆದೋರಲಿರುವ ಸಂಕಷ್ಟದ ಸನ್ನಿವೇಶನ್ನು ಸಮರೋಪಾದಿಯಲ್ಲಿ ನಿರ್ವಹಿಸುವ ಬಗ್ಗೆ ಮುಖ್ಯಮಂತ್ರಿ ಆಡಳಿತ ಯಂತ್ರಾಂಗಕ್ಕೆ ತಾಕೀತು ಮಾಡಿದ್ದಾರೆ.
ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರು ಮತ್ತು ಬರಪೀಡಿತ ಜನತೆಗೆ ಸರ್ಕಾರದಿಂದ ದೊರೆಯಬೇಕಿರುವ ಕೂಲಿಗಾಗಿ ಕಾಳು ಮತ್ತು ಭತ್ಯೆ ಇವುಗಳ ಸಮರ್ಪಕ ನಿರ್ವಹಣೆ ಅತಿ ಮುಖ್ಯ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈ ದಿಶೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿರುವ ತಾಲೂಕು ಮತ್ತು ಹೊಬಳಿಗಳಲ್ಲಿ ತೊಂದರೆಗೀಡಾದ ಗ್ರಾಮಗಳ ಪಟ್ಟಿಯನ್ನು ಸರ್ಕಾರ ಹೊಂದಿರಬೇಕಿದೆ. ಅಲ್ಲದೆ ಬರ ಪರಿಹಾರ ಕಾಮಗಾರಿಗಳ ಸಮರ್ಪಕ ನಿರ್ವಹಣೆಗೆ ಉಪಲೋಕಾಯುಕ್ತರ ನೆರವು ಪಡೆಯುವುದು ಲೇಸು. ಈ ಹಿಂದೆ ಎಸ್ ಎಂ ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ಬರ ಪರಿಹಾರ ಕಾಮಗಾರಿಗಳ ನಿರ್ವಹಣೆಯಲ್ಲಿ ಕಂಡು ವ್ಯಾಪಕ ಅಕ್ರಮಗಳು ಕಂಡು ಬಂದಾಗ ಅಂದಿನ ಸರ್ಕಾರ ಅಂದಿನ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನೆರವು ಪಡೆದಿದ್ದರು. ಲೋಕಾಯುಕ್ತ , ಉಪಲೋಕಾಯುಕ್ತರ ಖುದ್ದು ಭೇಟಿಯಿಂದ ಬರ ಪರಿಹಾರ ಕಾಮಗಾರಿಗಳ ನಿರ್ವಹಣೆಯ ಮೇಲೆ ಸರ್ಕಾರ ನಿಗಾ ಇಡಲು ಸಾಧ್ಯ ಮತ್ತು ನಿಧಿಯ ಸಮರ್ಪಕ ಬಳಕೆಗೂ ಇದು ಸಹಾಯಕ.
ಕೃಷ್ಣಾ ಮತ್ತು ಕಾವೇರಿ ಕಣಿವೆಗೂ ಈಗ ಬರದ ಬೇಗೆ ತಾಗುವುದು ಖಂಡಿತ. ಇದೇ ವೇಳೆ ತಮಿಳುನಾಡುವಿನಲ್ಲಿ ಕುರುವೈ ಬೆಳೆಯ ಹಂಗಾಮು. ಕಾವೇರಿ ನದಿ ನೀರಿಗಾಗಿ ತಮಿಳುನಾಡು ಮತ್ತೆ ಕರ್ನಾಟಕದ ಜೊತೆ ಕಾದಾಡುವುದು ನಿರೀಕ್ಷಿತ. ಕಳೆದ ಜಲವರ್ಷದಲ್ಲಿ ತಮಿಳುನಾಡಿಗೆ ಟಿಎಂಸಿಗಟ್ಟಳೆ ಹೆಚ್ಚುವರಿಯಾಗಿ ನೀರು ಹರಿದಿದೆ. ಈ ಹೆಚ್ಚುವರಿ ನೀರು ಹರಿದಿರುವುದು, ನೀರಿಲ್ಲದ ಬರದ ಸಮಯದಲ್ಲಿ ಕರ್ನಾಟಕಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ಯಾಕೆ ಆಗುತ್ತಿಲ್ಲ, ಸಂಕಷ್ಟ ಸೂತ್ರದಲ್ಲಿ ಈ ಅಂಶ ಚರ್ಚೆಯಾಗದಿರುವುದು ಸೋಜಿಗ. ಒಟ್ಟಿನಲ್ಲಿ ಡಿಕೆ ಸರ್ಕಾರ ಈ ಸಂಕಷ್ಡವನ್ನು ಅತಿ ಎಚ್ಚರಿಕೆಯಿಂದಲೇ ನಿಭಾಯಿಸುವುದು ಅನಿವಾರ್ಯವಾಗಿದೆ.


