ಜೂನ್ 21ರಂದು ನಡೆಯಲಿರುವ NEET-UG 2026ರ ಮರುಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ದಾರಿ ತಪ್ಪಿಸಲು ಸಂಘಟಿತ ವಂಚನೆ ಜಾಲಗಳು ಟೆಲಿಗ್ರಾಂ ಬಳಸುತ್ತಿವೆ ಎಂಬ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಆರೋಪ ಹಿನ್ನೆಲೆ ಕೇಂದ್ರ ಸರ್ಕಾರವು ಟೆಲಿಗ್ರಾಂ ಅನ್ನು ಬ್ಯಾನ್ ಮಾಡಿದೆ. ಭಾರತ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಂಸ್ಥೆಯು ದೆಹಲಿ ಹೈಕೋರ್ಟ್ಗೆ ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಿದೆ.
ಜೂನ್ 22ರವರೆಗೆ ಭಾರತದಲ್ಲಿ ಕಾರ್ಯಾಚರಣೆ ನಿರ್ಬಂಧಿಸಿರುವುದನ್ನು ಕಂಪನಿ ವಿರೋಧಿಸಿದೆ. ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ರಜಾಕಾಲದ ಪೀಠದ ಮುಂದೆ ವಕೀಲ ಮಾಧವ್ ಖೋಸ್ಲಾ ವಿಷಯವನ್ನು ತುರ್ತು ವಿಚಾರಣೆಗೆ ಪ್ರಸ್ತಾಪಿಸಿದರು.
ಈ ನಡುವೆ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ರಿಲಯನ್ಸ್ ಗ್ರೂಪ್ ಮತ್ತು ವಾಟ್ಸಾಪ್ ಭಾರತದಲ್ಲಿ ತಮ್ಮ ಟೆಲಿಗ್ರಾಮ್ ಅಪ್ಲಿಕೇಶನ್ ಮೇಲೆ ನಿಷೇಧ ಹೇರಲು ಲಾಬಿ ನಡೆಸಿದ್ದಾಗಿ ಅವರು ಹೇಳಿದ್ದಾರೆ.
ಪರೀಕ್ಷಾ ಮಂಡಳಿಯ ಲೋಪಳನ್ನು ಸರಿಪಡಿಸುವ ಬದಲು, ಶೈಕ್ಷಣಿಕ ಮತ್ತು ವೃತ್ತಿಪರ ಕೆಲಸಗಳಿಗಾಗಿ ಈ ಆ್ಯಪ್ ಬಳಸುತ್ತಿದ್ದ 15 ಕೋಟಿಗೂ ಹೆಚ್ಚು ಸಾಮಾನ್ಯ ಭಾರತೀಯ ಬಳಕೆದಾರರಿಗೆ ಸರ್ಕಾರ ಅನಗತ್ಯವಾಗಿ ತೊಂದರೆ ಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಕೇಂದ್ರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ. ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ BGP ಹೈಜಾಕಿಂಗ್ ಎಂಬ ತಂತ್ರದ ಮೂಲಕ ಟೆಲಿಗ್ರಾಮ್ನ ಸಂಪರ್ಕಕ್ಕೆ ಅಡ್ಡಿಪಡಿಸಲು ರಿಲಯನ್ಸ್ ಕಮ್ಯುನಿಕೇಷನ್ಸ್ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ನನಗೆ ಇದೇನು ಆಶ್ಚಯರ್ವಲ್ಲ, ಈ ನಡೆಯು ಸ್ಪರ್ಧಾತ್ಮಕ ಯುದ್ಧದ ಭಾಗವಾಗಿರಬಹುದು. ರಿಲಯನ್ಸ್ ಭಾಗಶಃ ವಾಟ್ಸಾಪ್ನ ಹಿಂದಿನ ಕಂಪನಿಯಾದ ಮೆಟಾದ ಒಡೆತನದಲ್ಲಿದೆ ಎಂದಿದ್ದಾರೆ. ಭಾರತದಲ್ಲಿ ಟೆಲಿಗ್ರಾಮ್ ವಿರುದ್ಧದ ಕ್ರಮಗಳ ಹಿಂದೆ ಇದೇ ಸಂಸ್ಥೆಗಳ ಕೈವಾಡವಿದೆ ಎಂದು ನೇರ ಆರೋಪ ಮಾಡಿದ್ದಾರೆ.
NEET-UG ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಂ ಬ್ಯಾನ್ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪೇಪರ್ ಲೀಕ್ ಮಾಫಿಯಾ ಪತ್ತೆ ಹಚ್ಚುವ ಬದಲು ಆ್ಯಪ್ ಬಳಸುವ ವಿದ್ಯಾರ್ಥಿಗಳಿಗೆ ಇನ್ನಷ್ಟು ತೊಂದರೆ ಕೊಡಲಾಗುತ್ತಿದೆ ಎಂದಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಟೆಲಿಗ್ರಾಂ ಬ್ಯಾನ್’ ಪೇಪರ್ ಲೀಕ್ಗಳನ್ನು ತಡೆಯಲು ಮೋದಿ ಸರ್ಕಾರದ ಹೊಸ ತಂತ್ರ. ಕಳ್ಳನನ್ನು ಹಿಡಿಯುವ ಬದಲು ಸಂತ್ರಸ್ತರ ಮನೆಗೆ ಬೀಗ ಹಾಕಿದಂತೆ ಎಂದು ವ್ಯಂಗ್ಯವಾಡಿದ್ದಾರೆ. ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಟೆಲಿಗ್ರಾಂನಲ್ಲಿ ನೋಟ್ಸ್, ಟೆಸ್ಟ್ ಸೀರೀಸ್, ಚರ್ಚೆಗಳು ಮತ್ತು ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದಾರೆ. ಈ ಸೌಲಭ್ಯವನ್ನು ಕಸಿದುಕೊಳ್ಳುವುದು ಪೇಪರ್ ಲೀಕ್ಗೆ ಪರಿಹಾರವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಅಷ್ಟಕ್ಕೂ ಈ ಕ್ರಮದಿಂದ ಏನೂ ಪ್ರಯೋಜನವಿಲ್ಲ. ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಗೊತ್ತು, ಪೇಪರ್ ಲೀಕ್ ಮಾಫಿಯಾಕ್ಕೂ ಇದು ತಿಳಿದಿದೆ. ಮುಂದಿನ ನಿಷೇಧ ಯಾರ ಮೇಲೆ, ವಾಟ್ಸಾಪ್ ಮೇಲೆಯೇ ಎಂದು ಕೇಳಿದ್ದಾರೆ. ಒಟ್ಟಿನಲ್ಲಿ ರೋಗದ ಮೂಲಕ್ಕೆ ಮಾತ್ರ ಯಾವುದೇ ಚಿಕಿತ್ಸೆ ಇಲ್ಲ, ಬೇರೆಲ್ಲ ನಾಟಕಗಳಿಗೆ ಕೊರತೆಯಿಲ್ಲ ಎಂದು ಟೀಕಿಸಿದ್ದಾರೆ.


