2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ತಾನೆಂದು ನಂಬಿಸಿ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ್ದ ಮಿಥುನ್ ಎಂಬಾತನನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಈ ವಂಚನಕ ಬಲೆಗೆ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಬಿದ್ದಿದ್ದಾರೆಂಬುದು ವಿಶೇಷ.
ಬಂಧಿತ ಆರೋಪಿ ಮಿಥುನ್ ತಾನು ರಾಷ್ಟ್ರೀಯ ಆರೋಗ್ಯ ಅಭಿಯಾನವಿಭಾಗದ ಮುಖ್ಯಸ್ಥ ಹಾಗೂ ಆರೋಗ್ಯ ಸೌಧದಲ್ಲಿ ಉನ್ನತ ಅಧಿಕಾರಿ ಎಂದು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರನ್ನು ನಂಬಿಸಿ ತಾನು ಐಎಎಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ. ಆಸ್ಪತ್ರೆಯಲ್ಲೇ ವೈದ್ಯರು ಮತ್ತು ನರ್ಸ್‌ಗಳ ಸಭೆ ನಡೆಸಿ ಎಲ್ಲರನ್ನೂ ಯಾಮಾರಿಸಿದ್ದ.
ಸರ್ಜನ್ ಮೂಲಕ ಪರಿಚಯವಾದ ಶ್ರೇಯಸ್ ಮೆಡಿಕಲ್ ಮಾಲೀಕ ಸತೀಶ್ ಎಂಬವರಿಗೆ 1.8 ಕೋಟಿ ರೂಪಾಯಿ ಮೌಲ್ಯದ ಔಷಧ ಸರಬರಾಜು ಟೆಂಡರ್ ಕೊಡಿಸುವುದಾಗಿ ಮಿಥುನ್ ನಂಬಿಸಿದ್ದ. ಇದಕ್ಕಾಗಿ ಶೇ 20 ಕಮಿಷನ್ ನೀಡಬೇಕೆಂದು ಒಪ್ಪಂದ ಮಾಡಿಕೊಂಡು, ಜಕ್ಕೂರು ಬಳಿ 36 ಲಕ್ಷ ರೂ. ಸೇರಿದಂತೆ ಒಟ್ಟು 41 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾನೆ.
ಬೆಂಗಳೂರಿನ ಡಿಸಿಪಿಯೊಬ್ಬರ ಹೆಸರನ್ನು ಬಳಸಲು ಹೋಗಿ ಅಮೃತಹಳ್ಳಿ ಪೊಲೀಸರಿಗೆ ಅನುಮಾನ ಹುಟ್ಟಿಸಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಣ್ಣ ಬಯಲಾಗಿದೆ. ತಾನು 10 ಲಕ್ಷ ಜನರಲ್ಲಿ ಪರೀಕ್ಷೆ ಬರೆದು ಪಾಸಾದ 900 ಅಧಿಕಾರಿಗಳಲ್ಲಿ ಒಬ್ಬ ಎಂದು ಸುಳ್ಳು ಹೇಳಿ ಸ್ವಾಮೀಜಿಗಳನ್ನೂ ನಂಬಿಸಿದ್ದ ಎನ್ನಲಾಗಿದೆ. ಪೊಲೀಸರು ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ಹಲವು ಆಸ್ಪತ್ರೆ ಮಾಲೀಕರಿಗೆ ಈತ ವಂಚಿಸಿರುವ ಅನುಮಾನ ವ್ಯಕ್ತವಾಗಿದೆ.


