ಬೆಂಗಳೂರಿನಲ್ಲಿ ಬುಡುಬುಡುಕೆಯವನೆಂದು ಹೇಳಿಕೊಂಡು ನಂಬಿಸಿದ ವ್ಯಕ್ತಿ, ಗರ್ಭಿಣಿಗೆ ‘ನಿಮ್ಮ ಮನೆಯಲ್ಲಿ ದೋಷವಿದೆ, ಸಾವಿನ ಕಂಟಕ ಇದೆ’ ಎಂದು ಹೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ಮೋಹನ್ ಎಂಬವರ ಮನೆಗೆ ಬುಡುಬುಡುಕೆಯವನ ವೇಷದಲ್ಲಿ ಬಂದ ವ್ಯಕ್ತಿ, ಅವರ ಪತ್ನಿ ಉಷಾ ಗರ್ಭಿಣಿಯಾಗಿರುವುದನ್ನು ಗಮನಿಸಿ ಮನೆಗೆ ದೋಷವಿದೆ ಎಂದು ನಂಬಿಸಿದ್ದಾನೆ. ಉಚಿತವಾಗಿ ಪೂಜೆ ಮಾಡುವುದಾಗಿ ಹೇಳಿ ಮನೆಯೊಳಗೆ ಬಂದಿದ್ದಾನೆ. ಪೂಜೆಗಾಗಿ ಕುಡಿಕೆಯಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಹಾಕುವಂತೆ ಹೇಳಿದ್ದಾನೆ. ಅದರಂತೆ ಉಷಾ ಕಿವಿಯೋಲೆ, ಉಂಗುರ ಸೇರಿದಂತೆ ಚಿನ್ನಾಭರಣವನ್ನು ಕುಡಿಕೆಯಲ್ಲಿ ಹಾಕಿದ್ದಾರೆ.
ನೀರು ತರುವ ನೆಪದಲ್ಲಿ ಕುಡಿಕೆಯನ್ನು ಬದಲಾಯಿಸಿದ ವಂಚಕ ಮತ್ತೊಂದು ವಸ್ತು ನೀಡಿ ಅದನ್ನು ಕೆರೆಗೆ ಬಿಟ್ಟು ಬರಲು ಹೇಳಿದ್ದಾನೆ. ದಂಪತಿ ಕೆರೆಗೆ ಬಿಟ್ಟು ಮನೆಗೆ ಮರಳುವಷ್ಟರಲ್ಲಿ 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ಆರೋಪಿ ಪರಾರಿಯಾಗಿದ್ದಾನೆ.
ದಂಪತಿ ಮೋಸ ಹೋಗಿರುವುದು ಗೊತ್ತಾಗಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ಶೂರೆನ್ಸ್ ಹಣಕ್ಕಾಗಿ ಚಿನ್ನದಂಗಡಿಗೆ ಕನ್ನ ಹಾಕಿದ ಮಾಲೀಕ
ಬೆಳಗಾವಿಯ ಖಡೇಬಜಾರ್‌ನಲ್ಲಿ ಇನ್ಶೂರೆನ್ಸ್ ಹಣದ ಆಸೆಗಾಗಿ ಚಿನ್ನದಂಗಡಿಗೆ ತಾನೇ ಕನ್ನ ಹಾಕಿ ಕಳ್ಳತನದ ಕತೆ ಕಟ್ಟಿದ್ದ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ವಿ.ಪಿ.ವೇರ್ಣೇಕರ್ ಆಂಡ್ ಸನ್ಸ್ ಚಿನ್ನದಂಗಡಿ ಮಾಲೀಕ ಕೃಷ್ಣಾನಂದ ವೇರ್ಣೇಕರ್ ಬಂಧಿತ ಆರೋಪಿ. 65.95 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ನಗದು ಹಣ ಕಳ್ಳತನವಾಗಿದೆ ಎಂದು ಖಡೇಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪ್ರಕರಣದ ತನಿಖೆಗೆ ಇಳಿದ ಪೊಲೀಸರು ದೂರು ನೀಡಿದ ಅಂಗಡಿ ಮಾಲೀಕನೇ ಆರೋಪಿ ಎಂದು ಪತ್ತೆ ಹಚ್ಚಿದ್ದಾರೆ.
ಕದ್ದ ಹಣ, ಚಿನ್ನಾಭರಣವನ್ನು ಆರೋಪಿ ತನ್ನದೇ ಸ್ಕೂಟಿ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ. ಆರೋಪಿಯಿಂದ 45,000 ರೂ. ಮೌಲ್ಯದ ಬೈಕ್, 62,60,990 ರೂ. ಮೌಲ್ಯದ 519.8 ಗ್ರಾಂ ಚಿನ್ನಾಭರಣ, 6000 ರೂ. ಮೌಲ್ಯದ 31 ಗ್ರಾಂ ಬೆಳ್ಳಿ ಆಭರಣ, 2,83010 ರೂ. ಹಣ ಸೇರಿ ಒಟ್ಟು 65.95 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


