Menu

ಡಿಜಿಟಲ್ ಅರೆಸ್ಟ್: ದಾವಣಗೆರೆಯ ನಿವೃತ್ತ ಪ್ರಾಂಶುಪಾಲರಿಗೆ 15 ಲಕ್ಷ ರೂ. ವಂಚನೆ

Cyber fraud

ದಾವಣಗೆರೆ  ನಗರದ ಎಸ್.ಎಸ್ ಲೇಔಟ್‌ನ ನಿವೃತ್ತ ಪ್ರಾಂಶುಪಾಲರೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡುವ ಮೂಲಕ ಸೈಬರ್ ವಂಚಕರು  15.12 ಲಕ್ಷ ರೂಪಾಯಿಗಳನ್ನು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಾರ್ಚ್ 25ರಂದು 79 ವರ್ಷದ ನಿವೃತ್ತ ಪ್ರಾಂಶುಪಾಲರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ. ತಾನು ‘ಮುಂಬೈ ಕಸ್ಟಮ್ಸ್ ಅಧಿಕಾರಿ’ ಎಂದು ಪರಿಚಯಿಸಿಕೊಂಡ.  “ನಿಮ್ಮ ಹೆಸರಿನ ಐಡಿ ಕಾರ್ಡ್ ಬಳಸಿ ಮುಂಬೈನ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿದೆ. ಈ ಖಾತೆಯ ಮೂಲಕ ಭಾರಿ ಪ್ರಮಾಣದ ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ” ಎಂದು ಬೆದರಿಸಿದ್ದಾನೆ.

ಪ್ರಕರಣದ ತನಿಖೆ ಮುಗಿಯುವವರೆಗೆ ನಿಮ್ಮನ್ನು ‘ಡಿಜಿಟಲ್ ಕಸ್ಟಡಿ’ಯಲ್ಲಿ ಇರಿಸಬೇಕಾಗುತ್ತದೆ ಎಂದು ನಂಬಿಸಿದ ವಂಚಕರು,  ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸಿದ್ದಾರೆ. “ತನಿಖೆಗೆ ಸಹಕರಿಸಲು ನೀವು ಭದ್ರತಾ ಠೇವಣಿಯಾಗಿ ಹಣವನ್ನು ಜಮಾ ಮಾಡಬೇಕು. ನೀವು ನಿರ್ದೋಷಿ ಎಂದು ಸಾಬೀತಾದ ನಂತರ ಈ ಹಣವನ್ನು ವಾಪಸ್ ಮಾಡಲಾಗುವುದು” ಎಂದು ಸುಳ್ಳು ಭರವಸೆ ನೀಡಿದ್ದಾರೆ.

ವಂಚಕರ ಮಾತನ್ನು ನಂಬಿದ ನಿವೃತ್ತ ಪ್ರಾಂಶುಪಾಲರು, ಮಾರ್ಚ್ 31ರಂದು ಹಂತ-ಹಂತವಾಗಿ ಒಟ್ಟು 15,12,000 ರೂಪಾಯಿಗಳನ್ನು ವಂಚಕರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಈ ವಿಷಯವನ್ನು ಯಾರಿಗೂ ತಿಳಿಸದಂತೆ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು.

ಹಣ ಕಳೆದುಕೊಂಡ ನಂತರ ಆತಂಕದಲ್ಲಿದ್ದ ನಿವೃತ್ತ ಪ್ರಾಂಶುಪಾಲರು, ಇತ್ತೀಚೆಗೆ ಪತ್ರಿಕೆಯಲ್ಲಿ ಇದೇ ಮಾದರಿಯ ವಂಚನೆಯ ಸುದ್ದಿಯನ್ನು ಓದಿದ್ದಾರೆ. ತಮಗೂ ಅಂತಹದ್ದೇ ಮೋಸ ನಡೆದಿದೆ ಎಂದು ಮನವರಿಕೆಯಾದ ತಕ್ಷಣ ಅವರು ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *