Saturday, November 28, 2026
Menu

ಸ್ಕ್ರೀನ್‌ಶಾಟ್ ಕಳಿಸಿದರೆ ಹಣ ಸಿಗುತ್ತೆ ಅಂತ ನಂಬಿದ ರೈತನಿಗೆ ಪಂಗನಾಮ: 13.78 ಲಕ್ಷ ದೋಚಿದ ಸೈಬರ್ ಕಳ್ಳರು

ಉದಯಕಾಲ ನ್ಯೂಸ್‌, ದಾವಣಗೆರೆ: ಆನ್‌ಲೈನ್ ಮೂಲಕ ಜನರನ್ನು ವಂಚಿಸಲು ಸೈಬರ್ ವಂಚಕರು ದಿನಕ್ಕೊಂದು ಹೊಸ ತಂತ್ರಗಳನ್ನು ಹೂಡುತ್ತಿದ್ದಾರೆ. ಇದೀಗ ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಕೆಲವು ಉತ್ಪನ್ನಗಳನ್ನು ವಿಶ್‌ಲಿಸ್ಟ್‌ನಲ್ಲಿಟ್ಟು ಸ್ಕ್ರೀನ್‌ಶಾಟ್ ತೆಗೆದು ಕಳುಹಿಸಿದರೆ ಸುಲಭವಾಗಿ ಹಣ ಗಳಿಸಬಹುದು ಎಂಬ ಹೊಸ ಬಲೆಯನ್ನು ವಂಚಕರು ಬೀಸಿದ್ದಾರೆ. ಈ ಆಸೆಗೆ ಬಿದ್ದ ದಾವಣಗೆರೆ ಗ್ರಾಮಾಂತರ ಭಾಗದ ರೈತರೊಬ್ಬರು ಸೈಬರ್ ವಂಚಕರ ಮಾತಿಗೆ ಮರುಳಾಗಿ ಬರೋಬ್ಬರಿ 13.78 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಟೆಲಿಗ್ರಾಂ ಮೆಸೇಜ್ ಮೂಲಕ ಶುರುವಾಯ್ತು ವಂಚನೆಯ ಜಾಲ

ದಾವಣಗೆರೆ ಗ್ರಾಮಾಂತರ ಪ್ರದೇಶದ ರೈತರೊಬ್ಬರ ಟೆಲಿಗ್ರಾಂ ( ಖಾತೆಗೆ ನೇಹಾ ಅಗರ್‌ವಾಲ್ ಎಂಬ ಹೆಸರಿನಿಂದ ಸಂದೇಶವೊಂದು ಬಂದಿತ್ತು. ಆನ್‌ಲೈನ್‌ನಲ್ಲಿ ಕೆಲವು ಉತ್ಪನ್ನಗಳನ್ನು ವಿಶ್‌ಲಿಸ್ಟ್‌ಗೆ ಸೇರಿಸಿ, ಅದರ ಸ್ಕ್ರೀನ್‌ಶಾಟ್ ತೆಗೆದು ಕಳುಹಿಸಿದರೆ ಉತ್ತಮ ಆದಾಯ ಗಳಿಸಬಹುದು ಎಂದು ನೇಹಾ ಅಗರ್‌ವಾಲ್ ನಂಬಿಸಿದ್ದಳು. ಒಂದು ಸ್ಕ್ರೀನ್‌ಶಾಟ್‌ಗೆ 50 ರೂಪಾಯಿಯಂತೆ ದಿನಕ್ಕೆ 30 ಸ್ಕ್ರೀನ್‌ಶಾಟ್ ಕಳುಹಿಸಿದರೆ ಪ್ರತಿದಿನ 1,500 ರೂಪಾಯಿ ಸಂಪಾದಿಸಬಹುದು ಎಂದು ಆಮಿಷವೊಡ್ಡಲಾಗಿತ್ತು.

ನಂಬಿಕೆ ಗಿಟ್ಟಿಸಲು ಆರಂಭದಲ್ಲಿ 5,146 ರೂ. ವರ್ಗಾವಣೆ!

ಸುಲಭವಾಗಿ ಹಣ ಗಳಿಸಬಹುದು ಎಂದು ನಂಬಿದ ರೈತ, ವಂಚಕರು ಕಳುಹಿಸಿದ ಉತ್ಪನ್ನಗಳನ್ನು ವಿಶ್‌ಲಿಸ್ಟ್‌ನಲ್ಲಿ ಹಾಕಿ ಸ್ಕ್ರೀನ್‌ಶಾಟ್ ಕಳುಹಿಸಲು ಒಪ್ಪಿಕೊಂಡರು. ಬಳಿಕ ನೇಹಾ ಅಗರ್‌ವಾಲ್ ರೈತನಿಗೆ ಒಂದು ವೆಬ್‌ಸೈಟ್ ಲಿಂಕ್ ಕಳುಹಿಸಿ, ಅದರಲ್ಲಿ ವೈಯಕ್ತಿಕ ಹಾಗೂ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡುವಂತೆ ಸೂಚಿಸಿದ್ದಳು. ರೈತ ಎಲ್ಲಾ ಮಾಹಿತಿಯನ್ನು ಅಪ್‌ಲೋಡ್ ಮಾಡಿದ ನಂತರ, ಸ್ಕ್ರೀನ್‌ಶಾಟ್ ಕಳುಹಿಸಿದ್ದಕ್ಕೆ ಪ್ರತಿಫಲವಾಗಿ ಮೊದಲ ಹಂತದಲ್ಲಿ ರೈತನ ಬ್ಯಾಂಕ್ ಖಾತೆಗೆ 5,146 ರೂಪಾಯಿಗಳನ್ನು ವಂಚಕರು ವರ್ಗಾವಣೆ ಮಾಡಿದ್ದರು.

ಖಾತೆಗೆ ಹಣ ಬಂದಿದ್ದನ್ನು ಕಂಡು ರೈತ ಸಂಪೂರ್ಣವಾಗಿ ವಂಚಕರ ಮಾತನ್ನು ನಂಬತೊಡಗಿದರು. ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು, ನೀವು ಸ್ವಲ್ಪ ಹಣ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ಪುಸಲಾಯಿಸಿದರು.

13.78 ಲಕ್ಷ ರೂಪಾಯಿ ದೋಚಿದ ಖದೀಮರು

ಹೆಚ್ಚಿನ ಲಾಭದ ಆಸೆಗೆ ಬಿದ್ದ ರೈತ, ವಂಚಕರು ಹೇಳಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 13.78 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ವಂಚಕರು ಕಳುಹಿಸಿದ್ದ ನಕಲಿ ವೆಬ್‌ಸೈಟ್ ಲಿಂಕ್‌ನಲ್ಲಿ ರೈತನ ಹೂಡಿಕೆ ಹಾಗೂ ಲಾಭ ಸೇರಿ ಒಟ್ಟು 15 ಲಕ್ಷ ರೂಪಾಯಿ ಜಮೆಯಾಗಿರುವಂತೆ ತೋರಿಸಲಾಗುತ್ತಿತ್ತು.

ಆದರೆ, ಈ 15 ಲಕ್ಷ ರೂಪಾಯಿಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಹಿಂಪಡೆಯಲು ರೈತ ಪ್ರಯತ್ನಿಸಿದಾಗ, ವಂಚಕರು ಮತ್ತೊಂದು ವರಸೆ ತೆಗೆದರು. ಹಣ ಬಿಡುಗಡೆಯಾಗಬೇಕಾದರೆ ನೀವು ಮೊದಲು 1.75 ಲಕ್ಷ ರೂಪಾಯಿ ತೆರಿಗೆ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ರೈತ, ಮತ್ತೆ 1.75 ಲಕ್ಷ ರೂ. ತೆರಿಗೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ ತಕ್ಷಣ ವಂಚಕರು ತಮ್ಮೆಲ್ಲಾ ಸಂಪರ್ಕವನ್ನು ಕಡಿದುಕೊಂಡು ಪರಾರಿಯಾಗಿದ್ದಾರೆ.

ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ವಂಚಕರು ಸಂಪರ್ಕ ಕಡಿತಗೊಳಿಸಿದ ಬಳಿಕ ತಾನು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗಿರುವುದು ರೈತನ ಅರಿವಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡ ರೈತ ದಾವಣಗೆರೆಯ ಸಿಇಎನ್ (CEN – ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ) ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು ವಂಚಕರ ಬ್ಯಾಂಕ್ ಖಾತೆ ಹಾಗೂ ಟೆಲಿಗ್ರಾಂ ವಿವರಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ಟೆಲಿಗ್ರಾಂ ಅಥವಾ ವಾಟ್ಸಾಪ್‌ನಲ್ಲಿ ಬರುವ ಇಂತಹ ‘ಪಾರ್ಟ್-ಟೈಮ್ ಜಾಬ್’ ಅಥವಾ ‘ಸ್ಕ್ರೀನ್‌ಶಾಟ್ ಟಾಸ್ಕ್’ ಆಮಿಷಗಳಿಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಬಲಿಯಾಗಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

#CyberCrime #DavanagereNews #OnlineScam #ScreenshotScam #TelegramFraud #CyberSecurity #KarnatakaNews #FarmerScam #DigitalFraud #UdayakalaNews

Related Posts

Leave a Reply

Your email address will not be published. Required fields are marked *