“ಬಿಡದಿ ಟೌನ್ ಶಿಪ್ ವಿಚಾರವಾಗಿ ಕುಮಾರಸ್ವಾಮಿ ಅವರು ಪಂಥಾಹ್ವಾನ ಕರೆದಿದ್ದಾರಂತೆ. ಅವರ ಪಂಥಾಹ್ವಾನವನ್ನು ನಾನು ಸ್ವೀಕರಿಸುವೆ. ನನಗೆ ಮೂರು ದಿನ ಸಮಯ ಸಾಕು. ಯಾವತ್ತು ಸಮಯ ನಿಗದಿ ಮಾಡುವಿರೋ ನಾನು ಅಂದು ತಯಾರಿದ್ದೇನೆ. ಜಾಗ ಹಾಗೂ ಸಮಯ ಅವರೇ ನಿಗದಿ ಮಾಡಲಿ. ಕುಮಾರಸ್ವಾಮಿ ಜೊತೆ ದೇವೇಗೌಡರೂ ಬರಲಿ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೇವೇಗೌಡರು ಬಿಡದಿ ಯೋಜನೆ ವಿರುದ್ಧ ಹೋರಾಟ ಮಾಡುತ್ತೇನೆ ಹಾಗೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವೆ ಎಂದು ಹೇಳಿದ ಬಗ್ಗೆ ಕೇಳಿದಾಗ, “ದೇವೇಗೌಡರು ಮೋದಿಯವರಿಗೆ, ಅವರ ಬೇರೆ ನಾಯಕರಿಗೆ ಪತ್ರ ಬರೆಯಬೇಕು. ನಮ್ಮ ನಾಯಕರಿಗೆ ಪತ್ರ ಬರೆದರೆ ಏನು ಪ್ರಯೋಜನ. ರಾಹುಲ್ ಗಾಂಧಿ ಅಧಿಕಾರದಲಿಲ್ಲ. ಅವರು ಯಾಕೆ ಇದಕ್ಕೆಲ್ಲಾ ಬಾಯಿ ಹಾಕಬೇಕು. ದೇವೇಗೌಡರು ಏಕೆ ಏನೂ ಮಾಡಲು ಆಗಲಿಲ್ಲ” ಎಂದರು.
ಸರ್ಕಾರಿ ಗೃಹ ಕಚೇರಿ ಕುಮಾರಪಾರ್ಕ್ ನಲ್ಲಿ ಶಿವಕುಮಾರ್ ಬಿಡದಿ ಟೌನ್ ಶಿಪ್ ಯೋಜನೆ ಕುರಿತು ಆ ಭಾಗದ ರೈತರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಈ ಸಭೆಯಲ್ಲಿ ಭಾಗವಹಿಸಿದ ರೈತರು ನಮಗೆ ಪರಿಹಾರದ ಜತೆಗೆ ನಿವೇಶನವನ್ನು ನೀಡಿ ಎಂದು ಬೇಡಿಕೆ ಇಟ್ಟರು. ರೈತರ ಎಲ್ಲಾ ಅಹವಾಲುಗಳನ್ನು ಆಲಿಸಿದ ಶಿವಕುಮಾರ್ ಕಾನೂನು ರೀತಿ ಹೇಗೆ ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು. ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷರ ಒತ್ತಡಕ್ಕೆ ಮುಖ್ಯಮಂತ್ರಿಯವರು ಮಣಿಯಬಾರದು. ರಿಯಲ್ ಎಸ್ಟೇಟ್ ಮಾಫಿಯಾ ಎನ್ನುವ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ರಿಯಲ್ ಎಸ್ಟೇಟ್ ಮಾಫಿಯಾ ಮಾಡಿದವರು ಯಾರು, ಡಿಎಲ್ ಎಫ್ ಗೆ ಮಾರಿದವರು ಯಾರು, ಅವರ ಮಗ ಪಂಥಾಹ್ವಾನ ನೀಡಿದ್ದಾರಲ್ಲವೇ ಅವರ ಜೊತೆ ಇವರೂ ಚರ್ಚೆಗೆ ಬರಲಿ” ಎಂದು ಪ್ರತಿಕ್ರಿಯಿಸಿದರು. ನಿಮ್ಮ ಬಗ್ಗೆ ದೇವೇಗೌಡರು ಆರೋಪ ಮಾಡಿದ್ದಾರೆ ಎಂದು ಮರುಪ್ರಶ್ನಿಸಿದಾಗ, “ಆರೋಪ ಮಾಡಲಿ. ನಮ್ಮ ಸಿದ್ದರಾಮಯ್ಯ ಅವರ ಬಗ್ಗೆಯೂ ಬಹಳ ಪ್ರೀತಿ ತೋರಿಸುತ್ತಿದ್ದಾರೆ” ಎಂದರು.
ಬಿಡದಿ ಟೌನ್ ಶಿಪ್ ಗೆ ಜಮೀನು ನೀಡಿರುವ ರೈತರಿಗೆ ಜೂನ್ ಮೊದಲನೇ ವಾರದಿಂದ ಪರಿಹಾರದ ಹಣ ಬಿಡುಗಡೆಗೆ ಕ್ರಮವಹಿಸುತ್ತೇನೆ. ಮೂರು, ಮೂರು ಹಳ್ಳಿಗಳನ್ನು ಸೇರಿಸಿ ಪ್ರತ್ಯೇಕವಾದ ಅಂತಿಮ ಹಂತದ ನೋಟಿಫಿಕೇಶನ್ ಮಾಡಬೇಕು ಎಂದು ನಾವು ತೀರ್ಮಾನ ಮಾಡಿದ್ದೇವೆ. ಬಿದಡಿ ಟೌನ್ ಶಿಪ್ ವಿಚಾರವಾಗಿ ಅಲ್ಲಿನ ಶೇ.80 ರಷ್ಟು ರೈತರು ಒಪ್ಪಿಗೆ ನೀಡಿದ್ದು. ಆದಷ್ಟು ಬೇಗ ಪರಿಹಾರ ವಿತರಿಸಿ ಎಂದು ಒತ್ತಾಯ ಮಾಡಿದ್ದಾರೆ. ಭೂ ರಹಿತರ ಬಗ್ಗೆ ಕಾಳಜಿ ವಹಿಸಿದ್ದು ಈ ವಿಚಾರ ಬಗೆಹರಿಸಲಾಗುವುದು ಎಂದರು.
ಕುಮಾರಸ್ವಾಮಿ ಅವರ ಕಾಲದಲ್ಲೇ ನೋಟಿಫಿಕೇಷನ್ ಮಾಡಲಾಗಿತ್ತು. ಅವರ ಕಾಲದಲ್ಲೇ ಎಂಟು ಸಾವಿರ ಅಡಿ ಕೊಡಬೇಕೆಂದು ತೀರ್ಮಾನ ಮಾಡಲಾಗಿತ್ತು. ಈ ಯೋಜನೆಯನ್ನು ಡಿಎಲ್ ಎಫ್ ಕಂಪೆನಿಗೆ ನೀಡಿದ್ದರು. ಆ ಕಂಪೆನಿ ಈ ಯೋಜನೆ ನಮಗೆ ಕಾರ್ಯಸಾಧು ಇಲ್ಲವೆಂದು ಹಣವನ್ನು ವಾಪಸ್ ತೆಗೆದುಕೊಂಡು ಹೋಗಿದೆ. ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರು ಇದ್ದಂತಹ ಕಾಲದಲ್ಲಿ ಕೆಐಡಿಬಿಯವರು 1 ಸಾವಿರ ಎಕರೆ ತೆಗೆದುಕೊಂಡಿದ್ದರು. ಆಗ ರೈತರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದಾಗ. ನಾನೇ ಮಾಡಿಸಿದ್ದು ಈಗ ಏನು ಮಾಡೋಕೆ ಆಗಲ್ಲ ಎಂದರಂತೆ ಎಂದು ಹೇಳಿದರು.
“ಈ ಪ್ರದೇಶವನ್ನು ರೆಡ್ ಜೋನ್ ಎಂದು ತೀರ್ಮಾನ ಮಾಡಲಾಗಿತ್ತು. ಅಂದರೆ ಯಾರು ಸಹ ಭೂಮಿ ಮಾರುವಂತಿಲ್ಲ. ಬೇರೆ ಯಾರಿಗೂ ಕೂಡ ವಹಿವಾಟು ಮಾಡುವಂತಿಲ್ಲ ಎಂದು ಕಾನೂನು ಮಾಡಲಾಗಿತ್ತು. ಈ ಯೋಜನೆ ಕೈ ಇಡಬೇಕು ಎಂದು ಕೆಲವರು ನ್ಯಾಯಲಯಕ್ಕೂ ಅರ್ಜಿ ಹಾಕಿಕೊಂಡಿದ್ದರು. ಆದರೆ ನ್ಯಾಯಲಯ ಕೂಡ ಯೋಜನೆ ಕೈ ಬಿಡಲು ನಿರಾಕರಿಸಿತ್ತು. ಈ ಕಾರಣಕ್ಕೆ ನಾನು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮುಂದುವರೆಸುತ್ತಿದ್ದೇನೆ. ಸ್ವಲ್ಪ ಹೆಚ್ಚಿನ ಪರಿಹಾರ ಕೊಟ್ಟಿದ್ದೇನೆ. ಜೊತೆಗೆ ಅವರೆಲ್ಲರೂ ನಮ್ಮನ್ನು ಬೆಂಗಳೂರಿನವರು ಎಂದು ಗುರುತಿಸಿ ಆ ಜಿಲ್ಲೆಗೆ ಸೇರಿಸಿದ್ದೀರಿ ಎಂದು ಸಂತೋಷಗೊಂಡಿದ್ದಾರೆ. ಮೊದಲಿಗೆ ಇದ್ದಂತಹ ಬೆಂಗಳೂರು ಜಿಲ್ಲೆಯನ್ನು ಉಳಿಸಿದ್ದೀರಿ ಎಂದು ಸಂತಸಗೊಂಡಿದ್ದಾರೆ. ಯಾವ ರೈತರೂ ಸಹ ಭೂಮಿ ಮಾರಿಕೊಳ್ಳಬೇಡಿ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ಏಕೆಂದರೆ ನಿಮಗೆಲ್ಲರಿಗೂ ಇದರ ಬೆಲೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದೇನೆ. ಎಲ್ಲರೂ ಸಹ ಇದಕ್ಕೆ ಒಪ್ಪಿಕೊಂಡಿದ್ದಾರೆ” ಎಂದರು.
ಕನಕಪುರ ರಸ್ತೆ, ಮೈಸೂರು- ಬೆಂಗಳೂರು ರಸ್ತೆ, ನೈಸ್ ರಸ್ತೆಯನ್ನು ಇದಕ್ಕೆ ಸಂಪರ್ಕಿಸಲಾಗುವುದು. ಭವಿಷ್ಯದಲ್ಲಿ ಪ್ರೀಮಿಯಂ ಎಫ್ ಎಆರ್ ಕೂಡ ನೀಡಲಾಗುವುದು. ಎಐ ನಗರ ಹೇಗಿರಲಿದೆ ಎಂದು ವಿದೇಶಿಗರು ನಮ್ಮನ್ನು ಕೇಳುತ್ತಿದ್ದಾರೆ. ಈ ಯೋಜನೆ ಜಾರಿಗೆ ಅಗತ್ಯವಿರುವ ಭೂಮಿ ನಮ್ಮ ಕೈಸೇರಿದ ಬಳಿಕ ನಾವು ಈ ಯೋಜನೆಯ ನೀಲನಕ್ಷೆ ಪ್ರಕಟಿಸುತ್ತೇವೆ”ಎಂದರು.
ಕಬ್ಬಿಣ, ಸ್ಟೀಲ್ ಬೆಲೆ ಟನ್ ಗೆ ಐದು ಸಾವಿರ ಹೆಚ್ಚಳವಾಗಿದೆ. ಬಡವರು ಮನೆ ಕಟ್ಟಲು ಆಗುತ್ತಿಲ್ಲ. ಕಬ್ಭಿಣ, ಸಿಮೆಂಟ್ ಬೆಲೆ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಳವಾಗಿದೆ. ಕುಮಾರಣ್ಣನವರೇ ಇದರ ಸಚಿವರು. ಇದನ್ನು ಮೊದಲು ಇದನ್ನು ಕಡಿಮೆ ಮಾಡಿಸಲು ಹೇಳಿ. ಆನಂತರ ಪಂಥಾಹ್ವಾನಕ್ಕೆ ಕುಮಾರಸ್ವಾಮಿ ಅವರು ಬರಲಿ ಎಂದು ರೈತರು ನನಗೆ ಸಲಹೆ ನೀಡಿದರು. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದ ಮೇಲೆ ಇದರ ಬೆಲೆಯೂ ಜಾಸ್ತಿಯಾಗಲಿದೆ. ಮೊದಲು ನೀವು ಕುಮಾರಸ್ವಾಮಿ ಅವರನ್ನು ಇದರ ಬಗ್ಗೆ ಪ್ರಶ್ನಸಿ ಎಂದು ರೈತರು ನನಗೆ ಹೇಳಿದರು ಎಂದು ಶಿವಕುಮಾರ್ ತಿಳಿಸಿದರು.
ನೀವು ಶಕ್ತಿವಂತರು ಎಂದು ಮಾಧ್ಯಮದವರು ಹೇಳಿದಾಗ, ಈ ಮೊದಲೂ ಅವರ ಆಹ್ವಾನವನ್ನು ಸಾತನೂರಿನಲ್ಲಿ ಸ್ವೀಕಾರ ಮಾಡಿದ್ದೇನೆ. ಈಗಲೂ ಗೌರವ, ನಮ್ರತೆಯಿಂದ ತಯಾರಿದ್ದೇನೆ. ಯಾವುದೇ ಅಸಂಬದ್ದ ಪದಗಳನ್ನು ಉಪಯೋಗಿಸದೇ ನಾನು ಮಾತನಾಡುತ್ತೇನೆ. ಮಾಧ್ಯಮದವರೂ ಇದಕ್ಕೆ ತಯಾರಾಗಿ. ಮಾಗಡಿ ಶಾಸಕರಾದ ಬಾಲಕೃಷ್ಣ ಅವರೂ ಬರುತ್ತೇನೆ ಎಂದಿದ್ದಾರೆ ಎಂದರು.
136 ಜನ ಶಾಸಕರಿದ್ದರೂ ಏನು ಹರಿದಿದ್ದೀರಿ ಎನ್ನುವ ನಿಖಿಲ್ ಕುಮಾರಸ್ವಾಮಿ ಅವರ ಟೀಕೆಯ ಬಗ್ಗೆ ಕೇಳಿದಾಗ, “ಆ ಹುಡುಗನಿಗೆ ನಾನು ಉತ್ತರ ಕೊಡುವುದಕ್ಕೆ ಇಷ್ಟವಿಲ್ಲ. ಆತನಿಗೆ ಉತ್ತರ ಕೊಡಲು ಸ್ಥಳೀಯ ನಾಯಕರಿದ್ದಾರೆ. ಅವರ ಸ್ಟೇಟಸ್ ಏನು, ನನಗೆ ಗೊತ್ತಿಲ್ಲ. ಪಕ್ಷದ ಅಧ್ಯಕ್ಷರಾದ ಮೇಲೆ ಉತ್ತರ ನೀಡಬಹುದು ಎಂದು ಉತ್ತರಿಸಿದರು.
ಈ ಹಿಂದೆ ದೇವೇಗೌಡರು ನರೇಂದ್ರ ಮೋದಿ ಗೆದ್ದರೆ ದೇಶ ಬಿಡುತ್ತೇನೆ ಎಂದಿದ್ದರು. ಆಗ ನರೇಂದ್ರ ಮೋದಿಯವರು ಬೇಡ, ನಮ್ಮ ಮನೆಯಲ್ಲೇ ಜಾಗ ಕೊಡುತ್ತೇನೆ ಎಂದು ಕರೆದಿದ್ದರು. ಹೀಗಾಗಿ ಅವರ ಮಾತನ್ನೆಲ್ಲಾ ನಾವು ಗಂಭೀರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೆ. ಈಗ ರಾಜ್ಯಸಭಾ ಸದಸ್ಯರು ಆಗಬೇಕಲ್ಲವೇ ಎಂದು ತಿರುಗೇಟು ನೀಡಿದರು.
ದೇವೇಗೌಡ ಕುಟುಂಬದವರು ಇಲ್ಲಿ ೨೦೦ ಎಕರೆ ಜಮೀನು ಖರೀದಿ ಮಾಡಿದ್ದಾರೆ. ಬಿಎಂಐಸಿಪಿ ವ್ಯಾಪ್ತಿಯಲ್ಲಿ ದೇವಗೆರೆ ಹಾಗೂ ಕೇತಗಾನಹಳ್ಳಿಯನ್ನು ಸೇರಿಸಿಕೊಂಡಿದ್ದಾರೆ. ದೇವಗೆರೆಯಲ್ಲಿ ಹಾಗೂ ಕೇತಗಾನಹಳ್ಳಿಯಲ್ಲಿರುವ ಅವರ ಜಮೀನು ಬಿಎಂಐಸಿಪಿ ಯೋಜನೆ ವ್ಯಾಪ್ತಿಯಲ್ಲಿ ಬರಬೇಕು, ಆದರೆ ಭೂಸ್ವಾಧೀನ ಮಾತ್ರ ಆಗಬಾರದು ಎಂದರೆ ಹೇಗೆ, ಅಲ್ಲಿ 38 ಎಕರೆ ಜಾಗವನ್ನು ಬೇರೆಯವರ ಹೆಸರಿನಲ್ಲಿ ಪಡೆದು, ಈಗ ಪರಿಹಾರವನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ತಿಳಿಸಿದರು.
ಈ ಯೋಜನೆ ಕೈಬಿಡುವುದಾದರೇ ಕುಮಾರಸ್ವಾಮಿಯವರೇ ಡಿನೋಟಿಫಿಕೇಶನ್ ಮಾಡಬಹುದಿತ್ತಲ್ಲವೇ? ಬಿಜೆಪಿ ಸರ್ಕಾರದಲ್ಲಿ 900 ಎಕರೆಯನ್ನು ಕೆಐಎಡಿಬಿಗೆ ಜಮೀನು ನೀಡಿದಾಗ ಅವರು ಯಾಕೆ ಮಾತನಾಡಲಿಲ್ಲ” ಎಂದು ಪ್ರಶ್ನಿಸಿದರು.
ನಾವು ಈ ಜಿಲ್ಲೆಯಲ್ಲಿ ನಾಲ್ಕು ತಾಲೂಕಿಗೆ ನಾಲ್ಕು ಮೆಡಿಕಲ್ ಕಾಲೇಜು ಬರುವಂತೆ ಮಾಡಿದ್ದೇವೆ. ಬಿಡಿಎ 3 ಸಾವಿರ ಕೋಟಿ ಬಂಡವಾಳ ಹಾಕಿದ್ದು, ಇದಕ್ಕೆ ಗ್ರೇಟರ್ ಬೆಂಗಳೂರು ಸಮಗ್ರ ಟೌನ್ ಶಿಪ್ ಎಂದು ಹೆಸರು ಇಡಲಾಗಿದೆ. ಏನೇ ಮಾಡಿದರೂ ನೈಸ್ ರಸ್ತೆ ನಿಲ್ಲಿಸಲು ಆಗುವುದಿಲ್ಲ, ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹುಡ್ಕೋ ಅವರು 12 ಸಾವಿರ ಕೋಟಿ ನೀಡಲಿದ್ದಾರೆ ಎಂದು ತಿಳಿಸಿದರು.
ನೀವು ಸಾಧ್ಯವಾದಷ್ಟು ನಿಮಗೆ ಸಿಗುವ ಜಮೀನು ಉಳಿಸಿಕೊಳ್ಳಿ. ನಿಮಗೆ ಒಂದೇ ಕಡೆ ಜಮೀನು ನೀಡಲು ಮುಂದಾಗಿದ್ದೇವೆ. ನೀವು ಮುಂದೆ ಪ್ರೀಮಿಯಂ ಎಫ್ಎಆರ್ ಬಂದರೆ ನಿಮಗೆ ಹೆಚ್ಚಿನ ಲಾಭವಾಗುತ್ತದೆ. ಇಲ್ಲಿಗೆ ಮೆಟ್ರೋ ಸಂಪರ್ಕ ನೀಡಬೇಕು ಎಂದು ಬಾಲಕೃಷ್ಣ ಅವರು ಕೇಳಿದ್ದು, ಇದಕ್ಕೆ ಸರ್ವೇ ಮಾಡಲಾಗುತ್ತಿದೆ. ಇನ್ನು ಈ ಪ್ರದೇಶವನ್ನು ಬಿಡ್ಬ್ಲ್ಯೂಎಸ್ಎಸ್ ಬಿ ವ್ಯಾಪ್ತಿಗೆ ಸೇರಿಸಲಾಗಿದ್ದು, ಬೆಂಗಳೂರು ಜಲಮಂಡಳಿ ಇಲ್ಲಿಗೆ ನೀರು ಒದಗಿಸಲಿದೆ. 40 ಕಿ.ಮೀ ಉದ್ದದ ರಸ್ತೆ ಸಂಪರ್ಕ ಕಲ್ಪಿಸಲಾಗುವುದು. ಜೂನ್ 30ರ ಒಳಗೆ ಎಲ್ಲಾ ಅಧಿಸೂಚನೆ ಹೊರಡಿಸಲಾಗುವುದು. ಜೂನ್ 30ರ ಒಳಗೆ ಒಪ್ಪಿಗೆ ಕೊಡುವವರಿಗೆ ಪೂರ್ಣಪ್ರಮಾಣದ ಪರಿಹಾರ ನೀಡುತ್ತೇವೆ, ಒಪ್ಪಿಗೆ ನೀಡದವರಿಗೆ ಕೋರ್ಟ್ ನಲ್ಲಿ ಠೇವಣಿ ಇಟ್ಟು ಕೆಲಸ ಮುಂದುವರಿಸುತ್ತೇವೆ ಎಂದು ತಿಳಿಸಿದರು.


