ರಾಜ್ಯ ಸರ್ಕಾರ ಬಸ್ ಟಿಕೆಟ್ ದರ ಏರಿಕೆ ಮಾಡಿರುವುದರ ವಿರುದ್ಧ ವಿಧಾನಸಭೆ ಪ್ರತಿಪಕ್ಷದ ನಾಯಕಆರ್. ಅಶೋಕ್ ಹಾಗೂ ಬಿಜೆಪಿ ನಾಯಕರು ಮೆಜೆಸ್ಟಿಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಅಶೋಕ್ ಅವರು ಪ್ರಯಾಣಿಕರಿಗೆ ಹೂ ನೀಡಿ ರಾಜ್ಯ ಸರ್ಕಾರ ಬಸ್ ಟಿಕೆಟ್ ದರ ಏರಿಸಿರುವುದನ್ನು ಖಂಡಿಸಿದರು. ಕೆಂಪೇಗೌಡ ಬಸ್ ನಿಲ್ದಾಣದೊಳಗೆ ಪ್ರವೇಶಿಸಿಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಆಗ ಅಶೋಕ್ ಸೇರಿದಂತೆ ಪ್ರತಿಭಟನಾಕಾರರ ಮಧ್ಯೆ ವಾಗ್ಯುದ್ಧ ನಡೆಯಿತು. ಪ್ರತಿಕ್ರಿಯಿಸಿದ ಆರ್ . ಅಶೋಕ್, ನಮ್ಮನ್ನು ತಡೆದರೆ ಕೋರ್ಟ್‌ಗೆ ಹೋಗುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದರು. ಇದೇ ವೇಳೆ ಕರ್ತವ್ಯ ನಿರತ ಪೊಲೀಸರಿಗೆ ಅಶೋಕ್ ಬೆದರಿಕೆ ಕೂಡ ಒಡ್ಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿದೆ, ಈಗ ಬಸ್ ದರ 15% ಏರಿಕೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ದಿನಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ ಕನ್ನಡಿಗರ ರಕ್ತ ಹೀರುತ್ತಿದ್ದಾರೆ. ಸರ್ಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ, ಶುಲ್ಕ ತೆರಬೇಕು ಎಂದು ಪ್ರಶ್ನಿಸಿದರು. ಸರ್ಕಾರ ಮಾಡಿರುವ ತಪ್ಪಿಗೆ ನಾವು ಕ್ಷಮೆ ಕೇಳುತ್ತಿದ್ದೇವೆ ಎಂದು ಹೇಳಿ ಅಶೋಕ್ ಅವರು ಪ್ರಯಾಣಿಕರಿಗೆ ಹೂ ನೀಡಿದರು.